ಬದಿಯಡ್ಕ: ನೂತನ ಶಾಲಾ ವರ್ಷದ ಆರಂಭವನ್ನು ಹಬ್ಬದ ರೀತಿಯಲ್ಲಿ ಆಚರಿಸಿ ಶೈಕ್ಷಣಿಕ ಚಟುವಟಿಕೆಗಳನ್ನು ಸಂಭ್ರಮದಿಂದ ಸ್ವಾಗತಿಸೋಣ ಎಂದು ಬದಿಯಡ್ಕ ಪೆರಡಾಲ ಸರಕಾರಿ ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಹಿಮಾನ್ ಅನ್ನಡ್ಕ ಪ್ರವೇಶೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಹೇಳಿದರು.
ರಜೆ ಕಳೆದು ಬರುವ ಮಕ್ಕಳ ಸಂತಸ ಶಾಲೆಯಲ್ಲಿ ಇನ್ನಷ್ಟು ಹೆಚ್ಚಾಗಲಿ ಎಂದು ಅವರು ಹಾರೈಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮ ಅಧ್ಯಕ್ಷತೆ ವಹಿಸಿ ಮಾತನಾಡಿ ಹಿಂದಿನ ವರ್ಷ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶಕ್ಕೆ ಕಾರಣರಾದ ಮಕ್ಕಳನ್ನು, ರಕ್ಷಕರನ್ನು, ಶಿಕ್ಷಕರನ್ನು ಅಭಿನಂದಿಸಿದರು.
ಸಂಘದ ಸದಸ್ಯ ಮೊದು ಪಯ್ಯಲಡ್ಕ ಮಾತನಾಡಿ ಈ ವರ್ಷ ಶಾಲೆಯ ಸಾಧನೆ ಇನ್ನೂ ಉತ್ತಮಗೊಳ್ಳಲಿ ಎಂದು ಆಶಿಸಿದರು. ಮಾತೃ ರಕ್ಷಕ ಸಂಘದ ಅಧ್ಯಕ್ಷೆ ತಾಹಿರಾ ಹನೀಫ್, ಸದಸ್ಯೆ ಅನ್ನತ್ ಹಸನ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ ಸ್ವಾಗತಿಸಿ ಸ್ಟಾಫ್ ಸೆಕ್ರೆಟರಿ ಚಂದ್ರಹಾಸನ್ ನಂಬ್ಯಾರ್ ವಂದಿಸಿದರು. ಶಿಕ್ಷಕರಾದ ದಿವ್ಯಗಂಗ, ಚಂದ್ರಶೇಖರ, ರಿಶಾದ್, ರಾಜೇಶ್,
ಜಯಲತಾ, ಲಲಿತಾಂಬಾ ಸಹಕರಿಸಿದರು.
ಈ ಸಂದರ್ಭ ಶಾಲಾ ಅಧ್ಯಾಪಕರ ವತಿಯಿಂದ ನವಾಗತ ಮಕ್ಕಳಿಗೆ ಕಲಿಕೋಪರಣ ಕಿಟ್ ವಿತರಿಸಲಾಯಿತು. ಮಕ್ಕಳನ್ನು ಮೆರವಣಿಗೆಯಲ್ಲಿ ಕರೆತಂದು ಪ್ರವೇಶೋತ್ಸವ ಗೀತೆ ಹಾಡಿ ಬಲೂನ್, ಅಕ್ಷರ ಚಕ್ರ ವಿತರಿಸಿ ಸ್ವಾಗತಿಸಲಾಯಿತು.