Advertisement
ಫರೀದಾಬಾದ್‌ನಲ್ಲಿ ರವಿವಾರ ಮಾತನಾಡಿದ ಸಚಿವರು ಇಂತಹ ಸಿಹಿಸುದ್ದಿ ನೀಡಿದ್ದಾರೆ. “ಈಗ ನಾವು ಜಿಎಸ್‌ಟಿ ಜಾರಿಯ ಆರಂಭಿಕ ಹಂತದಲ್ಲಿದ್ದೇವೆ. ಮುಂದಿನ ದಿನಗಳಲ್ಲಿ ಆದಾಯದಲ್ಲಿ ಹೆಚ್ಚಳವಾದಂತೆ ಇನ್ನಷ್ಟು ಸುಧಾರಣ ಕ್ರಮಗಳನ್ನು ಜಾರಿ ಮಾಡುತ್ತೇವೆ. ಜತೆಗೆ, ತೆರಿಗೆ ಸ್ಲ್ಯಾಬ್ ಇಳಿಸುವ ಬಗ್ಗೆ ಚಿಂತನೆ ನಡೆಸು ತ್ತೇವೆ. ಆ ಮೂಲಕ ಸಣ್ಣ ತೆರಿಗೆದಾರರ ಹೊರೆ ತಗ್ಗಿಸಲು ಯತ್ನಿಸುತ್ತೇವೆ’ ಎಂದಿದ್ದಾರೆ ಜೇಟ್ಲಿ. ಜನಸಾಮಾನ್ಯರು ಬಳಕೆ ಮಾಡುವ ಉತ್ಪನ್ನಗಳಿಗೆ ಆದಷ್ಟು ಕಡಿಮೆ ತೆರಿಗೆ ವಿಧಿಸಬೇಕು ಎಂಬುದು ನಮ್ಮ ಇಚ್ಛೆ. ಅದಕ್ಕಾಗಿ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ ಎಂದೂ ಸಚಿವರು ಹೇಳಿದ್ದಾರೆ. ಪ್ರಸ್ತುತ ಜಿಎಸ್‌ಟಿ ದರ ಶೇ.5, 12, 18 ಮತ್ತು 28ರ ಶ್ರೇಣಿಗಳಲ್ಲಿ ನಿಗದಿಪಡಿಸಲಾಗಿದೆ.
ತೆರಿಗೆ ವ್ಯವಸ್ಥೆಗೆ ಮಣ್ಣೆರಚುವವರ ಪತ್ತೆ ಹಚ್ಚಲು ತಾಂತ್ರಿಕವಾಗಿ ಅತ್ಯಂತ ಸುಧಾರಿತ ಸಾಫ್ಟ್ವೇರ್ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಅದಕ್ಕಾಗಿ ಎಲ್ ಆ್ಯಂಡ್ ಟಿ ಇನ್ಫೋಟೆಕ್‌ಗೆ 653 ಕೋಟಿ ರೂ. ವೆಚ್ಚದ ಯೋಜನೆಯನ್ನು ನೀಡಿದೆ. ಡಿಜಿಟಲ್ ಪಾವತಿ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಒತ್ತು ನೀಡಿದ ಬಳಿಕ ತೆರಿಗೆ ವಂಚನೆ ತಪ್ಪಿಸುವ ನಿಟ್ಟಿನಲ್ಲಿ ಸಮಗ್ರ ಯೋಜನೆಯೊಂದನ್ನು ಸಿದ್ಧಪಡಿಸಲಾಗಿದೆ. ದೇಶದ ಡಿಜಿಟಲ್ ವ್ಯವಸ್ಥೆಯಲ್ಲಿಯೇ ಈ ವರೆಗಿನ ಅತ್ಯಂತ ದೊಡ್ಡ ಮೊತ್ತದ ಡೀಲ್ ಇದಾಗಿದೆ. ಎಲ್ ಆ್ಯಂಡ್ ಟಿಯ ಇನ್‌ಫೋಟೆಕ್‌ನ ಸಿಇಒ ಸಂಜಯ ಜಲೋನಾ ಭಾನುವಾರ ಈ ಮಾಹಿತಿ ನೀಡಿದ್ದಾರೆ. ತೆರಿಗೆ ವಂಚಿಸುವ ವ್ಯಕ್ತಿಯ ಪತ್ನಿ ಸೆಷೆಲ್ಸ್‌ಗೆ ಹೋಗಿ ವಿಲಾಸಿ ಪ್ರಯಾಣದ ಫೋಟೋವನ್ನು ಇನ್‌ಸ್ಟಾ ಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡಿ ಮಾಡಿದರೂ ಅದನ್ನು ಪತ್ತೆಹಚ್ಚುವಂಥ ವ್ಯವಸ್ಥೆ ಇದಾಗಲಿದೆ ಎಂದು ಅವರು ಹೇಳಿದ್ದಾರೆ. ಕಳೆದ ವರ್ಷ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ)ಜತೆಗೆ ಕೆಲಸ ಮಾಡುವ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಅದರ ಜತೆಗೇ ಸಂಸ್ಥೆ ಅತ್ಯಂತ ಮಹತ್ವವಾಗಿರುವ ಈ ಯೋಜನೆಯನ್ನು ಅಭಿವೃದ್ಧಿಪಡಿಸಿ, ನಿರ್ವಹಿಸಿ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಲಿದೆ.
Related Articles
Advertisement