Advertisement

ವಿಜ್ಞಾನ ನಾಟಕ ಸ್ಪರ್ಧೆ: ಶಿರಸಿ ಮಾರಿಕಾಂಬಾ ಪ್ರೌಢ ಶಾಲೆ ರಾಷ್ಟ್ರ‌ಮಟ್ಟಕ್ಕೆ

07:29 PM Dec 02, 2022 | Team Udayavani |

ಶಿರಸಿ: ಬೆಂಗಳೂರಿನ ನಡೆದ ದಕ್ಷಿಣ ಭಾರತ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಕರ್ನಾಟಕ ಪ್ರತಿನಿಧಿಸಿದ್ದ ಸರಕಾರಿ ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದು ರಾಷ್ಟ್ರ‌ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.

Advertisement

ತೆಲಂಗಾಣ, ಕೇರಳ, ತಮಿಳುನಾಡು, ಆಂದ್ರಪ್ರದೇಶ, ಕರ್ನಾಟಕ, ಪುದುಚೆರಿ ಸೇರಿದಂತೆ ಏಳು ರಾಜ್ಯಗಳಿಂದ ಪ್ರಬಲ ಪೈಪೋಟಿ ನೀಡಿದ್ದರು. ಸ್ಪರ್ಧೆಯಲ್ಲಿ ಕೇರಳ ಪ್ರಥಮ ಸ್ಥಾನ ಪಡೆದುಕೊಂಡರೆ ಕರ್ನಾಟಕದ ಪ್ರತಿನಿಧಿಯಲ್ಲಿ ಒಂದಾಗಿದ್ದ ಶಿರಸಿ‌ ಮಾರಿಕಾಂಬಾ ಸರಕಾರಿ‌ ಪ್ರೌಢಶಾಲೆ ಮಕ್ಕಳು ದ್ವಿತೀಯ ಸ್ಥಾನ ಪಡೆದಿದ್ದಾರೆ.

ಕೇವಲ 9 ವಿದ್ಯಾರ್ಥಿಗಳು 29 ಪಾತ್ರ ನಿರ್ವಹಿಸಿದ ಒಂದು ಲಸಿಕೆಯ ಕಥೆ ನಾಟಕವನ್ನು ರಾಜ್ಯ ಪ್ರಶಸ್ತಿ ಪುರಸ್ಕೃತ ಕನ್ನಡ ಶಿಕ್ಷಕ ನಾರಾಯಣ‌ ಭಾಗ್ವತ್ ನಿರ್ದೇಶಿಸಿದ್ದರು. ವಿಜ್ಞಾನ ಶಿಕ್ಷಕಿ ಜಯಲಕ್ಷ್ಮಿ ಗುನಗಾ ನಿರ್ವಹಿಸಿದ್ದರು.

ಸಾಂಕ್ರಾಮಿಕ ರೋಗಗಳ ವಿರುದ್ಧದಲ್ಲಿ ಕೆಲಸ‌ ಮಾಡುವ ಲಸಿಕೆಗಳ ಹುಟ್ಟು, ಅವುಗಳ ಬೆಳವಣಿಗೆ, ಜನರ ವಿರೋಧ ಇದ್ದರೂ ಅದನ್ನು ಎದುರಿಸಿ ಜನತೆಯ ಆರೋಗ್ಯ ರಕ್ಷಣೆಗೆ ಕಟಿಬದ್ಧರಾದ ವಿಜ್ಞಾನಿಗಳು ಹಾಗೂ ಅವರು ನೀಡಿದ ಕೊಡುಗೆಯ ಕುರಿತಾದ ಚಿತ್ರಣವನ್ನು ಹೊಂದಿದ ಒಂದು‌ ಲಸಿಕೆಯ ಕಥೆ ಮೂವತ್ತು‌ ನಿಮಿಷದಲ್ಲಿ ಶತಮಾನದ ಒಟ್ಟೂ ಸಾಧನೆ ಬಿಚ್ಚಿಡುವ ನಾಟಕ ಆಗಿದೆ.

ಇಡೀ ನಾಟಕದಲ್ಲಿ ವಿಜ್ಞಾನದ ಸಂಗತಿಯನ್ನು ಮನೋಜ್ಞವಾಗಿ ತೆರೆದಿಟ್ಟ ಬಗೆ ಹಾಗೂ ವಿದ್ಯಾರ್ಥಿಗಳ ಭಾವಪೂರ್ಣ ಲವಲವಿಕೆಯ ಅಭಿನಯವು ಈ ಗೆಲುವು ತಂದುಕೊಟ್ಟಿದೆ.

Advertisement

ಪಾತ್ರಧಾರಿಗಳಾಗಿ ತುಳಸಿ ಹೆಗಡೆ, ಸ್ಪಂದನಾ ಭಟ್ಟ, ಜಯಶ್ರೀ ಭಟ್ಟ, ನವ್ಯಾ ಹೆಗಡೆ, ಶ್ರೀಜಾ ಭಟ್ಟ, ಮಾನ್ಯ ಹೆಗಡೆ, ಕಿಶನ್ ಕುಮಾರ ಹೆಗಡೆ , ದರ್ಶನ್ ಎಸ್. ಭಟ್, ಪ್ರತ್ವಿಕ್ ಮೋಹನದಾಸ ನಾಯಕ ಅಚ್ಚುಕಟ್ಟಾಗಿ ನಿರ್ವಹಿಸಿ ನಾಟಕ ಪರಿಣಾಮಕಾರಿಯಾಗಿಸಿದರು. ಅತ್ಯುತ್ತಮ ಸ್ಕ್ರಿಪ್ಟ್ ಪ್ರಶಸ್ತಿ ಬಹುಮಾನ ಶಿಕ್ಷಕಿ ಜಯಲಕ್ಷ್ಮೀ ಗುನಗಾ ಅವರಿಗೆ ಲಭಿಸಿದೆ. ನಾಗರಾಜ ಭಂಡಾರಿ ಬೆಳಕಿ‌ನ ಸಹಕಾರ ನೀಡಿದರು.

ಭಾರತ ದೇಶ ಮಟ್ಟಕ್ಕೆ ಆಯ್ಕೆ ಆದ ಮಾರಿಕಾಂಬಾದ ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ಆರ್.ಡಿ.ಹೆಗಡೆ, ಡಿಡಿಪಿಐ ಬಸವರಾಜು, ಬಿಇಓ ಎಂ.ಎಸ್.ಹೆಗಡೆ, ಮಾರಿಕಾಂಬಾ ಪ್ರೌಢಶಾಲೆಯ ಪ್ರಭಾರಿ‌ ಮುಖ್ಯ ಶಿಕ್ಷಕ ಆರ್.ವಿ.ನಾಯ್ಕ, ಶಾಲಾಭಿವೃದ್ದಿ ಸಮಿತಿ ಪದಾಧಿಕಾರಿಗಳು, ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next