ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿಶೇಷ ಉಪಯೋಜನೆ (ಎಸ್‌ಸಿಪಿ, ಟಿಎಸ್‌ಪಿ)ಯ ಅನುಷ್ಠಾನ ಮತ್ತು ಫಲಿತಾಂಶದ ಬಗ್ಗೆ ಸಮಗ್ರ ಮೌಲ್ಯಮಾಪನ ನಡೆಸಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ|ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಎಸ್‌ಸಿಪಿ, ಟಿಎಸ್‌ಪಿ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಆರೋಗ್ಯ ವಂಚಿತ ಸಮುದಾಯಗಳನ್ನು ಮೇಲಕ್ಕೆತ್ತಿ, ಮುಖ್ಯವಾಹಿನಿಗೆ ತರುವುದು ಇದರ ಉದ್ದೇಶವಾಗಿದೆ. ಕಾಯ್ದೆ ಜಾರಿಯಾಗಿ 9 ವರ್ಷಗಳಾಗಿದ್ದು, ಈವರೆಗೆ 2 ಲಕ್ಷ ಕೋಟಿ ರೂ.ಗೂ ಹೆಚ್ಚು ವಿನಿಯೋಗಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾಯ್ದೆ ಉದ್ದೇಶ ಈಡೇರಿದೆಯೇ? ಅನುದಾನದ ಪ್ರಯೋಜನ, ಬದುಕಿನಲ್ಲಾಗಿರುವ ಬದಲಾವಣೆ, ಪರಿಣಾಮಗಳನ್ನು ತಿಳಿದುಕೊಳ್ಳುವುದಕ್ಕೆ ಈಗ ಸಮಗ್ರ ಮೌಲ್ಯಮಾಪನ ನಡೆಸಲಾಗುವುದು ಎಂದು ವಿವರಿಸಿದರು.
ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ, ಐಸೆಕ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಪ್ರತ್ಯೇಕವಾಗಿ ಮೌಲ್ಯಮಾಪನ ನಿರ್ವಹಿಸಲಿವೆ. ವಸ್ತುಸ್ಥಿತಿ ಸ್ಥೂಲ ವರದಿಯನ್ನು ಆರು ತಿಂಗಳಲ್ಲಿ ಪಡೆದುಕೊಳ್ಳಲು ನಿರ್ಧರಿಸಲಾಗಿದೆ. ಕ್ರಿಯಾ ಯೋಜನೆ ಅನುಷ್ಠಾನದ ಜವಾಬ್ದಾರಿ ಹೊತ್ತ 35 ಇಲಾಖೆಗಳಿಗೂ ಮೌಲ್ಯಮಾಪನ ವರದಿ ಸಲ್ಲಿಸಲು ಸೂಚಿಸಲಾಗಿದೆ. ಸಮಗ್ರ ಮೌಲ್ಯಮಾಪನದಿಂದ ಕಾಯ್ದೆಯ ಪರಿಣಾಮ, ಅನುದಾನ ವಿನಿಯೋಗದ ಪ್ರಯೋಜನ ಜತೆಗೆ ದಮನಿತ ಸಮುದಾಯಗಳ ಬದುಕಿನ ವಸ್ತುಸ್ಥಿತಿ ಗೊತ್ತಾಗಲಿದೆ. ಜತೆಗೆ ಮುಂದೆ ಯಾವ ರೀತಿ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ವರದಿ ತಿಳಿಸಿಕೊಡಲಿದೆ ಎಂದು ಅಭಿಪ್ರಾಯಪಟ್ಟರು.
ಒಂದೇ ಕಾರ್ಯಕ್ರಮವನ್ನು ಹಲವು ಇಲಾಖೆಗಳಿಂದ ಜಾರಿಗೊಳಿಸಿರುವುದು, ಹಣ ದುರ್ಬಳಕೆ, ಅಪವ್ಯಯ, ಸಾರ್ಥಕತೆ ಕಾಣದ ಆರ್ಥಿಕ ಹಾಗೂ ಭೌತಿಕ ಪ್ರಗತಿ ಮತ್ತಿತರ ಲೋಪದೋಷಗಳು ಪತ್ತೆಯಾಗಲಿವೆ. ಎಸ್ಸಿ, ಎಸ್ಟಿ ಸಮುದಾಯಗಳಿಲ್ಲದ ಪ್ರದೇಶದಲ್ಲಿ ರಸ್ತೆಗಳ ಸುಧಾರಣೆಗೆ ನಾಲ್ಕು ಕೋಟಿ ರೂ. ಬಳಕೆ, ವಿಮಾನ ನಿಲ್ದಾಣಕ್ಕೆ 11 ಕೋಟಿ ರೂ. ಬಳಸಿರುವುದು ಪತ್ತೆಯಾಗಿದೆ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಪರಿಶಿಷ್ಟ ಜಾತಿ, ಪಂಗಡದ ಒಟ್ಟು 14 ಲಕ್ಷ ಭೂಹಿಡುವಳಿದಾರರಿದ್ದು, ಶೇ.50ರಷ್ಟು ಮಾತ್ರ ಪೋಡಿಯಾಗಿದೆ. ಇದರಿಂದಾಗಿ ಫಸಲ್ ಬಿಮಾ ಯೋಜನೆಯಂಥ ಸವಲತ್ತಿನಿಂತ ಶೋಷಿತ ಸಮುದಾಯಗಳ ರೈತರು ವಂಚಿತರಾಗಿದ್ದಾರೆ. ಪೋಡಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.