Advertisement

ಶಿಕ್ಷಕರ ವರ್ಗಾವಣೆ: ವ್ಯವಸ್ಥೆ ಮೇಲೆ ನಂಬಿಕೆ ಬರಲಿ

03:51 AM Jul 01, 2021 | Team Udayavani |

ಹಲವು ಸಮಯಗಳ ಕಾನೂನು ಕಸರತ್ತಿನ ಅನಂತರ ರಾಜ್ಯ ಸರಕಾರ ಕೊನೆಗೂ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಅಧಿಸೂಚನೆ ಹೊರಡಿಸಿದೆ. ಈ ಪ್ರಕ್ರಿಯೆ ಹಿಂದೆಯೇ ಆಗಬೇಕಿತ್ತಾದರೂ ಈಗಲಾದರೂ ಆಗುತ್ತಿದೆಯಲ್ಲ ಎನ್ನುವ ಸಮಾಧಾನ ಶಿಕ್ಷಕ ವಲಯದಲ್ಲಿದೆ. ಹತ್ತಾರು ವರ್ಷಗಳಿಂದ ವರ್ಗಾವಣೆಯನ್ನು ಬಯಸುತ್ತಿದ್ದ ಶಿಕ್ಷಕ ಸಮೂಹಕ್ಕೆ ಇದೊಂದು ಚೇತೋಹಾರಿ ಸುದ್ದಿ. ಈ ಬಾರಿಯಾದರೂ ಯಾವುದೇ ತಾಂತ್ರಿಕ, ಕಾನೂನಾತ್ಮಕ ಸಮಸ್ಯೆಗಳಿಲ್ಲದೆ ವರ್ಗಾವಣೆ ಪ್ರಕ್ರಿಯೆಯನ್ನು ಮುಗಿಸುವುದು ರಾಜ್ಯ ಸರಕಾರದ ಮೇಲಿನ ದೊಡ್ಡ ಜವಾಬ್ದಾರಿಯಾಗಿದೆ.

Advertisement

ಕಳೆದ ಬಾರಿಯ ಅರ್ಜಿಗಳನ್ನು ಪರಿಗಣಿಸುವುದರ ಜತೆಗೆ ಹೊಸ ಅರ್ಜಿ ಹಾಕಲು ಅವಕಾಶ ನೀಡಿರುವುದು ಸ್ತುತ್ಯರ್ಹ. ಕಳೆದ ಸಲವೇ ಸುಮಾರು 75,000 ಅರ್ಜಿಗಳು ಸಲ್ಲಿಕೆಯಾಗಿದ್ದವು, ಹಿಂದಿನ ಸಲ ಅರ್ಜಿ ಸಲ್ಲಿಸಲಾಗದವರಿಗೆ ಮತ್ತು ಆಗ ಅರ್ಹತೆ ಇಲ್ಲದಿದ್ದು, ಈಗ ಅರ್ಹತೆ ಪಡೆದುಕೊಂಡವರಿಗೆ ಈ ಬಾರಿ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದು ಒಳ್ಳೆಯ ಕ್ರಮ. ಇದರಿಂದ ಹಿಂದಿನ ಅವಕಾಶ ವಂಚಿತರಿಗೆ ಅವಕಾಶ ನೀಡಿದಂತಾಗಿದೆ. ಹಿಂದಿನ ಸಲ ಕಡ್ಡಾಯ ವರ್ಗಾವಣೆಗೊಂಡವರಿಗೆ ಆದ್ಯತೆ ಮೇರೆಗೆ ಈ ಸಲ ಸಾಧ್ಯವಾದಷ್ಟು ಅವರ ಹಿಂದಿನ ಶಾಲೆಗಳ ಸಮೀಪದಲ್ಲೇ ಅವಕಾಶ ನೀಡುವ ಕ್ರಮವನ್ನು ಸೇರಿಸಲಾಗಿದೆ. ಹಾಗೆ ನೋಡಿದರೆ, 2017ರಿಂದ ಸಮರ್ಪಕವಾಗಿ ವರ್ಗಾವಣೆ ಪ್ರಕ್ರಿಯೆ ನಡೆಯಲೇ ಇಲ್ಲ. ಯಾವುದೇ ಸರಕಾರಗಳು ಬಂದರೂ ಶಿಕ್ಷಕರನ್ನು ಉಪೇಕ್ಷಿಸುವ ವ್ಯವಸ್ಥೆ ಹಾಗೆಯೇ ಮುಂದುವರಿದುಕೊಂಡು ಬಂದಿತ್ತು. ಇದರಿಂದಾಗಿ ಎಷ್ಟೋ ಶಿಕ್ಷಕ ಕುಟುಂಬಗಳು ಕೌಟುಂಬಿಕ ಹಾಗೂ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು ಬದುಕುವಂತಾಗಿದೆ. ಶಿಕ್ಷಕರೇ ಮಾನಸಿಕ ನೆಮ್ಮದಿ ಕಳೆದುಕೊಂಡರೆ ಶಿಕ್ಷಣ ವ್ಯವಸ್ಥೆಯನ್ನು ಹೇಗೆ ಸುಧಾರಿಸಲು ಸಾಧ್ಯ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿರಲೇ ಇಲ್ಲ. ಹಿಂದಿನ ಸಲದ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿರುವಾಗಲೇ ಕೆಲವು ಶಿಕ್ಷಕರು ಕರ್ನಾಟಕ ಆಡಳಿತ ನ್ಯಾಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದರು, ಇದರಿಂದ ಇಡೀ ಪ್ರಕ್ರಿಯೆ ಸ್ಥಗಿತಗೊಂಡಿತು. ಕಡ್ಡಾಯ ವರ್ಗಾವಣೆಗೊಂಡಿದ್ದ ಶಿಕ್ಷಕ ರಿಗೆ ಮರು ವರ್ಗಾವಣೆಯಲ್ಲಿ ಮೊದಲ ಆದ್ಯತೆ ನೀಡಬೇಕೆಂಬ ನೀತಿಗೆ ಇವರು ತಕರಾರು ಒಡ್ಡಿದ್ದರು. ಈ ವಾದಕ್ಕೆ ನ್ಯಾಯ ಮಂಡಳಿ ಹಾಗೂ ಹೈಕೋರ್ಟ್‌ನಲ್ಲಿ ಜಯ ಸಿಕ್ಕಿತ್ತು. ಆದರೆ, ಕಡ್ಡಾಯ ವರ್ಗಗೊಂಡ ಶಿಕ್ಷಕರಿಗೆ ಮರುಮನ್ನಣೆ ನೀಡಬೇಕೆಂಬ ತನ್ನ ನಿಲುವನ್ನು ಎತ್ತಿ ಹಿಡಿದ ಸರಕಾರ, ಅಧ್ಯಾದೇಶವನ್ನು ಜಾರಿಗೊಳಿಸಿ ಈಗ ಮತ್ತೆ ವರ್ಗ ಪ್ರಕ್ರಿಯೆಗೆ ಮುಂದಾಗಿದೆ.

ಹಲವು ವರ್ಷಗಳಿಂದ ಚಾತಕ ಪಕ್ಷಿಯಂತೆ ಕಾದು ಕೂತಿದ್ದ ಶಿಕ್ಷಕರಿಗೆ ಈ ಬಾರಿಯ ವರ್ಗಾವಣೆ ಪ್ರಕ್ರಿಯೆಯಲ್ಲಾದರೂ ಅನುಕೂಲ ಸಿಗಬಹುದು ಎನ್ನುವ ನಿರೀಕ್ಷೆ ಎಲ್ಲರಿಗೂ ಇದೆ. ಈ ಬಾರಿಯಾದರೂ ಅರ್ಹರಿಗೆ ಮತ್ತು ಹಲವು ವರ್ಷಗಳಿಂದ ನ್ಯಾಯ ಸಿಗದೆ ಇರುವ ಶಿಕ್ಷಕರಿಗೆ ನ್ಯಾಯ ಸಿಗುವಂತೆ ಮಾಡುವುದು ಸರಕಾರದ ಜವಾಬ್ದಾರಿ ಯಾಗಿದೆ. ತಾಂತ್ರಿಕ ತೊಂದರೆಯಾಗದಂತೆ ನೋಡಿಕೊಳ್ಳುವ ಮತ್ತು ಎಲ್ಲವೂ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುವ ಹೊಣೆ ಶಿಕ್ಷಣ ಇಲಾಖೆಯದ್ದಾಗಿದೆ. ಹಾಗೊಂದು ವೇಳೆ ಆಗದೇ ಇದ್ದಲ್ಲಿ ಇಡೀ ವರ್ಗಾವಣೆ ಪ್ರಕ್ರಿಯೆ ಬಗ್ಗೆ ಮತ್ತು ವ್ಯವಸ್ಥೆ ಮೇಲೆ ಶಿಕ್ಷಕ ಸಮುದಾಯ ನಂಬಿಕೆ ಕಳೆದುಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next