ಕೊಪ್ಪಳ: ಪಿಎಸ್‌ಐ ಪರೀಕ್ಷೆಯ ಅಕ್ರಮ ಜಗಜ್ಜಾಹೀರಾದ ಬೆನ್ನೆಲ್ಲೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಪ್ರಸ್ತುತ ನಡೆಯುವ ಪ್ರತಿ ಪರೀಕ್ಷೆ ಮೇಲೆ ತೀವ್ರ ನಿಗಾ ಇರಿಸಿದೆ.
ಯಾವುದೇ ಅಕ್ರಮ ನಡೆಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದಂತೆ ಕಾಣುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಗರದಲ್ಲಿ ನಡೆದ ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುವ ಮುನ್ನಾ ಅವರ ಶರ್ಟ್ ತೋಳುಗಳಿಗೆ ಕತ್ತರಿ ಪ್ರಯೋಗ ಮಾಡಿ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು.. ಕೊಪ್ಪಳ ಹಾಗೂ ಗಂಗಾವತಿ ನಗರದಲ್ಲಿ ರವಿವಾರ ಕೆಪಿಟಿಸಿಎಲ್ ಸಹಾಯಕ ಎಂಜನಿಯರ್‌ಗಳ ಪರೀಕ್ಷೆ ನಡೆದಿದ್ದವು. ಪರೀಕ್ಷೆಗೆ ತುಂಬ ತೋಳಿನ ಶರ್ಟ್ ತೊಟ್ಟು ಬಂದಿದ್ದ ಅಭ್ಯರ್ಥಿಗಳು ಸರ್ಕಾರದ ಕಠಿಣ ನಿಯಮಗಳಿಂದ ಪೇಚಿಗೆ ಸಿಲುಕುವಂತೆ ಮಾಡಿತು. ಇತ್ತೀಚೆಗೆ ಕಲಬುರ್ಗಿಯಲ್ಲಿ ನಡೆದ ಪಿಎಸ್‌ಐ ಪರೀಕ್ಷಾ ನೇಮಕಾತಿಯಲ್ಲಿ ಏರ್‌ಫೋನ್, ಬ್ಲೂ ಟೂತ್‌ಗಳ ಬಳಕೆ ನಡೆದಿರುವ ವಿಚಾರ ಎಲ್ಲೆಡೆ ಸದ್ದು ಮಾಡಿತ್ತು.
ಇಂತಹ ವಿಚಾರಗಳ ಮೇಲೆ ನಿಗಾ ಇರಿಸಲು ಸರ್ಕಾರ ಪರೀಕ್ಷೆಗೆ ಬರುವ ಅಭ್ಯರ್ಥಿಗಳ ಉಡುಪಿನ ಮೇಲೂ ನಿಗಾ ಇಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಭಾಗ್ಯನಗರದ ನವ ಚೇತನ ಪಪೂ ಕಾಲೇಜಿನಲ್ಲಿ ರವಿವಾರ ನಡೆದ ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್‌ಗಳ ಪರೀಕ್ಷೆಯಲ್ಲಿನ ಅವಾಂತರವೇ ಇದಕ್ಕೆ ಸಾಕ್ಷಿಯಾಗಿದೆ.
ಇಲ್ಲಿಗೆ ಅಭ್ಯರ್ಥಿಗಳು ಸಹಜವಾಗಿಯೇ ಪರೀಕ್ಷೆ ಬರೆಯಲು ಆಗಮಿಸಿದ್ದರು. ಆದರೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ತುಂಬು ತೋಳಿನ ಶರ್ಟ್ ಧರಿಸಿ ಬಂದಿರುವ ಅಭ್ಯರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿ, ನಿಮ್ಮ ಉದ್ದ ತೋಳುಗಳನ್ನು ಕಟ್ ಮಾಡಿಕೊಳ್ಳಿ. ಹಾಫ್ ತೋಳು ಇರುವ ಅಭ್ಯರ್ಥಿಗಳಿಗೆ ಒಳಗೆ ಪ್ರವೇಶವಿದೆ ಎನ್ನುವ ಸಂದೇಶ ನೀಡಿದ್ದಾರೆ. ಇದರಿಂದ ಅಭ್ಯರ್ಥಿಗಳು ಪೇಚಿಗೆ ಸಿಲುಕಿದ್ದಾರೆ. ಪರೀಕ್ಷೆ ಬರೆಯದೇ ವಿಧಿಯಿಲ್ಲ ಎಂದು ತುಂಬ ತೋಳಿನ ಅಂಗಿ ಧರಿಸಿ ಬಂದಿದ್ದ ಅಭ್ಯರ್ಥಿಗಳು ಅಲ್ಲಿಯೇ ತಮ್ಮ ಎರಡೂ ಶರ್ಟ್ ನ ತೋಳು ಕತ್ತರಿಸಿಕೊಂಡು ಆಫ್ ಶರ್ಟ್ ತರ ಮಾಡಿಕೊಂಡು ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾರೆ. ಟೀ ಶರ್ಟ್ ಇದ್ದರೂ ಅವರ ತೋಳುಗಳನ್ನೂ ಪರೀಕ್ಷಾ ಸಿಬ್ಬಂದಿ ಕತ್ತರಿಸಿದ್ದಾರೆ. ಸರ್ಕಾರದ ಈ ಕತ್ತರಿ ಪ್ರಯೋಗ ಆಕ್ರೋಶಕ್ಕೂ ಕಾರಣವಾಗಿದೆ.
ಪರೀಕ್ಷೆ ನಡೆಸುವ ಸಂಸ್ಕೃತಿ ಇದೇನಾ? ಪರೀಕ್ಷಾ ಕೇಂದ್ರದ ಸಿಬ್ಬಂದಿ ಅಭ್ಯರ್ಥಿಗಳನ್ನು ಪ್ರತಿ ಹಂತದಲ್ಲಿ ಪರೀಕ್ಷೆಗೆ ಒಳಪಡಿಸಲಿ. ಆದರೆ ಶರ್ಟ್ ನ ತೋಳು ಕತ್ತರಿಸುವ ಹಂತಕ್ಕೆ ತೆರಳಿದ್ದು ನಿಜಕ್ಕೂ ಪರೀಕ್ಷಾ ನಡೆಸುವ ಸಂಸ್ಕೃತಿ ಇದೇನಾ ಎಂದು ಸರ್ಕಾರ ಹಾಗೂ ಕಾಲೇಜು ಪರೀಕ್ಷಾ ಸಿಬ್ಬಂದಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.