Advertisement

ಭಿತ್ತಿಪತ್ರಕ್ಕೂ ಬಿತ್ತು ಕತ್ತರಿ

12:11 PM Aug 12, 2018 | Team Udayavani |

ಬೆಂಗಳೂರು: ನಗರದಲ್ಲಿ ಫ್ಲೆಕ್ಸ್‌, ಬ್ಯಾನರ್‌ ಹಾವಳಿಗೆ ಸಂಬಂಧಪಟ್ಟಂತೆ ಹೈಕೋರ್ಟ್‌ ಬಿಬಿಎಂಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ನಂತರ ಎಚ್ಚೆತ್ತುಕೊಂಡ ಪಾಲಿಕೆ ಅಧಿಕಾರಿಗಳು, ಶನಿವಾರದಿಂದ ಎರಡನೇ ಸುತ್ತಿನಲ್ಲಿ ಫ್ಲೆಕ್ಸ್‌, ಬ್ಯಾನರ್‌ ತೆರವು ಆರಂಭಿಸಿದ್ದು, ಈ ಬಾರಿ ಭಿತ್ತಿಪತ್ರ ತೆರವು ಕಾರ್ಯವನ್ನೂ ಆರಂಭಿಸಿದೆ.

Advertisement

“ನಗರದಲ್ಲಿರುವ ಫ್ಲೆಕ್ಸ್‌ ಬ್ಯಾನರ್‌ಗಳನ್ನು ನಿಮ್ಮಿಂದ ತೆರವುಗೊಳಿಸಲು ಸಾಧ್ಯವಿಲ್ಲದಿದ್ದರೆ ಹೇಳಿ, ನಾವೇ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೈಕೋರ್ಟ್‌, ಶುಕ್ರವಾರ ಪಾಲಿಕೆಗೆ ಕಟುವಾಗಿ ಎಚ್ಚರಿಕೆ ನೀಡಿತ್ತು. ಆ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆಯಿಂದಲೇ ಪಾಲಿಕೆಯ ಎಂಟೂ ವಲಯಗಳಲ್ಲಿ ಭಿತ್ತಿಪತ್ರ ತೆರವು ಹಾಗೂ ಗೋಡೆ ಬರಹ ಅಳಿಸುವ ಅಭಿಯಾನಯನ್ನು ಅಧಿಕಾರಿಗಳು ಆರಂಭಿಸಿದ್ದಾರೆ.

ಹೈಕೋರ್ಟ್‌ ಸೂಚನೆ ಮೇರೆಗೆ ಮೊದಲು ಫ್ಲೆಕ್ಸ್‌, ಬ್ಯಾನರ್‌ ಹಾಗೂ ಬಂಟಿಂಗ್ಸ್‌ ತೆರವು ಕಾರ್ಯಾಚರಣೆಗೆ ಆದ್ಯತೆ ನೀಡಿದ್ದ ಬಿಬಿಎಂಪಿ, ನಂತರ ನಗರದಲ್ಲಿ ಫ್ಲೆಕ್ಸ್‌, ಬ್ಯಾನರ್‌, ಜಾಹೀರಾತು ಫ‌ಲಕಗಳನ್ನು ನಿಷೇಧಿಸಿ ನಿರ್ಣಯ ಕೈಗೊಂಡಿತ್ತು. ಆನಂತರ ಫ್ಲೆಕ್ಸ್‌, ಬ್ಯಾನರ್‌ ಮುದ್ರಣ ಮಾಡುವ ಮಳಿಗೆಗಳಿಗೆ ಬೀಗಮುದ್ರ ಹಾಕುವ ಮೂಈಲಕ ಎಚ್ಚರಿಕೆ ನೀಡಿತ್ತು. ಇದೀಗ ಭಿತ್ತಿಪತ್ರ ಹಾಗೂ ಗೋಡೆ ಬರಹಗಳನ್ನು ಅಳಿಸುವ ಮೂಲಕ ನಗರದ ಸೌಂದರ್ಯ ಹೆಚ್ಚಿಸಲು ಸಜ್ಜಾಗಿದೆ.

ಅದರಂತೆ ಶನಿವಾರ ಮೈಸೂರು ಬ್ಯಾಂಕ್‌ ವೃತ್ತದ ಬಳಿ ಭಿತ್ತಿಪತ್ರಗಳನ್ನು ತೆರವುಗೊಳಿಸಿ ಗೋಡೆಗಳಿಗೆ ಬಣ್ಣ ಬಳಿಯುವ ಮೂಲಕ ಅಭಿಯಾನಕ್ಕೆ ಮೇಯರ್‌ ಆರ್‌.ಸಂಪತ್‌ರಾಜ್‌ ಚಾಲನೆ ನೀಡಿದರು. ಪೌರಕಾರ್ಮಿಕರು, ಗ್ಯಾಂಗ್‌ಮನ್‌ಗಳು ಹಾಗೂ ಇತರೆ ಸಿಬ್ಬಂದಿ ಆಯಾ ವಾರ್ಡ್‌ಗಳಲ್ಲಿ ಶನಿವಾರ ಫ್ಲೆಕ್ಸ್‌, ಬ್ಯಾನರ್‌, ಭಿತ್ತಿಪತ್ರಗಳ ತೆರವು ಕಾರ್ಯ ಕೈಗೊಂಡರು.

ಬೆಂಗಳೂರಿಗೆ ಹೊಸ ರೂಪ: ಈ ಸಂದರ್ಭದಲ್ಲಿ ಮಾತನಾಡಿದ ಸಂಪತ್‌ರಾಜ್‌, ಹೈಕೋರ್ಟ್‌ ಸೂಚನೆಯಂತೆ ಫ್ಲೆಕ್ಸ್‌, ಭಿತ್ತಿಪತ್ರ ಹಾಗೂ ಗೋಡೆ ಬರಹ ಅಳಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಪಾಲಿಕೆ ಸದಸ್ಯರು ಪಕ್ಷಾತೀತವಾಗಿ ಅಭಿಯಾನಕ್ಕೆ ಕೈಜೋಡಿಸಿದ್ದು, ಅಭಿಯಾನದಿಂದ ರಾಜಧಾನಿ ಹೊಸ ರೂಪ ಪಡೆಯಲಿದೆ ಎಂದು ಹೇಳಿದರು. 

Advertisement

ನಗರದ ಸ್ವತ್ಛತೆ ಕಾಪಾಡುವ ಹಾಗೂ ಅಂದವನ್ನು ಹೆಚ್ಚಿಸುವ ಉದ್ದೇಶದಿಂದ ಗೋಡೆಗಳ ಮೇಲಿನ ಭಿತ್ತಿಪತ್ರ ತೆರವು, ಗೋಡೆ ಬರಹ ಅಳಿಸಿ ಹಾಕಲಾಗುತ್ತಿದೆ. ಅಭಿಯಾನದ ನಂತರವೂ ಗೋಡೆಗಳ ಮೇಲೆ ಭಿತ್ತಿಪತ್ರ ಅಂಟಿಸಿದರೆ, ಹೊಸದಾಗಿ ಗೋಡೆ ಬರಹ ಬರೆದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹೈಕೋರ್ಟ್‌ ಸೂಚನೆ ಮೇರೆಗೆ ದಂಡ: ಬಿಬಿಎಂಪಿ ಜಾಹೀರಾತು ನೀತಿಯ ಉಪವಿಧಿ ಕರಡನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು, ಈ ವಿಚಾರ ನ್ಯಾಯಾಲಯದ ಮುಂದಿದೆ. ಇನ್ನು ಮುಂದೆ ಅಕ್ರಮವಾಗಿ ಜಾಹೀರಾತು ಪ್ರದರ್ಶಿಸುವವರ ವಿರುದ್ಧ ಕೈಗೊಳ್ಳಬೇಕಾದ ಕ್ರಮ, ದಂಡ ಮೊತ್ತ ಇತರೆ ಅಂಶಗಳ ಬಗ್ಗೆ ನ್ಯಾಯಾಲಯದ ಸೂಚನೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ದಂಡ ವಿಧಿಸುವ ಬಗ್ಗೆ ನ್ಯಾಯಾಲಯದಿಂದ ಸ್ಪಷ್ಟ ಸೂಚನೆ ದೊರೆಯದಿದ್ದಾರೆ ಕೆಎಂಸಿ ಕಾಯ್ದೆ ಪ್ರಕಾರವೇ ದಂಡ ವಿಧಿಸಲಾಗುವುದು ಎಂದು ಹೇಳಿದರು. 

ಅಭಿಯಾನಕ್ಕೆ ಪೌರಕಾರ್ಮಿಕರ ಸಾಥ್‌: ನಗರದಲ್ಲಿನ ಫ್ಲೆಕ್ಸ್‌, ಬ್ಯಾನರ್‌, ಭಿತ್ತಿಪತ್ರ ತೆರವು ಕಾರ್ಯಾಚರಣೆಗೆ ದಿಢೀರ್‌ ಅಗತ್ಯ ಸಿಬ್ಬಂದಿ ನಿಯೋಜನೆ ಸಾಧ್ಯವಾಗದ ಕಾರಣ ಪೌರಕಾರ್ಮಿಕರನ್ನು ಬಳಸಿಕೊಳ್ಳಲು ಬಿಬಿಎಂಪಿ ಮುಂದಾಗಿದೆ. ಅದರಂತೆ ನಿತ್ಯ ಒಂದು ಗಂಟೆ ಪೌರಕಾರ್ಮಿಕರು ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದು, ನಂತರ ತ್ಯಾಜ್ಯ ವಿಲೇವಾರಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಅದರಂತೆ ಮುಂದಿನ ಒಂದು ವಾರದೊಳಗೆ ನಗರದ ಎಲ್ಲ ವಾರ್ಡ್‌ಗಳು ಫ್ಲೆಕ್ಸ್‌ ಮುಕ್ತವಾಗಲಿದೆ ಎಂದು ಮೇಯರ್‌ ತಿಳಿಸಿದ್ದಾರೆ.

ಎಲ್ಲೆಂದರಲಿ ಫ್ಲೆಕ್ಸ್‌ ತ್ಯಾಜ್ಯ ವಿಲೇವಾರಿ: ಕಳೆದೊಂದು ವಾರದಿಂದ ಪಾಲಿಕೆಯ ವ್ಯಾಪ್ತಿಯಲ್ಲಿ 25 ಸಾವಿರಕ್ಕೂ ಹೆಚ್ಚಿನ ಫ್ಲೆಕ್ಸ್‌, ಬ್ಯಾನರ್‌ ಹಾಗೂ ಬಂಟಿಂಗ್ಸ್‌ ತೆರವುಗೊಳಿಸಲಾಗಿದೆ. ಆದರೆ, ತೆರವುಗೊಳಿಸಿದ ನಿಷೇಧಿತ ಫ್ಲೆಕ್ಸ್‌ ತ್ಯಾಜ್ಯ ವಿಲೇವಾರಿ ಬಗ್ಗೆ ಅಧಿಕಾರಿಗಳು ಗಮನಹರಿಸಿಲ್ಲ. ಹೀಗಾಗಿ ಫ್ಲೆಕ್ಸ್‌ ತೆರವು ಕಾರ್ಯಾಚರಣೆ ನಂತರ ಸಂಗ್ರಹವಾದ ತ್ಯಾಜ್ಯವನ್ನು ಆಯಾ ವಲಯ ವ್ಯಾಪ್ತಿಯಲ್ಲಿ, ಅಥವಾ ವಲಯ ಕಚೇರಿ ಆವರಣದಲ್ಲಿ ಶೇಖರಿಸುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಅದರಂತೆ ತ್ಯಾಜ್ಯವನ್ನು ಬಿಬಿಎಂಪಿ ಕಚೇರಿಗಳ ಆವರಣ, ಪಾಲಿಕೆ ಜಾಗಗಳಲ್ಲಿ ರಾಶಿ ಹಾಕಿದ್ದು, ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next