ನವದೆಹಲಿ: ಮೂರು ವರ್ಷಗಳ ಹಿಂದೆ ಜಗತ್ತಿನ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಕೊರೊನಾ ಸೋಂಕು ಶುರುವಾದದ್ದು ಹೇಗೆ ಎಂಬ ಬಗ್ಗೆ ಈಗಾಗಲೇ ಹಲವು ವಾದಗಳು ಮಂಡನೆಯಾಗಿವೆ. ಅಮೆರಿಕದ ವಿಜ್ಞಾನಿ ಆ್ಯಂಡ್ರೂ ಹಫ್ ಎಂಬವರು ಕಂಡುಕೊಂಡಿರುವ ಪ್ರಕಾರ ಚೀನದ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಲಾಜಿಯ ಪ್ರಯೋಗಶಾಲೆಯಲ್ಲಿಯೇ ವೈರಸ್ ಅನ್ನು ಸೃಷ್ಟಿಸಿ ಸೋರಿಕೆ ಮಾಡಲಾಗಿದೆ. ಹಫ್ ಬರೆದಿರುವ ಹೊಸ ಪುಸ್ತಕ “ದ ಟ್ರಾತ್ ಎಬೌಟ್ ವುಹಾನ್’ ನಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.
ಆದರೆ, ಅದಕ್ಕೆ ವಿತ್ತೀಯ ನೆರವು ಸಿಕ್ಕಿದ್ದು ಅಮೆರಿಕ ಸರ್ಕಾರದಿಂದ. ಅದಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ಭದ್ರತೆ ಇಲ್ಲದ ವ್ಯವಸ್ಥೆಯಲ್ಲಿ ನಡೆಸಲಾಗಿತ್ತು. ಹೀಗಾಗಿಯೇ ವೈರಸ್ ಸೋರಿಕೆಯಾಗಿದೆ ಎಂದು ಅವರು ಬರೆದಿದ್ದಾರೆ. ದಶಕಗಳಿಂದಲೂ ಸಂಸ್ಥೆ ಕೊರೊನಾ ವೈರಸ್‌ಗಳನ್ನು ಬಾವಲಿಗಳ ಮೂಲಕ ಪ್ರಯೋಗ ನಡೆಸುತ್ತಿತ್ತು. ಚೀನ ಸರ್ಕಾರಕ್ಕೆ ಕುಲಾಂತರಿ ತಂತ್ರಜ್ಞಾನದ ಮೂಲಕ ವೈರಸ್ ಅನ್ನು ಅಭಿವೃದ್ಧಿಪಡಿಸುತ್ತಿರುವ ವಿಚಾರ ಗೊತ್ತಿತ್ತು. ಅದಕ್ಕಾಗಿ ಆ ದೇಶದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಕೂಡ ವಿತ್ತೀಯ ನೆರವು ನೀಡಿದೆ ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಕೊರೊನಾ ಸಮಸ್ಯೆ ಉದ್ಭವಿಸುವಲ್ಲಿ ಚೀನದ ಜತೆಗೆ ಅಮೆರಿಕವೂ ಕಾರಣ ಎಂದು ದೂರಿರುವ ಹಫ್, ಅಪಾಯಕಾರಿ ತಂತ್ರಜ್ಞಾನವನ್ನು ಆ ದೇಶ ಚೀನಕ್ಕೆ ಹಸ್ತಾಂತರ ಮಾಡಿತ್ತು ಎಂದು ಆರೋಪಿಸಿದ್ದಾರೆ. ಹಫ್ ಅವರು ಕೆಲಕಾಲ ವುಹಾನ್‌ನ ಲ್ಯಾಬ್‌ನಲ್ಲಿ ಕಾರ್ಯನಿರ್ವಹಿಸಿದ್ದರು.