ದುಬಾೖ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಅಚ್ಚರಿ ಮೂಡಿಸಿದ ಸ್ಕಾಟ್ಲೆಂಡ್ ತಂಡ ಮತ್ತೂಮ್ಮೆ ಸುದ್ದಿಯಾಗಿದೆ. ಆದರೆ ಇದು ಅಂಗಳದಾಚೆಯ ಕೌತುಕ. ಸ್ಕಾಟ್ಲೆಂಡ್ ತಂಡದ ಜೆರ್ಸಿ ವಿನ್ಯಾಸ ಮಾಡಿದ್ದು 12 ವರ್ಷದ ಬಾಲಕಿ ಎಂಬುದು ಇಲ್ಲಿನ ವಿಶೇಷ!
ಸ್ಕಾಟ್ಲೆಂಡ್ ತಂಡದ ನೇರಳೆ ಮತ್ತು ಕಡು ನೀಲಿ ಬಣ್ಣದ ಜೆರ್ಸಿಯನ್ನು ವಿನ್ಯಾಸ ಮಾಡಿದ್ದು 12 ವರ್ಷದ ರೆಬೆಕ್ಕಾ ಡೌನಿ ಎಂಬ ಯುವ ವಸ್ತ್ರ ವಿನ್ಯಾಸಕಿ.
ಮಕ್ಕಳಿಗಾಗಿ ವಿನ್ಯಾಸ ಸ್ಪರ್ಧೆ:
ಸ್ಕಾಟ್ಲೆಂಡ್‌ನ ಮಕ್ಕಳಿಗಾಗಿ ರಾಷ್ಟ್ರೀಯ ಕ್ರಿಕೆಟ್ ತಂಡದ ನೂತನ ಜೆರ್ಸಿ ವಿನ್ಯಾಸದ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಸುಮಾರು 200ಕ್ಕೂ ಅಧಿಕ ವಿನ್ಯಾಸಗಳು ಅಂತಿಮಗೊಂಡಿದ್ದವು. ಇದರಲ್ಲಿ ರೆಬೆಕ್ಕಾ ಡೌನಿ ಸಿದ್ಧಪಡಿಸಿದ ಜೆರ್ಸಿ ಆಯ್ಕೆಯಾಯಿತು.
ಸ್ಕಾಟ್ಲೆಂಡ್ ರಾಷ್ಟ್ರೀಯ ಲಾಂಛನವಾದ ತಿಸಲ್ ಹೂವಿನ ಬಣ್ಣದಿಂದ ಪ್ರೇರಿತವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.
ಹ್ಯಾಡಿಂಗ್ಟನ್ ಪಟ್ಟಣದ ನಿವಾಸಿಯಾದ ರೆಬೆಕ್ಕಾಗೆ ಸ್ಕಾಟ್ಲೆಂಡ್ ಆಟಗಾರು ಕ್ರಿಕೆಟ್ ಕಿಟ್ ಉಡುಗೊರೆಯಾಗಿ ನೀಡಿದ್ದಾರೆ.