Advertisement

ಸ್ಕೂಲ್‌ ಆಫ್ ಎಕನಾಮಿಕ್ಸ್‌ ಅಂಗಳದಲ್ಲಿ ಅವ್ಯವಹಾರ?

04:15 PM Oct 28, 2017 | Team Udayavani |

ಬೆಂಗಳೂರು: ಪ್ರತಿಷ್ಠಿತ ಲಂಡನ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ ಮಾದರಿಯಲ್ಲಿ ಬೆಂಗಳೂರಿನಲ್ಲಿ ಆರಂಭಿಸಲಾಗಿರುವ “ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌’ ಗೊಂದಲದ ಗೂಡಾಗಿದೆ.

Advertisement

ಸ್ಕೂಲ್‌ ಆಫ್ ಎಕನಾಮಿಕ್ಸ್‌ನ ಹಣಕಾಸು ವೆಚ್ಚದ ವಿಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳದೆ ಮನಸೋಯಿಚ್ಛೆ ತೀರ್ಮಾನ ಕೈಗೊಂಡು ನೂರಾರು ಕೋಟಿ ರೂ. ಅವ್ಯವಹಾರಕ್ಕೆ ಎಡೆಮಾಡಿಕೊಡಲಾಗುತ್ತಿದೆ. ಕಾಲೇಜು ಶಿಕ್ಷಣ ಇಲಾಖೆ ಹಾಗೂ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಹಣದ ವೆಚ್ಚದ ಬಗ್ಗೆ ಸಾಕಷ್ಟು ಆಕ್ಷೇಪಗಳು ವ್ಯಕ್ತವಾದರೂ ಕಾನೂನು ಮೀರಿ ತೀರ್ಮಾನ ಕೈಗೊಂಡು, ಆಕ್ಷೇಪ ವ್ಯಕ್ತಪಡಿಸಿದವರಿಗೆ “ವರ್ಗಾವಣೆ’ ಶಿಕ್ಷೆ ನೀಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಸ್ವಾಯತ್ತ ವಿಶ್ವವಿಶ್ವವಿದ್ಯಾಲಯವಾಗಿ ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆಯಾದರೂ ಇದುವರೆಗೂ ಸ್ವಾಯತ್ತ ವಿಶ್ವವಿದ್ಯಾಲಯವನ್ನಾಗಿಸುವ ಪ್ರಕ್ರಿಯೆ ಆರಂಭವಾಗಿಲ್ಲ. ಆ ಕುರಿತ ಕಾನೂನು ರೀತ್ಯಾ ಕ್ರಮಗಳೂ ಆಗಿಲ್ಲ. ಯಾವ ಆದೇಶವನ್ನೂ ಹೊರಡಿಸಿಲ್ಲ.

ಸ್ವಾಯತ್ತ ವಿಶ್ವವಿದ್ಯಾಲಯದ ಮಾನ್ಯತೆ ಸಿಗುವವರೆಗೂ ಆಡಳಿತಾತ್ಮಕವಾಗಿ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶನಾಲಯ ವ್ಯಾಪ್ತಿಯಡಿ ಕಾರ್ಯನಿರ್ವಹಿಸಬೇಕಾದ ಸ್ಕೂಲ್‌ ಆಫ್ ಎಕನಾಮಿಕ್ಸ್‌ “ರಾಜ್ಯ ಉನ್ನತ ಶಿಕ್ಷಣ ಪರಿಷತ್‌’ನಡಿ ಕಾರ್ಯನಿರ್ವಹಿಸುತ್ತಿರುವುದು ಸಾಕಷ್ಟು ಅನುಮಾನಗಳಿಗೂ ಕಾರಣವಾಗಿದೆ.

ಡಾ.ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ ಕಟ್ಟಡ ನಿರ್ಮಾಣದ ವೆಚ್ಚ ಇದೀಗ ದೊಡ್ಡ ಮಟ್ಟದ‌ ವಿವಾದಕ್ಕೆ ಕಾರಣವಾಗಿದೆ. ಪ್ರಾರಂಭದಲ್ಲಿ 90 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಕಟ್ಟಡ ಕಾಮಗಾರಿ ವೆಚ್ಚ ದಿಢೀರನೆ 190 ಕೋಟಿ ರೂ.ಗೆ ಏರಿಕೆಯಾಗಿದೆ.

Advertisement

ಆಯುಕ್ತರನ್ನೇ ಹೊರಗಿಟ್ಟು ತೀರ್ಮಾನ: ಉನ್ನತ ಶಿಕ್ಷಣ ಪರಿಷತ್‌ನ ಸದಸ್ಯರೂ ಆಗಿದ್ದ ಕಾಲೇಜು ಶಿಕ್ಷಣ  ಇಲಾಖೆ ಆಯುಕ್ತರನ್ನೇ ಹೊರಗಿಟ್ಟು ತಮಗೆ ಬೇಕಾದಂತೆ ತೀರ್ಮಾನ ಕೈಗೊಳ್ಳಲಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಸ್ಕೂಲ್‌ ಆಫ್ ಎಕನಾಮಿಕ್ಸ್‌ಗೆ ಮೊದಲು ನಿರ್ದೇಶಕರಾಗಿ ನೇಮಕಗೊಂಡಿದ್ದ ಅನೂಪ್‌ ಪೂಜಾರ್‌, “ಕಾನೂನು ಪಾಲನೆ ಮಾಡಿದರೆ ಮಾತ್ರ ವೆಚ್ಚಕ್ಕೆ ಅನುಮತಿ ನೀಡುತ್ತೇನೆ’ ಎಂದು ಹೇಳಿದ್ದಕ್ಕೆ ಮೂರೇ ತಿಂಗಳಲ್ಲಿ ಅವರ ಜಾಗಕ್ಕೆ ದೇಶಪಾಂಡೆ ಎಂಬ ಮತ್ತೂಬ್ಬ ನಿವೃತ್ತ ಅಧಿಕಾರಿಯನ್ನು ನೇಮಿಸಲಾಗಿದೆ.

ನಿವೃತ್ತ ಐಎಎಸ್‌ ಅಧಿಕಾರಿ ದ್ಯಾಬೇರಿ ಅವರನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಿಸಿ ಬೇಕಾದಂತೆ ವೆಚ್ಚದ ಪ್ರಸ್ತಾಪ ತಯಾರಿಸಿ ಉನ್ನತ ಶಿಕ್ಷಣ ಪರಿಷತ್‌ನಲ್ಲಿಟ್ಟು ಒಪ್ಪಿಗೆ ಪಡೆಯಲಾಗುತ್ತಿದೆ. ಇದು ಸರಿಯಲ್ಲ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ. 

ಈ ಮಧ್ಯೆ, ಪಠ್ಯಕ್ರಮ, ಬೋಧಕ-ಬೋಧಕತೇಕರ ಸಿಬ್ಬಂದಿ ನೇಮಕಾತಿಯಲ್ಲೂ ಸಾಕಷ್ಟು ಗೊಂದಲಗಳ ನಡವೆಯೇ ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲದ ತಾತ್ಕಾಲಿಕ ಮಾನ್ಯತೆಯಡಿ ಪ್ರಾರಂಭವಾಗಿರುವ ಸ್ಕೂಲ್‌ ಆಫ್ ಎಕನಾಮಿಕ್ಸ್‌  ತಾತ್ಕಾಲಿಕ ಕಟ್ಟಡದಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಿಸಿದೆ. ಆದರೆ, ಸ್ಕೂಲ್‌ ಆಫ್ ಎಕನಾಮಿಕ್ಸ್‌ ವಿಚಾರದಲ್ಲಿನ ಗೊಂದಲ, ದಿನಕ್ಕೊಂದು ವಿವಾದದಿಂದಾಗಿ ಅಲ್ಲಿ ಪ್ರವೇಶ ಪಡೆದಿರುವ 50 ವಿದ್ಯಾರ್ಥಿಗಳಿಗೂ ಮುಂದೇನು? ಎಂಬ ಆತಂಕ ಎದುರಾಗಿದೆ.

ಕಾನೂನು ಲೆಕ್ಕಿಸದೇ ಕಾಮಗಾರಿ ವೆಚ್ಚ ಹೆಚ್ಚಳ
10 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದ ಕಾಮಗಾರಿಗೆ ರಾಜ್ಯ ಸಚಿವ ಸಂಪುಟದ ಅನುಮೋದನೆ ಹಾಗೂ ಹಣಕಾಸು ಇಲಾಖೆ ಸಮ್ಮತಿ ಪಡೆಯಬೇಕು ಎಂಬ ನಿಯಮವಿದೆ. ಆದರೆ, ಇದ್ಯಾವುದೂ ಸ್ಕೂಲ್‌ ಆಫ್ ಎಕನಾಮಿಕ್ಸ್‌ಗೆ ಅನ್ವಯವಾಗಿಲ್ಲ. ಉನ್ನತ ಶಿಕ್ಷಣ ಪರಿಷತ್‌ ಸಭೆಯಲ್ಲಿ ಕಾರ್ಯಸೂಚಿ ಸಹ ಇಲ್ಲದೆ ಇತರೆ ವಿಷಯಗಳಡಿ ಪ್ರಸ್ತಾಪಿಸಿ ಕಾಮಗಾರಿಯ ವೆಚ್ಚವನ್ನು 190 ಕೋಟಿ ರೂ.ಗೆ ಹೆಚ್ಚಿಸಿದ್ದು, ಕಟ್ಟಡ ಕಾಮಗಾರಿ ಟೆಂಡರ್‌ 149 ಕೋಟಿ ರೂ.ಗೆ ಕೆಎಚ್‌ಬಿಗೆ ನೀಡಲು ತೀರ್ಮಾನಿಸಲಾಗಿದೆ.

ಸಂಪುಟದ ಅನುಮೋದನೆ ಇಲ್ಲದೆ ಕಾಲೇಜು ಶಿಕ್ಷಣ ಇಲಾಖೆ ಗಮನಕ್ಕೆ ತಾರದೆ ವೆಚ್ಚಕ್ಕೆ ಅನುಮತಿ ಪಡೆಯುವಂತಿಲ್ಲ ಎಂದು ಆಕ್ಷೇಪ ಎತ್ತಿದ್ದಕ್ಕೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಾಗಿದ್ದ ಅಜಯ್‌ನಾಗಭೂಷಣ್‌ ಅವರನ್ನು  ಇದ್ದಕ್ಕಿದ್ದಂತೆ ಎತ್ತಂಗಡಿ ಮಾಡಲಾಯಿತು.

ಡಾ.ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ ಹೆಸರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಹಗರಣದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ನೇರವಾಗಿ ಭಾಗಿಯಾಗಿದ್ದಾರೆ. ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ಡಕಾಯಿತರು ಎಂದು ಆರೋಪಿಸಿದ್ದ ಸಚಿವ ರಾಯರೆಡ್ಡಿಯವರು ಇದೀಗ ಮಾಡುತ್ತಿರುವುದಾದರೂ ಏನು? 
-ರಮೇಶ್‌ಬಾಬು, ವಿಧಾನ ಪರಿಷತ್‌ ಸದಸ್ಯ

* ಎಸ್‌.ಲಕ್ಷ್ಮಿನಾರಾಯಣ 

Advertisement

Udayavani is now on Telegram. Click here to join our channel and stay updated with the latest news.

Next