Advertisement

ಶಾಲೆ ದುರಸ್ತಿಗೆ ಪ್ರಥಮ ಆದ್ಯತೆ

12:26 PM May 20, 2022 | Team Udayavani |

ಕುಂದಾಪುರ: ಈಗ ಎಲ್ಲೆಡೆ ಮಳೆಯಾಗುತ್ತಿದ್ದು ದುರಸ್ತಿ ಅವಶ್ಯ ವಿರುವ ಶಾಲಾ ಕಟ್ಟಡಗಳಿದ್ದರೆ ತತ್‌ಕ್ಷಣ ಕ್ರಮ ಕೈಗೊಳ್ಳಲಾಗುವುದು. ಅಪಾಯ ಕಾರಿ ಮರಗಳ ತೆರವು ಆಗಬೇಕಿದ್ದಲ್ಲಿ ಅವುಗಳ ಮಾಹಿತಿ ನೀಡಿ. ಹಾಸ್ಟೆಲ್‌ಗ‌ಳಲ್ಲಿ ಮಕ್ಕಳಿಗೆ ಬಟ್ಟೆ ಒಣಗಿಸಲು ಪ್ರತ್ಯೇಕ ವ್ಯವಸ್ಥೆ ಆಗಬೇಕಿದ್ದರೂ ಅದಕ್ಕೆ ಅನುದಾನ ಒದಗಿಸಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗು ವುದು ಎಂದು ಜಿ.ಪಂ. ಯೋಜನಾ ನಿರ್ದೇಶಕ, ತಾ.ಪಂ. ಆಡಳಿತಾಧಿಕಾರಿ ಶ್ರೀನಿವಾಸ ರಾವ್‌ ಹೇಳಿದರು.

Advertisement

ಅವರು ಗುರುವಾರ ಇಲ್ಲಿ ತಾ.ಪಂ. ಸಭೆ ನಡೆಸಿ, ಹಾಸ್ಟೆಲ್‌ಗ‌ಳು ಸುವ್ಯವಸ್ಥಿತ ವಾಗಿ ಇರುವಂತೆ ನೋಡಿಕೊಳ್ಳಬೇಕು. ಮೂಲ ಸೌಕರ್ಯ ಉತ್ತಮವಾಗಿ ಇರಬೇಕು. ಅಡುಗೆ ಮನೆ, ಲೈಬ್ರರಿ ಇತ್ಯಾದಿಗಳು ಸರಿ ಇರಬೇಕು ಎಂದು ಬಿಸಿಎಂ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿದರು. ಹಾಸ್ಟೆಲ್‌ ಮಾಡಿಗೆ ಶೀಟ್‌ ಹಾಕಿಸುವುದಾದರೆ ಶಬ್ದ ಬರದಂತಹ ಶೀಟ್‌ ಹಾಕಿಸಿ. ಶಾಲೆ ದುರಸ್ತಿ ಹಾಗೂ ಹಾಸ್ಟೆಲ್‌ ಮೂಲಸೌಕರ್ಯಕ್ಕೆ ಅವಶ್ಯವಿದ್ದರೆ ಮಾಹಿತಿಕೊಡಿ ಎಂದು ಬಿಸಿಎಂ ಅಧಿಕಾರಿ ನರಸಿಂಹ ಪೂಜಾರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್‌ ಅವರಲ್ಲಿ ಮಾಹಿತಿ ಪಡೆದರು.

ಮುಂಜಾಗರೂಕತೆ ವಹಿಸಿ

ಬೈಂದೂರು ತಾಲೂಕಿಗೆ ಶಿಕ್ಷಣ ಇಲಾಖೆ ಪ್ರತ್ಯೇಕವಾದ ಕಾರಣ ರಾಜ್ಯಮಟ್ಟದಲ್ಲಿ ಅನುದಾನ ವಿಂಗಡಿಸುವಾಗ ತಪ್ಪಾಗಿ ಹಂಚಿಕೆಯಾಗಿದೆ. ಅದನ್ನು ಜಿ.ಪಂ. ಹಂತದಲ್ಲಿ ಸರಿಪಡಿಸಲಾಗಿದೆ ಎಂದರು. ಶಾಲೆಗಳಲ್ಲಿ ಟೊಮೆಟೊ ಜ್ವರ ಇದೆಯೇ ಎಂದು ಶಿಕ್ಷಣಾಧಿಕಾರಿಗಳಾದ ಅರುಣ್‌ ಕುಮಾರ್‌ ಶೆಟ್ಟಿ, ಮುಂದಿನ ಮನಿ ಅವರನ್ನು ಪ್ರಶ್ನಿಸಿದರು. ಶಾಲೆಗಳಲ್ಲಿ ಖಾಯಿಲೆ ಬಂದರೆ, ಮುದೂರು ಪರಿಸರದಂತೆ ಡೆಂಗ್ಯೂ ಬಂದರೆ ತತ್‌ಕ್ಷಣ ಅದು ಎಲ್ಲ ಮಕ್ಕಳಿಗೂ ಹರಡದಂತೆ ಮುಂಜಾಗರೂಕತೆ ವಹಿಸಿ. ಅನಾರೋಗ್ಯಪೀಡಿತ ವಿದ್ಯಾರ್ಥಿಗೆ ರಜೆ ನೀಡಿ ಎಂದರು.

ಹಾಸ್ಟೆಲ್‌ ಆವರಣದಲ್ಲೂ ಗಿಡ ನೆಡಿ

Advertisement

ಶಾಲೆಗಳಲ್ಲಿ ವನಮಹೋತ್ಸವ ನಡೆಸಲು ಸಮಾಜಿಕ ಅರಣ್ಯ ಇಲಾಖೆಯಿಂದ ಗಿಡಗಳನ್ನು ಪಡೆದುಕೊಳ್ಳ ಬಹುದು. ಬೇಡಿಕೆಗಳ ಪಟ್ಟಿ ನೀಡಿ. ಪಂಚಾಯತ್‌ ಹಂತದಲ್ಲಿ ವಿಂಗಡಿಸಿ ನೀಡಿದರೆ ಸಾಗಾಟದ ವೆಚ್ಚ ಪಂಚಾಯತ್‌ ಗಳಿಂದ ಪಡೆಯಬಹುದು. ಹಾಸ್ಟೆಲ್‌ ಗಳ ಆವರಣದಲ್ಲೂ ಗಿಡಗಳನ್ನು ನೆಡಬಹುದು. ದೊಡ್ಡ ಪ್ರಮಾಣದಲ್ಲಿ ಗಿಡಗಳನ್ನು ನೆಡುವುದಾದರೆ ನರೇಗಾ ಯೋಜನೆಯನ್ನು ಬಳಸಬಹುದು ಎಂದು ಸಾಮಾಜಿಕ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ತುಳಸಿ, ನರೇಗಾ ಸಹಾಯಕ ನಿರ್ದೇಶಕ ರಾಜೇಶ್‌ ಕೆ.ಸಿ. ಅವರಿಂದ ಮಾಹಿತಿ ಪಡೆದರು.

15ನೆಯ ಹಣಕಾಸು ಯೋಜನೆಯಲ್ಲಿ ಅನುದಾನ ಇದೆ, ಕೊರತೆ ಇಲ್ಲ. ಯಾವುದೇ ಇಲಾಖೆಗಳದ್ದು ಅಭಿವೃದ್ಧಿ, ಜನಪರ ಸೌಕರ್ಯದ ಬೇಡಿಕೆಗಳಿದ್ದರೆ ಪಟ್ಟಿಕೊಡಿ. ಆದರೆ ಸೂಕ್ತ ದಾಖಲೆ, ಛಾಯಾಚಿತ್ರಗಳಿರಬೇಕು ಎಂದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next