Advertisement

ದುರ್ಗದ ಕೋಟೆಯ ವಿಜ್ಞಾನ ಪಾಠ

10:11 AM Feb 02, 2020 | Lakshmi GovindaRaj |

ಚಿತ್ರದುರ್ಗದ ಕಲ್ಲಿನ ಕೋಟೆ ಕರುನಾಡ ಚರಿತ್ರೆಯ ಅತಿದೊಡ್ಡ ಸಾಕ್ಷಿ. ಇತಿಹಾಸ ತಜ್ಞರಿಗೆ ಇಲ್ಲಿ ಹೆಜ್ಜೆ ಹೆಜ್ಜೆಗೂ, ಪ್ರತಿನೋಟಗಳಿಗೂ ಚರಿತ್ರೆಯ ಕತೆಗಳು ಸಿಗುತ್ತವೆ. ಹಾಗೆಯೇ ,ಆ ಕುರುಹುಗಳ ಒಳಹೊಕ್ಕು ನೋಡಿದರೆ, ವೈಜ್ಞಾನಿಕ ನೋಟಗಳೂ ಕಾಣಸಿಗುತ್ತವೆ…

Advertisement

ಚಿತ್ರದುರ್ಗದ ಏಳುಸುತ್ತಿನ ಕೋಟೆ ಬಹುತೇಕರಿಗೆ ಚಿರಪರಿಚಿತ. ಈ ಕೋಟೆಯಲ್ಲಿ ಇತಿಹಾಸದ ಕುರುಹುಗಳು ಎಷ್ಟಿವೆಯೋ, ಹಾಗೆಯೇ ಅದರೊಳಗೆ ಹಲವು ವೈಜ್ಞಾನಿಕ ನೋಟಗಳನ್ನೂ ಗಮನಿಸಬಹುದು. ಅಲ್ಲಿನ ಎತ್ತರದ ದೀಪಸ್ತಂಭವು ವಿಜ್ಞಾನದ ಮೊದಲ ಪಾಠ ಹೇಳುವ ಪುರಾವೆ. ಭೂಮಿಗೆ ಲಂಬವಾಗಿ ನಿಂತಿರುವ ಏಕಶಿಲಾ ದೀಪಕಂಬವು ಗುರುತ್ವಕೇಂದ್ರದ ತತ್ವದಡಿ ಯಲ್ಲಿ ನಿಂತಿದೆ. ಓಬವ್ವನ ಕಿಂಡಿಗೆ ತೆರಳುವ ಮಾರ್ಗದಲ್ಲಿ ಒಂದಿಷ್ಟು ಮಣ್ಣಿನ ಗೋಡೆಗಳಿವೆ. ಬಹುತೇಕ ಪ್ರವಾಸಿಗರು ಈ ಗೋಡೆಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ, ಈ ಗೋಡೆಗಳ ರಚನೆ ಆಧುನಿಕ ವಿಜ್ಞಾನಕ್ಕೆ ಹಲವು ಪಾಠಗಳನ್ನು ಹೇಳುತ್ತವೆ.

ಅಚಲ ಗೋಡೆಗಳು: ಮಣ್ಣಿನ ಗೋಡೆಗಳನ್ನು ನಿರ್ಮಿಸಿ ನಾಲ್ಕು ನೂರಕ್ಕೂ ಹೆಚ್ಚು ವರ್ಷಗಳಾಗಿದ್ದರೂ ಮಳೆ, ಗಾಳಿಗೆ ಬೀಳದೇ ಅಚಲವಾಗಿ ನಿಂತಿವೆ. ಮಣ್ಣಿನ ಗೋಡೆಗಳುಳ್ಳ ಈ ಕಟ್ಟಡ, ಭರಮಣ್ಣ ನಾಯಕನ ಅರಮನೆಯಾಗಿತ್ತು ಎಂಬುದನ್ನು ಸ್ಥಳೀಯ ಇತಿಹಾಸ ಸಂಶೋಧಕರಾದ ರಾಜಶೇಖರಪ್ಪ ಪ್ರತಿಪಾದಿಸುತ್ತಾರೆ. ಕೋಟೆಯು ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಾಣವಾಗಿದ್ದು, ಬೇಸಿಗೆಯಲ್ಲಿ ಹೆಚ್ಚು ಶಾಖದಿಂದ ಕೂಡಿರುತ್ತದೆ. ಇದರಿಂದ ಅಲ್ಲಿ ವಾಸಿಸಲು ಕಷ್ಟವಾಗುತ್ತದೆ ಎಂಬುದನ್ನು ಅರಿತ ಆಳರಸರು ಗೋಡೆ ನಿರ್ಮಾಣಕ್ಕೆ ಮಣ್ಣನ್ನು ಬಳಸಿರುವ ಸಾಧ್ಯತೆಗಳಿವೆ. ಮಣ್ಣಿನ ಗೋಡೆಗಳು ಹೆಚ್ಚು ಸದೃಢವಾಗಿರುತ್ತವೆ ಹಾಗೂ ಬೇಸಿಗೆಯಲ್ಲೂ ತಂಪಾಗಿರುತ್ತವೆ.

ಮಡಕೆ ಚೂರುಗಳ ಬಳಕೆ: ಗೋಡೆ ನಿರ್ಮಾಣದಲ್ಲಿ ಬಳಸಿದ ಮಣ್ಣು ತುಂಬಾ ಜಿಗುಟಾಗಿದೆ. ಹಸಿಯಾದ ಮಣ್ಣಿಗೆ ಒಡೆದ ಮಡಕೆ ಚೂರುಗಳು, ಹುಲ್ಲು, ಬೆಲ್ಲ ಹಾಗೂ ಲೋಳೆಸರವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬೆರೆಸಿ ಹಸಿಮಣ್ಣಿನ ಇಟ್ಟಿಗೆ ತಯಾರಿಸಿಕೊಂಡಿದ್ದಾರೆ. ಇಟ್ಟಿಗೆಗಳು ಒಣಗಿದ ನಂತರ ಗೋಡೆ ನಿರ್ಮಿಸಿದ್ದಾರೆ. ಈಗಲೂ ಗೋಡೆಯ ಮಣ್ಣಿನಲ್ಲಿರುವ ಒಡೆದ ಮಡಕೆ ಚೂರುಗಳನ್ನು ಕಾಣಬಹುದು. ಮಳೆ ನೀರಿನ ರಭಸಕ್ಕೆ ಮಣ್ಣು ಸವೆಯದಂತೆ ಮಡಕೆ ಚೂರುಗಳು ರಕ್ಷಿಸಿವೆ ಮತ್ತು ಕಟ್ಟಡಕ್ಕೆ ಭದ್ರತೆಯನ್ನು ನೀಡಿವೆ. ಮಳೆ ನೀರಿನಿಂದ ಹೊರಗೋಡೆಗೆ ಹಾನಿಯಾಗದಂತೆ ಸುಣ್ಣದ ಗಾರೆ ಬಳಸಿರುವಂತಿದೆ. ಈಗಲೂ ಗೋಡೆಯ ಮೇಲೆ ಅಲ್ಲಲ್ಲಿ ಗಾರೆಯ ಕುರುಹುಗಳನ್ನು ಕಾಣಬಹುದು.

ತಂಗಾಳಿ ಗೋಪುರ: ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಳಕೆ ಅಂದಿನ ರಾಜರಿಗೆ ಚೆನ್ನಾಗಿ ತಿಳಿದಿತ್ತು ಎಂಬುದಕ್ಕೆ ಕೋಟೆಯಲ್ಲಿ ಸಾಕಷ್ಟು ಪುರಾವೆಗಳಿವೆ. ಇಲ್ಲಿನ ತಂಗಾಳಿ ಗೋಪುರವನ್ನೂ ವಿಜ್ಞಾನದ ತತ್ವಗಳ ಆಧಾರದ ಮೇಲೆ ನಿರ್ಮಿಸಲಾಗಿದೆ. ಬೇಸಿಗೆಯಲ್ಲಿ ಬಿಸಿಲ ಶಾಖದಿಂದ ಪಾರಾಗಲು, ತಂಗಾಳಿ ಗೋಪುರ ನಿರ್ಮಿಸಿರಬಹುದು. ಜೊತೆಗೆ, ಕೋಟೆಯಲ್ಲಿ ಅಲ್ಲಲ್ಲಿ ನಿರ್ಮಿಸಿದ ನೀರಿನ ಸಂಗ್ರಹಾಗಾರಗಳು ಅವರ ಮಳೆಕೊಯ್ಲಿಗೆ ಉತ್ತಮ ನಿದರ್ಶನಗಳು.

Advertisement

ಎತ್ತರದ ಕೋಟೆಯಿಂದ ನೀರು ಹೋಗದಂತೆ ತಡೆಹಿಡಿದು ಅದನ್ನು ಬಳಸುತ್ತಿದ್ದರು ಎಂಬುದಕ್ಕೆ, ಕೋಟೆಯಲ್ಲಿನ ಕಲ್ಯಾಣಿಗಳು, ನೀರಿನ ಹೊಂಡಗಳೇ ಸಾಕ್ಷಿಯಾಗಿವೆ. ಕೋಟೆಯಲ್ಲಿನ ಮತ್ತೂಂದು ವಿಜ್ಞಾನದ  ಸಾಧನಗಳೆಂದರೆ ಮದ್ದು ಬೀಸುವ ಕಲ್ಲುಗಳು. ಯುದ್ಧಕ್ಕೆ ಅಗತ್ಯವಾದ ಮದ್ದನ್ನು ಸ್ಥಳೀಯವಾಗಿಯೇ ತಯಾರಿಸುವ ಕಾರ್ಯದಲ್ಲಿ ಅವರು ಪಳಗಿದ್ದರು ಎಂಬುದಕ್ಕೆ ಕೋಟೆಯ ಕೆಳಭಾಗದಲ್ಲಿರುವ ಬೃಹದಾಕಾರದ ಬೀಸುಕಲ್ಲುಗಳೇ ಸಾಕ್ಷಿ.

ಮೆಟ್ಟಿಲುಗಳೇಕೆ ತಿರುವು- ಮುರುವು?: ಕೋಟೆಯ ಮೆಟ್ಟಿಲುಗಳ ನಿರ್ಮಾಣದಲ್ಲೂ ವಿಜ್ಞಾನವನ್ನು ಅಳವಡಿಸಿರುವುದು ಕಂಡುಬರುತ್ತದೆ. ಕೋಟೆಯ ಮೇಲಿ ನಿಂದ ಬರುವ ಕುದುರೆಗಳ ವೇಗವನ್ನು ನಿಯಂತ್ರಿಸುವ ಸಲುವಾಗಿ ತಿರುವು ರಸ್ತೆಯ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ.

* ಆರ್‌.ಬಿ. ಗುರುಬಸವರಾಜ

Advertisement

Udayavani is now on Telegram. Click here to join our channel and stay updated with the latest news.

Next