Advertisement

ಇಂದು ಶಾಲಾರಂಭ: ಆಟದಿಂದ ಪಾಠದತ್ತ ಮಕ್ಕಳು

03:32 PM May 31, 2023 | Team Udayavani |

ಕಾರ್ಕಳ: 2022-23ನೇ ಸಾಲಿನ ಶೈಕ್ಷಣಿಕ ವೇಳಾ ಪಟ್ಟಿಯಂತೆ ಬೇಸಗೆ ರಜೆ ಅಂತ್ಯಗೊಂಡು ಮೇ 31ರಂದು ಶಾಲೆ ಆರಂಭಗೊಳ್ಳಲಿದೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆಟದಿಂದ ಪಾಠದ ಕಡೆ ಮಕ್ಕಳು ತೆರಳಲಿದ್ದಾರೆ.

Advertisement

ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು ಸೇರಿದಂತೆ ಒಟ್ಟು 241 ಶಾಲೆಗಳಿವೆ. ಈ ಪೈಕಿ 162 ಸರಕಾರಿ ಶಾಲೆಗಳು. ಕಳೆದ ಶೈಕ್ಷಣಿಕ ವರ್ಷದಲ್ಲಿ ಒಟ್ಟು 29,065 ವಿದ್ಯಾರ್ಥಿಗಳು ಶಾಲೆಗಳಲ್ಲಿ ವಿದ್ಯಾರ್ಜನೆ ಮಾಡಿದ್ದು, ಅದರ ಜತೆ ಹೊಸ ದಾಖಲಾತಿಗಳು ನಡೆದಿವೆ. ಸಮವಸ್ತ್ರ ಹಾಗೂ ಪಠ್ಯ ಪುಸ್ತಕಗಳು ಇಷ್ಟರಲ್ಲೇ ಬಂದು ತಲುಪಿದ್ದು ಶಾಲಾರಂಭದ ಮೊದಲ ದಿನವೇ ವಿದ್ಯಾರ್ಥಿಗಳಿಗೆ ವಿತರಣೆಯಾಗಲಿದೆ.

ಉಭಯ ತಾ|ನ ಎಲ್ಲ ಶಾಲೆಗಳಲ್ಲಿ ತರಗತಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊಠಡಿಗಳ ಸ್ವತ್ಛತೆ, ಶಾಲಾ ಶೌಚಾಲಯ ಸ್ವತ್ಛತೆ, ಬಿಸಿಯೂಟಕ್ಕೆ ಬೇಕಾದ ಪೂರ್ವ ಸಿದ್ಧತೆ ಇತ್ಯಾದಿಗಳನ್ನು ಎಸ್‌ಡಿಎಂಸಿ ಸಮಿತಿ, ಶಿಕ್ಷಕವೃಂದದವರು, ಪೋಷಕರು ನಡೆಸಿಕೊಂಡಿದ್ದು. ಶಾಲಾ ಪರಿಸರವನ್ನು ಸ್ವತ್ಛಗೊಳಿಸಿ ಅಂದವಾಗಿ ಇಡಲಾಗಿದೆ. ಮಕ್ಕಳ ಸ್ವಾಗತಕ್ಕೆ ಶಾಲೆಗಳನ್ನು ವಿವಿಧ ರೀತಿಯಲ್ಲಿ ಸಿಂಗರಿಸಿ ಸಂಭ್ರಮ ದಿಂದ ಸ್ವಾಗತಿಸಲು ಶಾಲಾ ಅಭಿವೃದ್ಧಿ ಸಮಿತಿ, ಶಿಕ್ಷಕರು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಶಿಕ್ಷಕರ ಜತೆ ಪೋಷಕರೂ ಕೈ ಜೋಡಿಸುತ್ತಿರುವುದು ಕಂಡುಬಂತು.

ಶಾಲಾ ದ್ವಾರದಲ್ಲಿ ತಳಿರು ತೋರಣ ಕಟ್ಟಿ, ಶಾಲೆಗೆ ಮುಂಜಾನೆ ಬರುವ ಮಕ್ಕಳಿಗೆ ಹೂ ನೀಡಿ, ಆರತಿ ಬೆಳಗಿ ಸ್ವಾಗತಿಸಲು ಶಾಲೆಗಳಲ್ಲಿ ಸಿದ್ಧತೆಗಳಾಗಿವೆ. ಪ್ರಸಕ್ತ ಶೈಕ್ಷಣಿಕ ಸಾಲನ್ನು ಗುಣಾತ್ಮಕ ಶೈಕ್ಷಣಿಕ ವರ್ಷವಾಗಿರಿಸಲು ಸಜ್ಜಾಗುವಂತೆ ಶಿಕ್ಷಣ ಇಲಾಖೆ ಶಾಲಾ ಮುಖ್ಯಸ್ಥರಿಗೆ ಸೂಚನೆಗಳನ್ನು ನೀಡಿದ್ದು ಅದಂತೆ ಮಕ್ಕಳನ್ನು ಸ್ವಾಗತಿಸಲು ಭರದ ಸಿದ್ಧತೆಗಳು ಶಾಲಾ ವ್ಯಾಪ್ತಿಯಲ್ಲಿ ನಡೆದಿದೆ.

ಶಾಲೆಗಳಲ್ಲಿ ನೀರಿನ ಸಮಸ್ಯೆ
ತಾಲೂಕಿನಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು ಕಾರ್ಕಳ ಪುರಸಭಾ ವ್ಯಾಪ್ತಿಯ ಒಟ್ಟು 51 ಶಾಲೆಗಳಲ್ಲಿ ನೀರಿನ ಕೊರತೆ ಕಂಡುಬಂದಿದೆ. ಗ್ರಾಮೀಣ ಭಾಗದ ಶಾಲೆಗಳು ಸೇರಿ ಒಟ್ಟು 120 ಶಾಲೆಗಳಲ್ಲಿ ನೀರಿನ ಅಭಾವ ಕಾಡಿದ್ದು, ಸಮಸ್ಯೆ ಪರಿಹಾರಕ್ಕೆ ಈಗಾಗಲೇ ಶಿಕ್ಷಣ ಇಲಾಖೆ ಸ್ಥಳೀಯ ಗ್ರಾ.ಪಂ., ಪ.ಪಂ. ಹಾಗೂ ಪುರಸಭೆಗಳಿಗೆ ನೀರು ಪೂರೈಕೆಯನ್ನು ಮಾಡುವಂತೆ ಮನವಿಯನ್ನು ಸಲ್ಲಿಸಿದೆ. ಇನ್ನೂ ಶಾಲೆಗಳಲ್ಲಿ ನೀರಿನ ಮೂಲವಾಗಿದ್ದ ಬಾಗಳು ಸಂಪೂರ್ಣ ಬರಿದಾಗಿವೆ. ಕೆಲವೊಂದು ಶಾಲೆಗಳಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು ಹಾಗೂ ಶಿಕ್ಷಕರು, ಮುಂದಾಳತ್ವ ವಹಿಸಿಕೊಂಡು ಬಾವಿಗಳ ದುರಸ್ತಿ, ಸ್ವತ್ಛಗೊಳಿಸುವ ಕೆಲಸ ಪೂರ್ಣಗೊಳಿಸಿದ್ದಾರೆ.

Advertisement

ಮಕ್ಕಳನ್ನು ಸೆಳೆಯಲು ತಂತ್ರ
ಮಕ್ಕಳನ್ನು ಸರಕಾರಿ ಶಾಲೆಯತ್ತ ಸೆಳೆಯಲು ಕಸರತ್ತು ನಡೆಸಲಾಗುತ್ತಿದೆ. ಕಳೆದ ಬಾರಿಯೂ ಕೆಲವೊಂದು ಸರಕಾರಿ ಶಾಲೆಗಳು ಮಕ್ಕಳನ್ನು ಸೆಳೆಯಲು 1ನೇ ತರಗತಿಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಒಂದು ಸಾವಿರ ರೂಪಾಯಿ ಗೌರವ, ಪ್ರೋತ್ಸಾಹ ಧನವನ್ನು ನೀಡಿತ್ತು. ಕೆಲವೊಂದು ಶಾಲೆಗಳಲ್ಲಿ ಪ್ರತ್ಯೇಕ ನ್ಪೋಕನ್‌ ಇಂಗ್ಲಿಷ್‌ ತರಗತಿಗಳನ್ನು ಕೂಡ ತೆರೆದಿತ್ತು. ಈ ಬಾರಿಯೂ ಬಹುತೇಕ ಶಾಲಾ ಪೋಷಕರು ಮಕ್ಕಳನ್ನು ಸೆಳೆಯಲು ನಾನಾ ಯೋಜನೆಯನ್ನು ರೂಪಿಸುತ್ತಿದ್ದಾರೆ.

ಪೋಷಕರಿಗೆ ಬಿಸಿಲಿನದ್ದೇ ಚಿಂತೆ
ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆಗಳು ಆರಂಭ ವಾಗಿದ್ದರೂ ನೀರಿಲ್ಲದೆ, ಬಿಸಿಲಿನಿಂದ ಮಕ್ಕಳಿಗೆ ಸಮಸ್ಯೆ ಯಾಗುವುದರಿಂದ ಮಕ್ಕಳನ್ನು ಶಾಲೆಗೆ ಕಳುಸಲು ಪೋಷಕರು ಹಿಂದೇಟು ಹಾಕುತಿದ್ದಾರೆ.

ನೀರಿನ ಸಮಸ್ಯೆ ಒಂದಷ್ಟು ಶಾಲೆಗಳಲ್ಲಿ ಇವೆ. ನೀರಿನ ಅಭಾವವಿರುವ ಶಾಲೆಗಳಿಗೆ ನೀರು ಪೂರೈಕೆಯನ್ನು ಮಾಡುವಂತೆ ಸ್ಥಳಿಯ ಗ್ರಾ.ಪಂ ಹಾಗೂ ಪುರಸಭೆಗಳಿಗೆ ಮನಯನ್ನು ಮಾಡಿಕೊಳ್ಳಲಾಗಿದೆ. ಎಲ್ಲೂ ಯಾವೊಂದು ಮಗುವಿಗೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಪೋಷಕರು ಆತಂಕ ಪಡುವ ಆವಶ್ಯಕತೆಯಿಲ್ಲ. ಸಂಭ್ರಮದೊಂದಿಗೆ ಶಾಲಾ ಆರಂಭೋತ್ಸವ ನಡೆಯಲಿದೆ.
-ಚಂದ್ರಯ್ಯ, ತಾಲೂಕು ಶಿಕ್ಷಣಾಧಿಕಾರಿ ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next