Advertisement

ಸ್ಕೂಟರ್‌ ಓವರ್‌ಟೇಕ್‌ ಮಾಡಿದ ಬೈಕ್‌!

07:40 AM Jan 25, 2019 | |

ಸ್ವಂತಕ್ಕೊಂದು ವಾಹನ ಇಟ್ಟುಕೊಳ್ಳುವುದು ಈಗ ಶೋಕಿಯಾಗಿ ಉಳಿದಿಲ್ಲ. ಅದು ಆವಶ್ಯಕತೆಯಾಗಿದೆ. ಈಗಂತೂ ಜನರ ಅಗತ್ಯಕ್ಕೆ ತಕ್ಕಂತೆ ತರಹೇವಾರಿ ವಾಹನಗಳು ಬಿಡುಗಡೆಯಾಗುತ್ತಿವೆ. ಅದರಲ್ಲೂ ಸ್ಕೂಟರ್‌ ಬೈಕ್‌ಗಳಂತೂ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಧಿಕ ಬೇಡಿಕೆಯ ವಸ್ತುವಾಗಿದ್ದು, ಮಾರಾಟದಲ್ಲಿ ಚೀನ ಬಳಿಕ ಎರಡನೇ ಸ್ಥಾನ ಹೊಂದಿವೆ. ಜತೆಗೆ ಭಾರತ ವಿಶ್ವದಲ್ಲೇ ಅತಿ ಹೆಚ್ಚು ದ್ವಿಚಕ್ರವಾಹನಗಳನ್ನು ತಯಾರಿಸುವ ದೇಶವೂ ಆಗಿದೆ.

Advertisement

ನಗರ ಪ್ರದೇಶಗಳಲ್ಲಿ ಮಾತ್ರವಲ್ಲ ಗ್ರಾಮೀಣ ಭಾಗಗಳಲ್ಲೂ ಪ್ರತಿ ಮನೆಯಲ್ಲೂ ವಾಹನಗಳನ್ನು ಅದರಲ್ಲೂ ದ್ವಿಚಕ್ರ ವಾಹನಗಳಿರುತ್ತವೆೆ. ತಮ್ಮ ದೈನಂದಿನ ಕೆಲಸಗಳಿಗೆ ಇದು ಅಗತ್ಯದ್ದಾಗಿದೆ. ವಾಹನಗಳನ್ನು ಅದು ನೀಡುವ ಮೈಲೇಜ್‌, ಇಂಧನ ಖರ್ಚು, ವಿಮೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪರಿಶೀಲಿಸಿ ಖರೀದಿ ಮಾಡುತ್ತೇವೆ.

ಹಲವು ವರ್ಷಗಳಿಂದ ಹೋಮ್ಲಿ ವೆಹಿಕಲ್‌ ಎಂದೇ ಪರಿಗಣಿಸಲ್ಪಟ್ಟ ಸ್ಕೂಟರ್‌ಗಳ ಮಾರಾಟದಲ್ಲಿ ಈ ಬಾರಿ ಕೊಂಚ ಏರುಪೇರಾಗಿದೆ. ಬೈಕ್‌ಗಳಿಗೆ ಹೋಲಿಸಿದರೆ ಮೈಲೇಜ್‌ ಕೊಂಚ ಕಡಿಮೆ ನೀಡಿದರೂ ಸ್ಕೂಟರ್‌ ಕೊಳ್ಳುವವರ ಸಂಖ್ಯೆ ಕಡಿಮೆ ಇರಲಿಲ್ಲ. ವಾಹನ ಸವಾರರ ಜತೆಗೆ ಸಣ್ಣಪುಟ್ಟ ಸಾಮಗ್ರಿಗಳನ್ನು ಜತೆ ಇರಿಸಿಕೊಂಡು ಹೋಗಬಹುದು ಎಂಬ ಕಾರಣಕ್ಕೆ ಬಹುತೇಕ ಮಂದಿ ಸ್ಕೂಟರ್‌ನತ್ತ ಒಲವು ತೋರಿಸುತ್ತಾರೆ. ಆದರೆ 2018ರಿಂದ ಸ್ಕೂಟರ್‌ನಿಂದ ಗ್ರಾಹಕರು ಮತ್ತೆ ಬೈಕ್‌ಗಳತ್ತ ತೆರಳುತ್ತಿದ್ದಾರೆ. 2018ರಲ್ಲಿ ಸ್ಕೂಟರ್‌ಗಳಿಗಿಂತ ಬೈಕ್‌ ಖರೀದಿಸುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ನಗರದಲ್ಲಿ ಸ್ಕೂಟರ್‌ ಖರೀದಿಸುವವರ ಸಂಖ್ಯೆ 2017ರಿಂದ ಶೇ.3ರಷ್ಟು ಕಡಿಮೆಯಾಗಿದ್ದರೆ, ಗ್ರಾಮೀಣ ಭಾಗದಲ್ಲಿ ಇಂದಿಗೂ ಬೈಕ್‌ಗಳದ್ದೇ ಪಾರಮ್ಯ ಮುಂದುವರಿದಿದೆ.

ಇಂಧನ ಬೆಲೆ ಏರಿಕೆ, ವಿಮೆ ಹೊಡೆತ
ದಿನದಿಂದ ದಿನಕ್ಕೆ ಏರುತ್ತಿರುವ ಇಂಧನ ಬೆಲೆಯಿಂದಾಗಿ ವಾಹನ ಸವಾರರು ಈಗಾಗಲೇ ತತ್ತರಿಸಿದ್ದಾರೆ. ಈ ನಡುವೆ ಬೈಕ್‌ಗಳಿಗಿಂತ ಸ್ಕೂಟರ್‌ಗಳ ಮೈಲೇಜ್‌ ಕಡಿಮೆ ಇರುವ ಕಾರಣಕ್ಕೆ ಸ್ಕೂಟರ್‌ನತ್ತ ಬಂದಿದ್ದ ಗ್ರಾಹಕರು ಮತ್ತೆ ಬೈಕ್‌ನತ್ತ ವಾಲುತ್ತಿದ್ದಾರೆ. ಜತೆಗೆ ಬೈಕ್‌ಗಳ ಬೆಲೆಯೂ ಕಡಿಮೆ ಎನ್ನುವುದು ಅವುಗಳ ಮಾರಾಟ ಹೆಚ್ಚಾಗಲು ಕಾರಣ. ವಿವಿಧ ಕಂಪೆನಿಗಳು ನಮ್ಮ ವಾಹನ ನಿಗದಿತ ಇಷ್ಟು ಮೈಲೇಜ್‌ ನೀಡುತ್ತದೆ ಎಂದು ಹೇಳಿದರೂ ರಸ್ತೆಗಿಳಿದಾಗ ಅದಕ್ಕಿಂತ ಅದೆಷ್ಟೋ ಕಡಿಮೆ ಮೈಲೇಜ್‌ ನೀಡುತ್ತದೆ. ಈ ನಡುವೆ ವಿಮೆ ಏರಿಕೆಯಿಂದಾಗಿ ದ್ವಿಚಕ್ರ ವಾಹನ ಸವಾರರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಗ್ರಾಮೀಣ ಭಾಗದಲ್ಲಿ ಬೈಕ್‌ಗೆ ಹೆಚ್ಚಿದ ಬೇಡಿಕೆ
ಗ್ರಾಮೀಣ ಭಾಗದ ಜನರು ದ್ವಿಚಕ್ರ ವಾಹನವನ್ನು ಹೆಚ್ಚಾಗಿ ಅವಲಂಬಿಸಿರುತ್ತಾರೆ. ಆ ಕಾರಣಕ್ಕೆ ಬಹುತೇಕ ಪ್ರತಿ ಮನೆಯಲ್ಲೂ ದ್ವಿಚಕ್ರ ವಾಹನಗಳಿರುತ್ತದೆ. ಸಹ ಸವಾರರೊಂದಿಗೆ ಸಣ್ಣಪುಟ್ಟ ಸಾಮಗ್ರಿಗಳನ್ನು ಇರಿಸಿಕೊಂಡು ಹೋಗಲು ನೆರವಾಗುತ್ತದೆ ಎಂಬ ಕಾರಣಕ್ಕೆ ಗ್ರಾಮೀಣ ಭಾಗಗಳಲ್ಲಿ ಸ್ಕೂಟರ್‌ ಖರೀದಿಸುವವರ ಸಂಖ್ಯೆ ಹೆಚ್ಚಾಗಿತ್ತು. ಆದರೆ 2018ರಲ್ಲಿ ಈ ಅಂಕಿಅಂಶಗಳು ಬದಲಾಗಿವೆ. ಸ್ಕೂಟರ್‌ ಖರೀದಿಗಿಂತ ಬೈಕ್‌ ಖರೀದಿಸುವವರ ಸಂಖ್ಯೆ ಸ್ವಲ್ಪ ಹೆಚ್ಚಾಗಿದೆ. ಹೀರೋ ಕಂಪೆನಿಯ ಸ್ಪೆಂಡರ್‌, ಬಜಾಜ್‌ನ ಪಲ್ಸರ್‌ ಹಾಗೂ ಪ್ಲಾಟಿನಂ ಗಾಡಿಯ ಮಾರಾಟದಲ್ಲಿ ಶೇ.5ರಷ್ಟು ಹೆಚ್ಚಳ ಉಂಟಾಗಿದೆ ಎಂಬುದು ಹೀರೋ ಶೋರಂನ ಸಿಬಂದಿಯ ಅನಿಸಿಕೆ.

Advertisement

2018ರ ವರದಿಯಂತೆ ಬೈಕ್‌ಗಳ ಮಾರಾಟದಲ್ಲಿ ಶೇ.15ರಷ್ಟು ಏರಿಕೆ ಕಂಡಿದೆ. ಹಾಗೆಯೇ ಸ್ಕೂಟರ್‌ಗಳ ಮಾರಾಟದಲ್ಲಿ ಕೇವಲ 9ರಷ್ಟು ಏರಿಕೆಯಾಗಿದೆ. ಈ ಅಧ್ಯಯನ ಪ್ರಕಾರ ವಿವಿಧ ಕಾರಣಗಳಿಂದ ಸ್ಕೂಟರ್‌ ಖರೀದಿಸುವವರ ಸಂಖ್ಯೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಮೈಲೇಜ್‌ ಎಂಬುದು ವಾಹನ ಸವಾರರ ಅಭಿಪ್ರಾಯ.

ಮಹಿಳೆಯರಿಗೆ ಸ್ಕೂಟರ್‌ ವ್ಯಾಮೋಹ
ಸ್ಕೂಟರ್‌ಗಳಿಗಿಂತ ಹೆಚ್ಚು ಮೈಲೇಜ್‌ ನೀಡುವ ಬೈಕ್‌ಗಳಿವೆ ಎಂದು ಪುರುಷರು ಬೈಕ್‌ಗಳತ್ತ ಮುಖ ಮಾಡಿದರೆ ಮಹಿಳೆಯರು ಮಾತ್ರ ಸ್ಕೂಟರ್‌ನ್ನೇ ಅವಲಂಬಿಸಿದ್ದಾರೆ. ಸುಜುಕಿ ಆಕ್ಟಿವಾ, ಆಕ್ಸೆಸ್‌, ಟಿವಿಎಸ್‌ ಜ್ಯೂಪಿಟರ್‌, ಹೋಂಡಾ ಡಿಯೋ ವಾಹನ ಮಾರಾಟದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೆಚ್ಚು ಬೇಡಿಕೆಯುಳ್ಳ ಸ್ಕೂಟರ್‌ಗಳ ಮಾರಾಟದಲ್ಲಿ 2018 ಜೂನ್‌ನಿಂದ 2019ರ ಜ.2ನೇ ವಾರದ ವರೆಗೆ ಹೆಚ್ಚಿನ ಬದಲಾವಣೆಗಳಗಿಲ್ಲ. ಗ್ರಾಮೀಣ ಭಾಗದಲ್ಲಿ ಸುಜುಕಿ ಆಕ್ಟಿವಾ ಹಾಗೂ ಆಕ್ಸಿಸ್‌ ಖರೀದಿಯಲ್ಲಿ ಹೊಸ ವರ್ಷದ ಮೊದಲ ವಾರ ಕಳೆದ ವರ್ಷಕ್ಕಿಂತ ಶೇ.2ರಷ್ಟು ಏರಿಕೆಯಾಗಿದೆ. ನಗರ ಪ್ರದೇಶದಲ್ಲಿ ಅದೇ ಅಂಕಿಅಂಶ ಇದೆ ಎಂದು ಟಿವಿಎಸ್‌ ಶೋರೂಂನ ಸಿಬಂದಿ ವಿನೀತ್‌ ತಿಳಿಸಿದ್ದಾರೆ.

••ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next