“ನ್ಯೂರಾನ್’… ಇದು ವಿಜ್ಞಾನಕ್ಕೆ ಸಂಬಂಧಿಸಿದ ಪದ. ಈಗ “ನ್ಯೂರಾನ್’ ಹೆಸರಲ್ಲೇ ಚಿತ್ರವೊಂದು ಮೂಡಿಬರುತ್ತಿದೆ. ಅಂದಹಾಗೆ, ಕೆಲವರನ್ನು ಹೊರತುಪಡಿಸಿದರೆ ಬಹುತೇಕ ಹೊಸಬರ ಚಿತ್ರವಿದು. ವಿಕಾಸ್ ಪುಷ್ಪಗಿರಿ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಸಾಫ್ಟ್ವೇರ್ ಕ್ಷೇತ್ರದಲ್ಲಿದ್ದ ವಿಕಾಸ್‌ಗೆ ಮೊದಲನಿಂದಲೂ ಸಿನಿಮಾ ಆಸಕ್ತಿ ಇತ್ತು. ಚಿತ್ರರಂಗದಲ್ಲಿ ಹೊಸದೇನಾದರೂ ಮಾಡಿ ಗುರುತಿಸಿಕೊಳ್ಳಬೇಕೆಂಬ ಬಯಕೆಗೆ ನಿರ್ಮಾಪಕ ವಿನಯ್‌ಕುಮಾರ್,
ಲೋಹಿತ್, ಶ್ರೀನಿವಾಸ್‌ಗೌಡ ಅವರು ಸಾಥ್ ಕೊಟ್ಟಿದ್ದರಿಂದ “ನ್ಯೂರಾನ್’ ನಿರ್ದೇಶಿಸಲು ಸಾಧ್ಯವಾಗಿದೆ.
“ನ್ಯೂರಾನ್’ ಬಗ್ಗೆ ಹೇಳಿಕೊಂಡ ವಿಕಾಸ್ ಪುಷ್ಪಗಿರಿ, “ಮನುಷ್ಯ ನ್ಯೂರಾನ್ಸ್ ಇಲ್ಲದೆ ಬದುಕಲು ಸಾಧ್ಯವಿಲ್ಲ. ಬ್ರೈನ್‌ಗೆ ಸಂದೇಶ ರವಾನಿಸೋದೇ ಈ ನ್ಯೂರಾನ್. ಇದರಿಂದಲೇ ಮೆದುಳು ಸಕ್ರಿಯವಾಗಿ ಕೆಲಸ ಮಾಡುತ್ತದೆ. ಇವತ್ತಿನ ಜನರೇಷನ್‌ಗೆ ಬೇಕಾದ ಅಂಶಗಳೊಂದಿಗೆ ಈ ಚಿತ್ರ ಮಾಡಿದ್ದೇನೆ. ಇಲ್ಲೂ ನ್ಯೂರಾನ್ ಹೈಲೈಟ್ ಆಗಿರಲಿದೆ. ಅದು ಹೇಗೆ ಎಂಬುದನ್ನು ಚಿತ್ರದಲ್ಲಿ ನೋಡಬೇಕು. ಮನುಷ್ಯನಿಗೆ ಬದುಕಲು ಏನು ಮುಖ್ಯ. ಯಾವುದನ್ನು ಕಳೆದುಕೊಳ್ಳುತ್ತಿದ್ದಾನೆ ಎಂಬುದೇ ಚಿತ್ರದ ಕಥೆ. ಸಕಲೇಶಪುರ, ಮಡಿಕೇರಿ, ಬೆಂಗಳೂರು, ಗೋವಾದಲ್ಲಿ ಚಿತ್ರೀಕರಣಗೊಂಡಿದೆ’ ಎಂದು ವಿವರ ಕೊಟ್ಟರು ವಿಕಾಸ್.
ನಾಯಕ ಯುವ ಅವರಿಗೆ ಇದು ಮೊದಲ ಚಿತ್ರ. ಈ ಚಿತ್ರ ಮಾಡೋಕೆ ಕಾರಣ ಅವರ ಸಹೋದರ ಶ್ರೀನಿವಾಸ್ ಅಂತೆ. ಮೂರು ವರ್ಷಗಳ ಎಫರ್ಟ್ ಇದು. ಸಿನಿಮಾ ಮಾಡುವ ಆಸೆಯಿಂದ ಎಲ್ಲವನ್ನೂ ಕಲಿತು ಬಂದಿದ್ದೇನೆ. ಈ ಕಥೆಯಲ್ಲಿ ಸಾಕಷ್ಟು ವಿಷಯಗಳಿವೆ. ಹೊಸತನವೂ ಇದೆ. ಅದನ್ನು ಸಿನಿಮಾದಲ್ಲೇ ಕಾಣಬೇಕು ಎಂದರು ಯುವ.ನಿರ್ಮಾಪಕ ಲೋಹಿತ್ ಅವರಿಗೆ ಮೊದಲ ಅನುಭವ ಇದು. ಶ್ರೀನಿವಾಸ್ ಗೌಡ್ರು ಅವರಿಂದ ಈ ಚಿತ್ರ ಆಗಿದೆ. ನಾವು ಸುಮಾರು ಕಥೆ ಕೇಳಿದ್ದರೂ, ಅವೆಲ್ಲವನ್ನೂ ಪಕ್ಕಕ್ಕಿಟ್ಟು ಈ ಕಥೆ ಆಯ್ಕೆ ಮಾಡಿಕೊಂಡು ಚಿತ್ರ ಮಾಡಿದ್ದೇವೆ. ಹೊಸತನ ತುಂಬಿದ ಕಥೆಯಲ್ಲಿ ಸಾಕಷ್ಟು ವಿಶೇಷಗಳಿವೆ ಎಂದರು ಅವರು.
ನಾಯಕಿ ನೇಹಾ ಪಾಟೀಲ್‌ಗೆ ಥ್ರಿಲ್ಲರ್ ಚಿತ್ರದಲ್ಲಿ ಕೆಲಸ ಮಾಡಿದ ಖುಷಿಯಂತೆ. ಇಲ್ಲಿ ಸೋಶಿಯಲ್ ಸರ್ವೀಸ್ ಮಾಡುವ ಹುಡುಗಿ ಪಾತ್ರ ಮಾಡಿದ್ದಾರಂತೆ. ಅವರ ಪಾತ್ರದಲ್ಲಿ ತಿರುವು ಬರಲಿದೆಯಂತೆ. ಮದುವೆ ನಂತರ ತೆರೆಗೆ ಬರುತ್ತಿರುವ ಎರಡನೇ ಚಿತ್ರವಿದು ಎಂದರು ನೇಹಾ.
ಶಿಲ್ಪಾ ಶೆಟ್ಟಿ ಅವರಿಗೆ ಮೊದಲ ಚಿತ್ರವಿದು. ಕಿರುತೆರೆಯಲ್ಲಿದ್ದ ಅವರಿಗೆ ಇದೊಂದು ರೀತಿ ಪ್ರಮೋಶನ್ ಅಂತೆ. ವೈಷ್ಣವಿ ಅವರಿಗಿಲ್ಲಿ ನಿರ್ದೇಶಕರು ಕಥೆ ಹೇಳಿದಾಗ, ಇಂತಹ ಹೊಸತನದ ಕಥೆ ಇರುವ ಚಿತ್ರ ಬಿಡಬಾರದು ಅನಿಸಿ ಒಪ್ಪಿದರಂತೆ. ವಾಸ್ತವ ಅಂಶಗಳನ್ನಿಟ್ಟುಕೊಂಡು ಇಲ್ಲಿ ಕಥೆ ಹೇಳಿರುವುದು ಹೈಲೈಟ್ ಅಂತೆ.
ನಟ ಅರವಿಂದ್ ಇಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಛಾಯಾಗ್ರಾಹಕ ಶೋಯೆಬ್ ಅಹ್ಮದ್ ಅನುಭವ ಹಂಚಿ ಕೊಂಡರು.