Advertisement

ನಾಳೆ ಶಾಲಾರಂಭ: ಬಿಸಿಯೂಟ ನೌಕರರಿಗಿಲ್ಲ ಈ ತಿಂಗಳ ವೇತನ!

11:32 PM May 14, 2022 | Team Udayavani |

ಕುಂದಾಪುರ: ರಾಜ್ಯಾದ್ಯಂತ ಮೇ 16ರಿಂದ ಶಾಲೆಗಳು ಆರಂಭಗೊಳ್ಳಲಿವೆ. ಮೊದಲ ದಿನದಿಂದಲೇ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಇರಲಿದೆ. ಆದರೆ ಸರಕಾರದ ಆದೇಶದ ಪ್ರಕಾರ ಬಿಸಿಯೂಟ ನೌಕರರಿಗೆ ಮಾತ್ರ ಈ ತಿಂಗಳಿನ ವೇತನ ಸಿಗುವುದಿಲ್ಲ.

Advertisement

ಸರಕಾರವು ಬಿಸಿಯೂಟ ತಯಾರಕರು ಮತ್ತು ಸಹಾಯಕ ಸಿಬಂದಿಗೆ ವರ್ಷದ 10 ತಿಂಗಳು ಮಾತ್ರ ಗೌರವಧನ ನೀಡುತ್ತಿದ್ದು, ಎಪ್ರಿಲ್‌-ಮೇಯಲ್ಲಿ ಕೊಡುವುದಿಲ್ಲ. ಈ ಬಾರಿ ಮೇ 16ರಿಂದ ಶಾಲೆಗಳು ಆರಂಭಗೊಳ್ಳುತ್ತಿವೆ. ಬಿಸಿಯೂಟ ಆರಂಭಕ್ಕೆ ಬೇಕಾದ ಎಲ್ಲ ಅಗತ್ಯ ಸಾಮಗ್ರಿಗಳನ್ನು ಈಗಾಗಲೇ ಶಾಲೆಗಳಿಗೆ ಸರಬರಾಜು ಮಾಡಲಾಗಿದೆ. ಆದರೆ ಕೆಲಸಕ್ಕೆ ತೆರಳಿದರೆ ಸಂಬಳ ಸಿಗುವುದೇ ಎನ್ನುವ ಗೊಂದಲ ರಾಜ್ಯದ 1.18 ಲಕ್ಷ ಮಂದಿ ಬಿಸಿಯೂಟ ಸಿಬಂದಿಯದ್ದು.

ಆದೇಶವೇನು?
ಶಿಕ್ಷಣ ಇಲಾಖೆಯ ಆದೇಶದ ಪ್ರಕಾರ ಸರಕಾರಿ ಶಾಲೆಗಳಲ್ಲಿ ಪ್ರತೀ ವರ್ಷ ಮಾ. 31ರ ಅಂತ್ಯಕ್ಕೆ ಅಡುಗೆ ಸಿಬಂದಿಯನ್ನು ಬಿಡುಗಡೆ ಮಾಡಿ, ಮತ್ತೆ ಅದೇ ಸಿಬಂದಿಯನ್ನು ಮುಂದಿನ ಶೈಕ್ಷಣಿಕ ವರ್ಷದ ಜೂ. 1ರಂದು ನೇಮಕ ಮಾಡಿಕೊಳ್ಳಬೇಕು. ಮೇ 16ರಿಂದ ಕೆಲಸ ನಿರ್ವಹಿಸಿದರೆ ಈ 16 ದಿನಗಳ ವೇತನವನ್ನು ಇಲಾಖೆ ನೀಡಬಹುದೇ ಎನ್ನುವ ಪ್ರಶ್ನೆ ಸಿಬಂದಿಯದು.

1.18 ಲಕ್ಷ ಸಿಬಂದಿ
ರಾಜ್ಯದಲ್ಲಿ 47,250 ಮಂದಿ ಅಡುಗೆ ತಯಾರಕರಿದ್ದು, 71,336 ಮಂದಿ ಸಹಾಯಕರು ಸೇರಿ ಒಟ್ಟು 1,18,586 ಮಂದಿ ಅಕ್ಷರ ದಾಸೋಹ ಸಿಬಂದಿಯಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 1,866 ಮತ್ತು ದ.ಕ.ದಲ್ಲಿ 3,213 ಮಂದಿ ಇದ್ದಾರೆ. ಹೊಸ ಆದೇಶದಂತೆ ಈ ಶೈಕ್ಷಣಿಕ ಸಾಲಿನಿಂದ ಅಡುಗೆ ತಯಾರಕರಿಗೆ ಮಾಸಿಕ 3,700 ರೂ. ಮತ್ತು ಸಹಾಯಕರಿಗೆ ಮಾಸಿಕ 3,600 ರೂ. ಗೌರವ ಧನವನ್ನು ನೀಡಲಾಗುತ್ತಿದೆ.

ಈ ಬಾರಿ ಮೇ ತಿಂಗಳಲ್ಲೇ ಶಾಲಾರಂಭ ಆಗುತ್ತಿರುವುದರಿಂದ ಈ ಗೊಂದಲ ಉಂಟಾಗಿದೆ. ಅಧಿಕಾರಿಗಳು ಮೇ 16ರಿಂದಲೇ ಬರುವಂತೆ ತಿಳಿಸಿದ್ದಾರೆ. ಆದರೆ ಈ 16 ದಿನಗಳ ವೇತನ ಸಿಗಲಿದೆಯೇ ಎನ್ನುವ ಬಗ್ಗೆ ಗೊಂದಲವಿದೆ. ಎಪ್ರಿಲ್‌ನಲ್ಲಿ ವೇತನ ಇರದಿದ್ದರೂ 10 ದಿನ ಕೆಲಸ ಮಾಡಿದ್ದೇವೆ. ಈಗ ಮತ್ತೆ 16 ದಿನ ಹೀಗಾದರೆ ಕಷ್ಟ. ಸರಕಾರ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಿ.
– ಸಿಂಗಾರಿ ಪೂಜಾರ್ತಿ, ಅಧ್ಯಕ್ಷೆ,
ಕುಂದಾಪುರ ಅಡುಗೆ ಸಿಬಂದಿ ಸಂಘ

Advertisement

ಸರಕಾರ 10 ತಿಂಗಳು ಬಿಸಿಯೂಟ ಸಿಬಂದಿಗೆ ವೇತನ ನೀಡುತ್ತಿದ್ದು, ಇದರಲ್ಲಿಯೇ ದಸರಾ ರಜೆ, ಇನ್ನಿತರ ರಜೆ ಸೇರಿ ಒಂದು ತಿಂಗಳು ಹೆಚ್ಚುವರಿಯಾಗಿ ಕೊಡುತ್ತಿದೆ. ಈ ಬಾರಿ ಎಪ್ರಿಲ್‌ನಲ್ಲಿ 10 ದಿನ ಮತ್ತು ಮೇಯಲ್ಲಿ 16 ದಿನ ಕಾರ್ಯನಿರ್ವಹಿಸಿದ್ದನ್ನು ಕೂಡ ಲೆಕ್ಕಹಾಕಿ, ಒಂದು ತಿಂಗಳಿಗಿಂತ ಹೆಚ್ಚಿನ ದಿನ ಆಗಿದ್ದರೆ, ವೇತನ ಕೊಡಲಾಗುವುದು. ಈ ಬಗ್ಗೆ ಸಚಿವರ ನೇತೃತ್ವದ ಸಭೆಯಲ್ಲಿ ಚರ್ಚಿಸಲಾಗಿದೆ. ಅದಲ್ಲದೆ ಅಕ್ಷರದಾಸೋಹ ಸಿಬಂದಿಗೆ ಇನ್ನಷ್ಟು ಸೌಲಭ್ಯ ನೀಡುವ ಪ್ರಸ್ತಾವವೂ ಸರಕಾರದ ಹಂತದಲ್ಲಿ ಆಗುತ್ತಿದೆ.
– ಮಂಜುನಾಥ ಎಸ್‌.ಸಿ., ಹಿರಿಯ ಸಹಾಯಕ ನಿರ್ದೇಶಕರು, ಮಧ್ಯಾಹ್ನದ ಊಟದ ಯೋಜನೆ, ಬೆಂಗಳೂರು

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next