Advertisement

ದಸರಾ ರಜೆ ಬಳಿಕವೂ ಶಾಲಾರಂಭ ಅನುಮಾನ : ಶಿಕ್ಷಣ ಇಲಾಖೆ

11:45 PM Oct 24, 2020 | sudhir |

ಬೆಂಗಳೂರು: ಅಕ್ಟೋಬರ್‌ ಅಂತ್ಯಕ್ಕೆ ದಸರಾ ರಜೆ ಮುಗಿಯಲಿದ್ದು, ಶಾಲಾರಂಭದ ಬಗ್ಗೆ ಸರಕಾರ ಇದುವರೆಗೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ವಿದ್ಯಾಗಮವನ್ನೇ ಇನ್ನಷ್ಟು ಪರಿಷ್ಕರಿಸಿ ಅನುಷ್ಠಾನಕ್ಕೆ ತರಲು ಸಾರ್ವಜನಿಕ ಶಿಕ್ಷಣ ಇಲಾಖೆ ಚಿಂತನೆ ನಡೆಸುತ್ತಿದೆ.

Advertisement

ರಜೆ ಮುಗಿಯುತ್ತಿದ್ದಂತೆ ಶಾಲೆ ಆರಂಭಿಸುವುದು ಕಷ್ಟ. ಈಗಷ್ಟೇ ಪದವಿ ತರಗತಿ ಆರಂಭದ ದಿನಾಂಕವನ್ನು ಸರಕಾರ ಪ್ರಕಟಿಸಿದೆ. ಪಿಯುಸಿ ತರಗತಿ ಆರಂಭದ ಬಗ್ಗೆ ಇನ್ನೂ ಸ್ಪಷ್ಟ ನಿರ್ದೇಶನ ಹೊರಡಿಸಿಲ್ಲ. ಹೀಗಾಗಿ ಶಾಲಾರಂಭ ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದೆ.

ರಜೆಯ ಬಳಿಕ ಮಕ್ಕಳ ಕಲಿಕೆಯ ನಿರಂತರತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವಿದ್ಯಾಗಮದ ನ್ಯೂನತೆಯನ್ನು ಸರಿಪಡಿಸಿ, ಅದನ್ನೇ ಅನುಷ್ಠಾನಕ್ಕೆ ತರುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರಕಾರದ ಹಂತದಲ್ಲಿ ಚಿಂತನೆ ನಡೆಯುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಶಾಲಾರಂಭ ವಿಳಂಬವಾದಷ್ಟು ಸರಕಾರಿ ಶಾಲೆಯ ಮಕ್ಕಳಿಗೆ ಅನನುಕೂಲ ಹೆಚ್ಚಾಗುತ್ತದೆ. ಖಾಸಗಿ ಶಾಲೆಗಳಲ್ಲಿ ಆನ್‌ಲೈನ್‌ ತರಗತಿ, ಪೂರ್ವ ಮುದ್ರಿತ ವೀಡಿಯೋ ತರಗತಿ, ವಾಟ್ಸ್‌ಆ್ಯಪ್‌ ಮೂಲಕ ನೋಟ್ಸ್‌ ಕಳುಹಿಸುವುದು ಮುಂತಾದವುಗಳ ಮೂಲಕ ಕಲಿಸಲಾಗುತ್ತಿದೆ.

ಆದರೆ, ಸರಕಾರಿ ಮಕ್ಕಳಿಗೆ ವಿದ್ಯಾಗಮ ಬಿಟ್ಟರೆ ಬೇರೆ ವ್ಯವಸ್ಥೆ ಇಲ್ಲ. ಪ್ರೌಢಶಾಲಾ ಮಕ್ಕಳಿಗೆ ದೂರದರ್ಶನದ ಮೂಲಕ ಸಂವೇದ ತರಗತಿ ನಡೆಸಲಾಗುತ್ತಿದೆ. ಇದನ್ನು ಮುಂದುವರಿಸುವ ಜತೆಗೆ ವಿದ್ಯಾಗಮವನ್ನು ಪರಿವರ್ತಿತ ರೂಪದಲ್ಲಿ ಅನುಷ್ಠಾನಕ್ಕೆ ತರಬೇಕು. ಸರಕಾರಿ ಶಾಲಾ ಮಕ್ಕಳ ಕಲಿಕೆಗೆ ಇನ್ನಷ್ಟು ಕಾರ್ಯಕ್ರಮ ರೂಪಿಸಬೇಕು ಎಂಬುದು ಶಿಕ್ಷಕರ ಆಗ್ರಹವಾಗಿದೆ.

Advertisement

ನೀಟ್‌: ರಾಜ್ಯ ರ್‍ಯಾಂಕ್‌ ಮಾಹಿತಿ ವಿಳಂಬ ಸಾಧ್ಯತೆ
ಬೆಂಗಳೂರು: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್‌) ಫಲಿತಾಂಶ ಹೊರಬಿದ್ದು ವಾರ ಕಳೆದಿದ್ದು, ರಾಜ್ಯದ ರ್‍ಯಾಂಕ್‌ ವಿವರ ಬರುವುದು ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದೆ.

ಅಖೀಲ ಭಾರತ ಮಟ್ಟದ ಕೋಟದ ಸೀಟು ಹಂಚಿಕೆಯ ಬಳಿಕ ರಾಜ್ಯ ಕೋಟದ ಸೀಟಿನ ಮಾಹಿತಿ ಕೇಂದ್ರದಿಂದ ಬರಲಿದೆ. ಅಲ್ಲಿಂದ ರ್‍ಯಾಂಕ್‌ ವಿವರ ಬಂದ ಬಳಿಕವೇ ರಾಜ್ಯ ಕೋಟದ ಸೀಟು ಹಂಚಿಕೆ ಮಾಡಲು ಸಾಧ್ಯ. ಆ ಹಿನ್ನೆಲೆಯಲ್ಲಿ ನೀಟ್‌ ಸೀಟು ಹಂಚಿಕೆ ಸ್ವಲ್ಪ ವಿಳಂಬವಾಗುವ ಸಾಧ್ಯತೆಯಿದೆ.

ಕೇಂದ್ರದಿಂದ ಮಾಹಿತಿ ಬಂದ ಬಳಿಕವೇ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗುತ್ತದೆ. ಎಂಜಿನಿಯರ್‌ ಸೀಟು ಹಂಚಿಕೆ ಕೌನ್ಸೆಲಿಂಗ್‌ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next