Advertisement

ಮೂಲಸೌಕರ್ಯ ಅಭಿವೃದ್ಧಿಗಾಗಿ ಕಾಯುತ್ತಿರುವ ಶಾಲೆ

08:34 PM Sep 22, 2021 | Team Udayavani |

ಉಳ್ಳಾಲ: ಶತಮಾನದ ಹೊಸ್ತಿಲಲ್ಲಿರುವ ಅಂಬ್ಲಿಮೊಗರು ಗ್ರಾಮದ ಮದಕದಲ್ಲಿರುವ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದರೆ ಮೂಲಸೌಕರ್ಯ ಕೊರತೆ ಮತ್ತು ಮಾಧ್ಯಮವಾರು ಶಿಕ್ಷಕರ ಕೊರತೆ ಮಾತ್ರ ಕಾಡುತ್ತಿದೆ. ಇವುಗಳನ್ನು ನೀಗಿಸಿದರೆ ಇಲ್ಲಿ ಉತ್ತಮ ಶಿಕ್ಷಣ ನೀಡಲು ಸಾಧ್ಯ.

Advertisement

ಗ್ರಾಮೀಣ ಪ್ರದೇಶದಲ್ಲಿರುವ ಅಂಬ್ಲಿಮೊಗರು ಸ.ಹಿ. ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಯಿಂದ 8ನೇ ತರಗತಿವರೆಗೆ ಕಲಿಕೆ ಅವಕಾಶವಿದೆ. ಮೂರು ವರ್ಷದಿಂದ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಿದ ಬಳಿಕ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಕಳೆದ ವರ್ಷ 120 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 40 ವಿದ್ಯಾರ್ಥಿಗಳು ಹೆಚ್ಚುವರಿ ಸೇರ್ಪಡೆಯಾಗಿದ್ದು ಒಟ್ಟು 160 ವಿದ್ಯಾರ್ಥಿಗಳು ಶಾಲೆಯಲ್ಲಿ ದಾಖಲಾತಿ ಪಡೆದಿದ್ದಾರೆ. ಈ ವರ್ಷ 1ನೇ, 2ನೇ ಮತ್ತು 3ನೇ ತರಗತಿಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ.

1924ರಲ್ಲಿ ಆರಂಭಗೊಂಡ ಈ ಶಾಲೆಯಲ್ಲಿ ಎರಡು ಹಳೆ ಕಟ್ಟಡಕ್ಕೆ 50 ವರ್ಷಗಳು ಕಳೆದಿವೆ. ಇದರಲ್ಲಿ ನಾಲ್ಕು ಕ್ಲಾಸ್‌ ರೂಂಗಳಿದ್ದು, ಎರಡರಲ್ಲಿ ಪ್ರೌಢಶಾಲೆ ತರಗತಿಗಳು ನಡೆಯುತ್ತಿವೆ. ಉಳಿದ ಎರಡು ತರಗತಿಗಳನ್ನು ಪ್ರಾಥಮಿಕ ಶಾಲೆಗೆ ಬಳಸಲಾಗುತ್ತಿದೆ. ಆದರೆ ಸುರಕ್ಷೆ ನಿಟ್ಟಿನಲ್ಲಿ ಈ ಶಾಲೆಯನ್ನು ಕೆಡವಿ ನೂತನ ಕಟ್ಟಡ ನಿರ್ಮಾಣ ಅಗತ್ಯವಿದೆ. ಶಾಲೆಯಲ್ಲಿ 20 ವರ್ಷಗಳ ಹಿಂದೆ ನಿರ್ಮಾಣವಾದ ಕಟ್ಟಡದಲ್ಲಿ ಒಟ್ಟು ಐದು ಕ್ಲಾಸ್‌ ರೂಂಗಳಿದ್ದು, ಇದರಲ್ಲಿ ಮೂರು ತರಗತಿ ಕೊಠಡಿಗಳು ಮಳೆಗಾಲದಲ್ಲಿ ಸೋರುತ್ತಿವೆ. ಎರಡು ಕ್ಲಾಸ್‌ ರೂಂಗಳು ಮಾತ್ರ ಸರಿಯಾಗಿದ್ದು, ಇದರ ದುರಸ್ತಿ ಕಾರ್ಯ ಆಗಬೇಕಿದೆ. ಪ್ರಸ್ತುತ ಶಾಲೆಗೆ ಐದು ಕ್ಲಾಸ್‌ ರೂಂಗಳ ಅಗತ್ಯವಿದ್ದು, ಇದರೊಂದಿಗೆ ಶಾಲೆಯಲ್ಲಿ 10 ಕಂಪ್ಯೂಟರ್‌ ಮತ್ತು ಸ್ಮಾರ್ಟ್‌ ಕ್ಲಾಸ್‌ಗೆ ಬೇಕಾದ ಟಿ.ವಿ. ಇದ್ದರೂ ಕಂಪ್ಯೂಟರ್‌ ಶಿಕ್ಷಣಕ್ಕೆ, ಸ್ಮಾರ್ಟ್‌ ಕ್ಲಾಸ್‌, ವಾಚನಾಲಯಕ್ಕೆ ಬೇಕಾದ ಕೊಠಡಿಗಳ ಕೊರತೆ ಇವೆ.

ಮಾಧ್ಯಮವಾರು ಶಿಕ್ಷಕರ ಕೊರತೆ :

ಶಾಲೆಯಲ್ಲಿ ಮುಖ್ಯ ಶಿಕ್ಷಕ, ದೈಹಿಕ ಶಿಕ್ಷಣ ಶಿಕ್ಷಕಸಹಿತ ಒಟ್ಟು ಎಂಟು ಶಿಕ್ಷಕರಿದ್ದು, ಇಲ್ಲಿ ಆರಂಭವಾಗಿರುವ ಆಂಗ್ಲ ಮಾಧ್ಯಮ ತರಗತಿಗಳಿಗೆ ಶಿಕ್ಷಕರ ಕೊರತೆಯಿದೆ. ಮುಖ್ಯವಾಗಿ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಮಾಧ್ಯಮವಾರು ಶಿಕ್ಷಕರ ಆವಶ್ಯಕತೆಯಿದ್ದು, ಶಿಕ್ಷಕರ ಪ್ರಮಾಣ ಹೆಚ್ಚಾದರೆ ಇನ್ನೂ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿದೆ. ಅಲ್ಲದೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

Advertisement

ಪೀಠೊಪಕರಣ ಇಲ್ಲ  :

ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಾಲೆಯಲ್ಲಿ ಪೀಠೊಪ ಕರಣದ ಕೊರತೆ ಇದೆ. ಎರಡು ವರ್ಷಗಳಿಂದ ಆನ್‌ಲೈನ್‌ ತರಗತಿಯ ಕಾರಣದಿಂದ ಪೀಠೊಪಕರಣದ ಸಮಸ್ಯೆ ಕಾಡದಿದ್ದರೂ ಭೌತಿಕ ತರಗತಿ ಆರಂಭವಾದರೆ ವಿದ್ಯಾರ್ಥಿಗಳಿಗೆ ಪೀಠೊಪಕರಣ  ಅಗತ್ಯ ವಿದೆ. ಈಗಾಗಲೇ ಶಾಲೆಯಲ್ಲಿರುವ ಶಿಕ್ಷಕರು ಸ್ವಂತ ಹಣದಲ್ಲಿ ಕೆಲವು ಪೀಠೊಪಕರಣ ವ್ಯವಸ್ಥೆ ಮಾಡಿದರೆ, ಇನ್ನೂ ಹೆಚ್ಚುವರಿ ಪೀಠೊ ಪಕರಣದ ಆವಶ್ಯಕತೆಯಿದೆ. ಅಂಬ್ಲಿಮೊಗರು ಶಾಲೆ ಎತ್ತರದ ಪ್ರದೇಶದಲ್ಲಿರುವುದರಿಂದ ಕಳೆದ ಮಳೆಗಾಲದಲ್ಲಿ ಗುಡ್ಡ ಕುಸಿದು ಶಾಲೆಯ ಕಾಂಪೌಂಡ್‌ ಬಿದ್ದು ಎರಡು ಮನೆಗಳ ನೀರಿನ ಟ್ಯಾಂಕ್‌ಗೆ ಹಾನಿಯಾಗಿತ್ತು. ಇದನ್ನು ಶಿಕ್ಷಕರೇ ಭರಿಸಿದ್ದು, ಶಾಲೆಗೆ ಕಾಂಪೌಂಡ್‌ ಹಾಲ್‌, ಶಾಲಾ ಮೈದಾನದ ಆವಶ್ಯಕತೆಯಿದೆ. ಈ ಹಿಂದೆ ಶಾಲೆಗೆ ಶಿಕ್ಷಕರೇ ಹಣ ಹಾಕಿ ಶಾಲಾ ಬಸ್‌ ವ್ಯವಸ್ಥೆ ಮಾಡಿದ್ದು, ದೂರದ ಊರಿನಿಂದಲೂ ಈ ಶಾಲೆಗೆ ವಿದ್ಯಾರ್ಥಿಗಳು ಆಗಮಿಸುವಂತೆ ಕ್ರಮ ಕೈಗೊಂಡಿದ್ದರು. ಅನ್ನದಾಸೋಹ ಕಟ್ಟಡ, ದಾಸ್ತಾನು ಕಟ್ಟಡ ಅಗತ್ಯವಿದ್ದು, ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ ಈ ಶಾಲೆಯಲ್ಲಿ ಪೂರ್ಣಗೊಂಡಿದೆ.

ಶಾಲೆಗೆ ವಿದ್ಯಾರ್ಥಿಗಳ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಆದರೆ ಮೂಲಸೌಕರ್ಯ ತರಗತಿ ಕೊಠಡಿಗಳ ನಿರ್ಮಾಣ, ಮಾಧ್ಯವಾರು ಶಿಕ್ಷಕರ ನೇಮಕ ಮಾಡುವಂತೆ ಇಲಾಖೆಗೆ ಮನವಿ ಮಾಡಿದ್ದೇವೆ. ಮಕ್ಕಳ ಸುರಕ್ಷೆ ದೃಷ್ಟಿಯಲ್ಲಿ 50 ವರ್ಷ ಹಳೆಯದಾದ ಕಟ್ಟಡ ಪುನರ್‌ ನಿರ್ಮಾಣ ಮತ್ತು ಈಗಿರುವ ಇನ್ನೊಂದು ಕಾಂಕ್ರೀಟ್‌ ಕಟ್ಟಡದ ದುರಸ್ತಿ, ಶಾಲೆಗ ಕಾಂಪೌಂಡ್‌ ನಿರ್ಮಾಣ ಅತೀ ಅಗತ್ಯ.ಜಗದೀಶ್‌ ಶೆಟ್ಟಿ, ಮುಖ್ಯ ಶಿಕ್ಷಕರು, ದ.ಕ. ಜಿಲ್ಲಾ ಹಿ.ಪ್ರಾ. ಶಾಲೆ, ಅಂಬ್ಲಿಮೊಗರು

 

-ವಸಂತ ಎನ್‌. ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next