Advertisement

ಉರಿ ಬಿಸಿಲಲ್ಲೇ ಪಾಠ; ಪಾಲಕರ ಪೀಕಲಾಟ

01:15 PM May 14, 2022 | Team Udayavani |

ಕಲಬುರಗಿ: ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲೆಗಳನ್ನು ಸರ್ಕಾರ ಮೇ 16ರಿಂದ ಆರಂಭಿಸಲು ಹೆಜ್ಜೆ ಇಟ್ಟಿದೆ. ಆದರೆ, ಇದಕ್ಕೆ ಪಾಲಕರು ವಿರೋಧಿಸಿದ್ದು, ರಣ ಬಿಸಿಲಿನಿಂದ ಮೊದಲೇ ಹೈರಾಣಾಗಿರುವ ಮಕ್ಕಳನ್ನು ಇನ್ನಷ್ಟು ಹೈರಾಣ ಮಾಡಬೇಡಿ.

Advertisement

ಸಂಪ್ರದಾಯದಂತೆ ಜೂ. 1ಕ್ಕೆ ಶಾಲೆ ಆರಂಭಿಸಿ ಎನ್ನುವ ಕೂಗು ಬಲವಾಗಿ ಕೇಳಿ ಬರುತ್ತಿದೆ. ಇದಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ಧ್ವನಿಗೂಡಿಸಿವೆ. ವಿರೋಧದ ಮಧ್ಯೆಯೂ ಜಿಲ್ಲೆಯ 3780 ಕಿರಿಯ, ಹಿರಿಯ ಮತ್ತು ಪ್ರೌಢ ಶಾಲೆಗಳು ಆರಂಭಗೊಳ್ಳುತ್ತಿವೆ. ಇದರ ಮಧ್ಯೆ ಕಳೆದೆರಡು ದಿನಗಳಿಂದ ವಾತಾವರಣದಲ್ಲಿ ಭಾರಿ ಬದಲಾವಣೆ ಕಂಡು ಬಂದಿದೆ.

ಚಂಡಮಾರುತದ ಪರಿಣಾಮ ಮೋಡ ಕವಿದ ವಾತಾವರಣ ಇದ್ದು, ಅಲ್ಲಲ್ಲಿ ಸಣ್ಣದಾಗಿ ಮಳೆಯಾಗುತ್ತಿದೆ. ಬಿರುಗಾಳಿ ಅನಾಹುತ ಉಂಟು ಮಾಡುತ್ತಿದೆ. ಇದನ್ನೆ ನೆಪವಾಗಿಟ್ಟು ಕೊಂಡಿರುವ ಶಿಕ್ಷಣ ಇಲಾಖೆ, ಶಾಲೆ ಆರಂಭಕ್ಕೆ ಒಳ್ಳೆಯ ವಾತಾವರಣ ಇದೆ ಎನ್ನುತ್ತಿದ್ದಾರೆ.

ಕಳೆದ ಒಂದು ವಾರದಿಂದ ಕಲಬುರಗಿ ಸೇರಿದಂತೆ ಸುತ್ತಲಿನ ಜಿಲ್ಲೆಗಳಲ್ಲಿ ರಣಬಿಸಿಲು ಜನರನ್ನು ಹಣಿಯುತ್ತಿದೆ. 42 ಡಿಗ್ರಿ ಸೆಲ್ಸಿಯಸ್‌ ದಾಟುತ್ತಿದೆ. ಇದರಿಂದ ಬೆಳಗ್ಗೆ 10ಕ್ಕೆ ಜನರು ಬೆವರಲು ಶುರುವಾಗುತ್ತಾರೆ. ಮಧ್ಯಾಹ್ನವಂತೂ ಸಹಿಸುವುದೇ ಕಷ್ಟ ಎನ್ನುವಷ್ಟು ಸೆಕೆ. ಹೊರಗೆ ಝಳ (ಬಿಸಿ ಗಾಳಿ) ಇರುತ್ತದೆ. ಇಂತಹದ್ದರಲ್ಲಿ ಮಕ್ಕಳನ್ನು ಶಾಲೆಗೆ ಕಳಿಸುವುದು ದೊಡ್ಡ ಸಾಹಸ. ಡಿಹೈಡ್ರೇಷನ್‌ (ನಿರ್ಜಲೀಕರಣ) ಸಮಸ್ಯೆ ಕಾಡುತ್ತದೆ. ನಾವು ಅಪಾಯಕ್ಕೆ ಮಕ್ಕಳನ್ನು ತಳ್ಳಿದಂತಾಗುತ್ತದೆ ಎನ್ನುತ್ತಾರೆ ಪಾಲಕರು.

ಜಿಲ್ಲೆಯ 1032 ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಕಿರಿಯ ಪ್ರಾಥಮಿಕ ಶಾಲೆಗಳು, 1894 ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು 889 ಪ್ರೌಢ ಶಾಲೆಗಳು ಆರಂಭಕ್ಕೆ ಸಜ್ಜಾಗುತ್ತಿವೆ. ಈಗಾಗಲೇ ಜಿಲ್ಲೆಯ ಬೇಡಿಕೆಯಂತೆ ಶೇ. 34ರಷ್ಟು ಪುಸ್ತಕಗಳ ಸರಬರಾಜು ಆಗಿದೆ. ಇನ್ನಷ್ಟು ಶೀಘ್ರವೇ ಬರುತ್ತವೆ. ಪುಸ್ತಕ ಕೊರತೆ ಆಗುವುದಿಲ್ಲ. ಸಮವಸ್ತ್ರಗಳು ಸಮಯಕ್ಕೆ ಸರಿಯಾಗಿ ಜೂನ್‌ ಕೊನೆ ವಾರದೊಳಗೆ ಮಕ್ಕಳಿಗೆ ಲಭ್ಯವಾಗುತ್ತವೆ. ಕುಡಿವ ನೀರು, ಶೌಚಾಲಯ ವ್ಯವಸ್ಥೆ ನಡೆದಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

Advertisement

ಶಿಕ್ಷಣ ಸಚಿವರ ಗಡಿಬಿಡಿ ಕಲ್ಯಾಣ ಕರ್ನಾಟಕದ ಮಕ್ಕಳಿಗೆ ತುಸು ಹೈರಾಣ ಮಾಡಲಿದೆ. ನಮ್ಮಲ್ಲಿ 42 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಬಿಸಿಲಿರುತ್ತದೆ. ಇದು ಮಕ್ಕಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಸರ್ಕಾರ ಆಲೋಚನೆ ಮಾಡಿ ನಿರ್ಧಾರ ಕೈಗೊಳ್ಳಬೇಕು. ಶಾಲೆಗಳಲ್ಲಿ ಕುಡಿಯಲು ನೀರಿಲ್ಲ. ಶೌಚಾಲಯಗಳು ಅಷ್ಟಕಷ್ಟೆ. ಕೆಲವು ಖಾಸಗಿ ಶಾಲೆಗಳಲ್ಲಿ ಎರಡೂ ಇಲ್ಲ. ಈ ಬಗ್ಗೆ ಸರ್ಕಾರಕ್ಕೆ ಗಮನವಿದೆಯೇ? -ಲಿಂಗರಾಜ ಸಿರಗಾಪುರ, ಅಧ್ಯಕ್ಷ, ಕನ್ನಡ ಭೂಮಿ ಜಾಗೃತ ಸಮಿತಿ

-ಸೂರ್ಯಕಾಂತ ಎಂ.ಜಮಾದಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next