Advertisement

ಹೊಸ ವರ್ಷದಂದೇ ಶಾಲಾ ತರಗತಿ ಆರಂಭ: ಪ್ರತೀ ಶಾಲೆಯಲ್ಲೂ ಐಸೊಲೇಶನ್‌ ಕೊಠಡಿ

12:46 AM Dec 20, 2020 | sudhir |

ಬೆಂಗಳೂರು: ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹೊಸ ವರ್ಷದ ಮೊದಲ ದಿನದಿಂದಲೇ ತರಗತಿಗಳು ಆರಂಭವಾಗಲಿವೆ.

Advertisement

ಇದರ ಸಾಧಕ- ಬಾಧಕಗಳ ಆಧಾರದಲ್ಲಿ ಜ. 15ರಿಂದ 11ನೇ ತರಗತಿ ಆರಂಭಿಸಲಾಗುತ್ತದೆ. ಆದರೆ ಹಾಜರಾತಿ ಕಡ್ಡಾಯವಿಲ್ಲ ಮತ್ತು ವಿದ್ಯಾರ್ಥಿಗಳಿಗೆ ಶಾಲೆಗೆ ಬರಲೇಬೇಕೆಂದು ಒತ್ತಡ ಹೇರುವಂತೆಯೂ ಇಲ್ಲ. ಹಾಗೆಯೇ 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಜ. 1ರಿಂದಲೇ ವಿದ್ಯಾಗಮ ಆರಂಭವಾಗಲಿದೆ.

ಸಿಎಂ ಬಿಎಸ್‌ವೈ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆ ಕಡ್ಡಾಯವಿಲ್ಲ. ಆದರೆ ಪಾಲಕರಿಂದ ಅನುಮತಿ ಪತ್ರದ ಜತೆಗೆ ಕೊರೊನಾ ಲಕ್ಷಣ ಇಲ್ಲ ಎಂಬ ಖಾತರಿಪತ್ರವನ್ನು ಶಾಲೆಗೆ ನೀಡಬೇಕು ಎಂದು ಸೂಚಿಸಲಾಗಿದೆ. ತರಗತಿ, ವಿದ್ಯಾಗಮ ನಡೆಸುವ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಕಿರಿಯರಿಗೂ ವಿದ್ಯಾಗಮ
ಜ. 14ರಿಂದ 1ರಿಂದ 5ನೇ ತರಗತಿಗಳಿಗೆ ವಿದ್ಯಾಗಮ ವಿಸ್ತರಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಬಿಸಿಯೂಟದ ಬದಲು ಆಹಾರ ಧಾನ್ಯ ವಿತರಿಸಲಿದ್ದೇವೆ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಾರೆ.

ಪಠ್ಯಕ್ರಮ ನಿಗದಿ
10 ಮತ್ತು 12ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸಬೇಕಾಗಿದ್ದು, ಸಿದ್ಧತೆ ಆರಂಭವಾಗಿದೆ. ಪಿಯುಸಿ ಪಠ್ಯಗಳನ್ನು ಎನ್‌ಸಿಇ ಆರ್‌ಟಿ ಮಾರ್ಗದರ್ಶಿ ಸೂತ್ರ ಗಳನ್ವಯ ಕಡಿತ ಮಾಡಿದ್ದೇವೆ. ಎಸೆಸೆಲ್ಸಿ ಪಠ್ಯ ಕಡಿತ ಸಂಬಂಧ ಮುಂದೆ ಸಿಗಬಹುದಾದ ಶೈಕ್ಷಣಿಕ ದಿನಗಳ ಆಧಾರದಲ್ಲಿ ಮುಂದಿನವಾರ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

Advertisement

ಕೋವಿಡ್‌ ಇದ್ದರೆ ಬರಬೇಡಿ
ಶೀತ, ನೆಗಡಿ, ಕೆಮ್ಮು ಮತ್ತಿತರ ಕೋವಿಡ್‌ ಲಕ್ಷಣಗಳಿರುವ ಮಕ್ಕಳು ಶಾಲೆಗೆ ಬರುವಂತಿಲ್ಲ. ಶಾಲೆಯಲ್ಲೇ ಮಕ್ಕಳಿಗೆ ಇಂತಹ ಲಕ್ಷಣ ಕಾಣಿಸಿ ಕೊಂಡರೆ ಪ್ರತ್ಯೇಕವಾಗಿರಿಸಲು ಪ್ರತೀ ಶಾಲೆಯಲ್ಲೂ ಒಂದು ಐಸೊಲೇಶನ್‌ ಕೊಠಡಿ ಇರಲಿದೆ. ಅನಂತರ ಕೊರೊನಾ ಪರೀಕ್ಷೆ ಇತ್ಯಾದಿ ವ್ಯವಸ್ಥೆಯಾಗಲಿದೆ.

ಶಾಲಾರಂಭಕ್ಕೆ ಮುನ್ನ ಸಭೆ
ತರಗತಿಗಳಲ್ಲಿ ಶಿಕ್ಷಕರು ಕೋವಿಡ್‌ ಲಕ್ಷಣಗಳಿಗಾಗಿ ವಿದ್ಯಾರ್ಥಿಗಳನ್ನು ಪ್ರತೀ ದಿನವೂ ಪರೀಕ್ಷಿಸಬೇಕು. ಲಕ್ಷಣ ಇದ್ದರೆ ಅಂಥವರನ್ನು ಪರೀಕ್ಷೆ ಮತ್ತು ಸಮಾಲೋಚನೆಗೆ ಸಮೀಪದ ಆಸ್ಪತ್ರೆಗೆ ಕಳುಹಿಸಬೇಕು. ಶಾಲಾರಂಭಕ್ಕೆ ಮುನ್ನ ಶೈಕ್ಷಣಿಕ ಪಾಲುದಾರರ ಸಭೆ ನಡೆಸಿ ತರಗತಿ ಪುನರಾರಂಭ ಕುರಿತು ವಿಶ್ವಾಸ ಮೂಡಿಸಬೇಕು.

ಆನ್‌ಲೈನ್‌ ಅವಕಾಶ ಇದೆ
ಆನ್‌ಲೈನ್‌ – ಆಫ್ಲೈನ್‌ ಕಲಿಕೆಗೆ ಅವಕಾಶ ಕಲ್ಪಿಸಬೇಕು. ಆದರೆ ವಸತಿ ಶಾಲೆ, ವಿದ್ಯಾರ್ಥಿ ನಿಲಯ ನಿವಾಸಿ ವಿದ್ಯಾರ್ಥಿಗಳು ಪ್ರವೇಶ ಪಡೆಯುವ 72 ತಾಸುಗಳಿಗೆ ಮುನ್ನ ಕೊರೊನಾ ನೆಗೆಟಿವ್‌ ವರದಿ ಸಲ್ಲಿಸಬೇಕಿದೆ.

ವಿದ್ಯಾಗಮ ಈ ಬಾರಿ ಶಾಲಾವರಣದಲ್ಲಿ ನಡೆಯಲಿದೆ. ವಾರಕ್ಕೆ ಮೂರು ದಿನ ವಿದ್ಯಾರ್ಥಿಗಳು ಬರಲು ಬೇಕಾದ ವ್ಯವಸ್ಥೆ ಮಾಡಿದ್ದೇವೆ. ಇದಕ್ಕೂ ಪಾಲಕ, ಪೋಷಕರ ಒಪ್ಪಿಗೆ  ಪತ್ರ ಕಡ್ಡಾಯ.

-ಸುರೇಶ್‌ ಕುಮಾರ್‌, ಶಿಕ್ಷಣ ಸಚಿವರು

ಸಭೆಯ ತೀರ್ಮಾನಗಳು
1. ಶಾಲೆ-ಕಾಲೇಜುಗಳಲ್ಲಿ ತರಗತಿ ಕೊಠಡಿಗಳನ್ನು ಸೋಂಕು ಮುಕ್ತಗೊಳಿಸಬೇಕು.
2. ಅರ್ಧ ದಿನ ಮಾತ್ರ ತರಗತಿ. ಒಂದು ಕೊಠಡಿಯಲ್ಲಿ ಗರಿಷ್ಠ 15 ವಿದ್ಯಾರ್ಥಿಗಳು.
3. ಶಿಕ್ಷಣ ಇಲಾಖೆಯ ಮಾರ್ಗ ಸೂಚಿಗಳ ಪಾಲನೆ ಕಡ್ಡಾಯ.
4. ವಿದ್ಯಾಗಮದಡಿ ವಿದ್ಯಾರ್ಥಿಗಳು ವಾರಕ್ಕೆ 3 ಬಾರಿ ಶಾಲೆಗೆ ಹಾಜರಾಗಬೇಕು.
5. ಖಾಸಗಿ ಶಾಲಾಡಳಿತ ಮಂಡಳಿಗಳೂ ವಿದ್ಯಾಗಮ ನಡೆಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next