Advertisement

ರಜೆ ಕಳೆದು ಇಂದು ಶಾಲೆ ಪುನರಾರಂಭ 

09:56 AM May 28, 2018 | Team Udayavani |

ಮಹಾನಗರ : ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮೇ 28ರಂದು ಆರಂಭಗೊಳ್ಳಲಿವೆ. ಸುಮಾರು 50 ದಿನಗಳ ಸುದೀರ್ಘ‌ ರಜೆಯ ಬಳಿಕ ವಿದ್ಯಾರ್ಥಿಗಳು ಮರಳಿ ಶಾಲೆಯತ್ತ ನಡಿಗೆ ಆರಂಭಿ ಸಲಿದ್ದಾರೆ. ಶಾಲಾ ಆವರಣ ಮತ್ತೆ ಕಳೆಗಟ್ಟಲಿದೆ.

Advertisement

ಖಾಸಗಿ ಶಾಲೆಗಳು ಮೇ 28ರಂದು ಹಾಗೂ ಸರಕಾರಿ ಶಾಲೆಗಳಲ್ಲಿ ಮೇ 29ರಂದು ಪ್ರಾರಂಭೋತ್ಸವ ಆಯೋಜಿಸಲಾಗುತ್ತಿದೆ. ಶಾಲಾ ಪ್ರಾರಂಭೋತ್ಸವವನ್ನು ಯಾಂತ್ರಿಕ ಪ್ರಕ್ರಿಯೆ ಎಂದು ಪರಿಗಣಿಸದೆ ಮುಖ್ಯ ಶಿಕ್ಷಕರು, ಸಹಶಿಕ್ಷಕರು, ಎಸ್‌ಡಿಎಂಸಿ, ಹೆತ್ತವರು ಸಹಿತ ಮಕ್ಕಳನ್ನು ಗಣ್ಯರಂತೆ ಸ್ವಾಗತಿಸಬೇಕು. ಶಾಲೆಗಳನ್ನು ತಳಿರು ತೋರಣ ಗಳಿಂದ ಸಿಂಗರಿಸಬೇಕು. ಮೇ 28ರಂದು ಶಿಕ್ಷಕರು ಶಾಲೆಗೆ
ಆಗಮಿಸಿ ಶಾಲೆ ಪ್ರಾರಂಭೋತ್ಸವದ ಪೂರ್ವಸಿದ್ಧತೆ ಮಾಡಬೇಕು ಎಂದು ಶಿಕ್ಷಣ ಇಲಾಖೆ ಈಗಾಗಲೇ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿ ಸೂಚಿಸಿದೆ.

ಶೇ. 75ರಷ್ಟು ಪಠ್ಯಪುಸ್ತಕಗಳು ಸರಬರಾಜು
ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಪಠ್ಯಪುಸ್ತಕಗಳು ಉಚಿತವಾಗಿ ದೊರೆಯುತ್ತವೆ. ಆದರೆ ಖಾಸಗಿ ಶಾಲೆಗಳಲ್ಲಿ ಮಕ್ಕಳೇ ಖರೀದಿಸಬೇಕಾಗುತ್ತದೆ. ಸರಕಾರದಿಂದ ಈಗಾಗಲೇ ಶೇ.75ರಷ್ಟು ಪಠ್ಯಪುಸ್ತಕಗಳು ಸರಬರಾಜು ಆಗಿದ್ದು, ಶಾಲಾ ಆರಂಭೋತ್ಸವದಂದೇ ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಲು ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಮೇ 31 ರೊಳಗೆ ಬಾಕಿ ಇರುವ ಪಠ್ಯಪುಸ್ತಕಗಳು ಸರಬರಾಜು ಆಗುವ ನಿರೀಕ್ಷೆ ಇದೆ. 

ಕಳೆದ ಸಾಲಿನಲ್ಲೂ ಶಾಲಾ ಆರಂಭದ ವೇಳೆಗೆ ಶೇ.75 ರಷ್ಟು ಪಠ್ಯಪುಸ್ತಕಗಳು ಪೂರೈಕೆಯಾಗಿದ್ದು ಉಳಿದ ಪುಸ್ತಕಗಳು ಜೂನ್‌ ತಿಂಗಳಿನಲ್ಲಿ ಸರಬರಾಜು ಆಗಿತ್ತು. ಸರಕಾರಿ ಶಾಲೆಗಳಲ್ಲಿ ಬರೆಯುವ ಪುಸ್ತಕಗಳನ್ನು ಮಕ್ಕಳು ಹೊಂದಿಸಿಕೊಳ್ಳಬೇಕಾಗುತ್ತದೆ. ಖಾಸಗಿ ವಿದ್ಯಾಸಂಸ್ಥೆಗಳ ಹೆಚ್ಚಿನ ಶಾಲೆಗಳಲ್ಲಿ ಬಹುತೇಕ ಪಠ್ಯ ಹಾಗೂ ಬರೆಯುವ ಪುಸ್ತಕಗಳನ್ನು ಶಾಲೆಗಳಲ್ಲಿ ಮಕ್ಕಳಿಗೆ ಈಗಾಗಲೇ ಸರಬರಾಜು ಮಾಡಲಾಗಿದೆ.

ಪ್ರವೇಶ ಪ್ರಕ್ರಿಯೆ
ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಎಲ್‌ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಗಳಿಗೆ ಪ್ರವೇಶಾತಿ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಸರಕಾರಿ ಶಾಲೆಗಳಲ್ಲಿ ಒಂದನೇ ತರಗತಿಗಳಿಗೆ ಜೂ.1ರಿಂದ ಪ್ರವೇಶಾತಿ ಪ್ರಕ್ರಿಯೆಗಳು ನಡೆಯುತ್ತವೆ.

Advertisement

ಸಮವಸ್ತ್ರ ಬಂದಿಲ್ಲ
ಸರಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರ ಸರಕಾರದಿಂದಲೇ ವಿತರಣೆಯಾಗುತ್ತಿದ್ದು ಸಾಮಾನ್ಯ ವಾಗಿ ಶಾಲಾ ಪ್ರಾರಂಭೋತ್ಸವದಂದೇ ಇವುಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತದೆ. ಆದರೆ ಈ ಬಾರಿ ಸರಕಾರಿ ಶಾಲೆಗಳಿಗೆ ಸಮವಸ್ತ್ರಗಳು ಈವರೆಗೆ ಸರಬರಾಜು ಆಗಿಲ್ಲ.

ಶಿಕ್ಷಣ ಇಲಾಖೆಯಿಂದ ಈಗಾಗಲೇ 20 ಜಿಲ್ಲೆಗಳಿಗೆ ಸಮವಸ್ತ್ರ ಸರಬರಾಜು ಆಗಿದ್ದು ಮೈಸೂರು ಹಾಗೂ ಬೆಂಗಳೂರು ವಿಭಾಗಕ್ಕೆ ಜೂನ್‌ 1 ರ ವೇಳೆಗೆ ಸರಬರಾಜು ಆಗುವ ನಿರೀಕ್ಷೆ ಇದೆ. ಶಿಕ್ಷಣ ಇಲಾಖೆ ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಚೇರಿಗೆ ಬಂದು ಅಲ್ಲಿಂದ ಶಾಲೆಗಳಿಗೆ ರವಾನೆಯಾಗುತ್ತದೆ.

ಖಾಸಗಿ ಶಾಲೆಗಳು ನಿರ್ದಿಷ್ಟ ವಿನ್ಯಾಸದ ಸಮವಸ್ತ್ರಗಳನ್ನು ನಿಗದಿಪಡಿಸಿ ವಿದ್ಯಾರ್ಥಿಗಳಿಗೆ ಪೂರೈಸುತ್ತವೆ. ಇನ್ನು ಕೆಲವು ಶಾಲೆಗಳು ನಿಗದಿಪಡಿಸಿದ ಸಮ ವಸ್ತ್ರಗಳನ್ನು ಹೆತ್ತವರು ಖರೀದಿಸಿ ಹೊಲಿಸಬೇಕಾಗುತ್ತದೆ.ಇನ್ನುಳಿದಂತೆ ಪೂರಕ ಉಡುಪುಗಳು, ಸ್ಕೂಲ್‌ ಬ್ಯಾಗ್‌ಗಳು, ಟಿಪಿನ್‌ ಕ್ಯಾರಿಯರ್‌, ನೀರಿನ ಬಾಟಲ್‌, ಶೂ, ಕೊಡೆ, ರೈನ್‌ಕೋಟ್‌, ಚಪ್ಪಲಿಗಳು ಹೀಗೆ ಹತ್ತಾರು ಪರಿಕರಗಳನ್ನು ಪೋಷಕರು ಹೊಂದಿಸಿಕೊಳ್ಳುತ್ತಿದ್ದಾರೆ.

ಪ್ರಾರಂಭೋತವದಂದೇ ಪಾಠ ಪ್ರವಚನ
ಮೇ 29ರಂದು ಶಾಲಾ ಪ್ರಾರಂಭೋತ್ಸವದ ದಿನದಿಂದಲೇ ಎಲ್ಲ ಶಿಕ್ಷಕ/ ಶಿಕ್ಷಕಿಯರು ಪಾಠ ಪ್ರವಚನಗಳನ್ನು ಆರಂಭಿಸುವ ಮೂಲಕ ಪ್ರಾರಂಭೋತ್ಸವದ ಕಾರ್ಯಕ್ರಮವನ್ನು ಅರ್ಥ ಪೂರ್ಣಗೊಳಿಸಬೇಕು ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಮೊದಲ ದಿನ 2 ಅವಧಿಗಳಲ್ಲಿ ಮಕ್ಕಳನ್ನು ಸ್ವಾಗತಿಸುವ ಕಾರ್ಯಕ್ರಮ ಹಮ್ಮಿಕೊಂಡು ಮೂರನೇ ಅವಧಿಯಿಂದಲೇ ಪಾಠಗಳನ್ನು ಆರಂಭಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಮೇ 31ರೊಳಗೆ ಎಲ್ಲ ಪಠ್ಯಪುಸ್ತಕಗಳ ಸರಬರಾಜು
ಶಾಲಾ ಆರಂಭಕ್ಕೆ ಸಿದ್ಧತೆಗಳನ್ನು ಮಾಡಲಾಗಿದೆ. ಮೇ 24ರಂದು ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆ ನಡೆಸಲಾಗಿದೆ. ಮೇ 28ರಂದು ಶಾಲೆಗಳು ಆರಂಭಗೊಳ್ಳಲಿದ್ದು, ಮೇ 29ರಂದು ಶಾಲಾ ಪ್ರಾರಂಭೋತ್ಸವದ ಬಳಿಕ ಪಾಠ ಪ್ರವಚನಗಳು ಆರಂಭಗೊಳ್ಳಲಿವೆ. ಈಗಾಗಲೇ ಶೇ. 75ರಷ್ಟು ಪಠ್ಯಪುಸ್ತಕಗಳು ಶಾಲೆಗಳಿಗೆ ಸರಬರಾಜು ಆಗಿವೆ. ಮೇ 31ರೊಳಗೆ ಎಲ್ಲ ಪಠ್ಯಪುಸ್ತಕಗಳು ಸರಬರಾಜು ಆಗಲಿವೆ. ಸಮವಸ್ತ್ರಗಳು ನಮ್ಮ ಜಿಲ್ಲೆಗೆ ಈ ತಿಂಗಳಾಂತ್ಯದೊಳಗೆ ಬರುವ ನಿರೀಕ್ಷೆ ಇದೆ.
– ಶಿವರಾಮಯ್ಯ, ಉಪನಿರ್ದೇಶಕರು, ಜಿಲ್ಲಾ ವಿದ್ಯಾಂಗ

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next