ಈಶ್ವರಮಂಗಲ: ಕೇರಳ ಕರ್ನಾಟಕ ಗಡಿಭಾಗದಲ್ಲಿರುವ ಮೇನಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಸಿಯುವ ಭೀತಿಯನ್ನು ಎದುರಿಸುತ್ತಿದೆ. ಮುಂಜಾಗ್ರತ ಕ್ರಮವಾಗಿ ಮಕ್ಕಳನ್ನು ಶಾಲೆಯ ಇನ್ನೊಂದು ಕಟ್ಟಡಕ್ಕೆ ಎಸ್ ಡಿಎಂಸಿ ಸಮಿತಿ ಸ್ಥಳಾಂತರಿಸಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ಪಂದಿಸಿಲ್ಲ ಎಂಬ ದೂರು ಇಲ್ಲಿನ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಇದು ಸುಮಾರು 60 ವರ್ಷಗಳ ಹಿಂದೆ ಪ್ರಾರಂಭವಾದ ಶಾಲೆ. ಪ್ರಸ್ತುತ 66 ಬಾಲಕರು,80 ಬಾಲಕಿಯರು ಸೇರಿ ಒಟ್ಟು 146 ವಿದ್ಯಾರ್ಥಿಗಳನ್ನು ಹೊಂದಿದೆ. ಇಲ್ಲಿ ಮುಖ್ಯ ಶಿಕ್ಷಕರ ಹುದ್ದೆ ಸಹಿತ ನಾಲ್ಕು ಹುದ್ದೆ ಖಾಲಿಯಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 12 ಬಾಲಕರು, 12 ಬಾಲಕಿಯರ ಸಹಿತ 24 ವಿದ್ಯಾರ್ಥಿಗಳ ದಾಖಲಾತಿಯಾಗಿದೆ.
ಈ ಪ್ರದೇಶದಲ್ಲಿ ಖಾಸಗಿ ವಿದ್ಯಾಸಂಸ್ಥೆಗಳು ಇದ್ದು ಸರಕಾರಿ ಶಾಲೆಗೆ ದಾಖಲಾತಿಯು ಒಂದು ಸವಾಲಿನ ವಿಷಯವಾಗಿತ್ತು. ಶಾಲೆಯ ಕಟ್ಟಡ ಮಾತ್ರ ಹಳೆಯ ದಾಗಿದ್ದು ಇಂದು ನಾಳೆ ಬೀಳುವ ಸ್ಥಿತಿಯಲ್ಲಿದೆ. ಎರಡು ಬದಿಯ ಗೋಡೆ ಬಿರುಕು ಬಿಟ್ಟಿದೆ. ಒಂದು ಗೋಡೆಯಿಂದ ಇನ್ನೊಂದು ಗೋಡೆಗೆ ಬೆಸುಗೆ ಮಾಡಿದ ಕಬ್ಬಿಣ ಸರಳು ಗೋಡೆಯಿಂದ ಕೆಳಗೆ ಜಾರಿದೆ. ಮೇಲ್ಛಾವಣಿ ಪಕ್ಕಾಸು ಹಳೆಯದಾಗಿದೆ. ರೀಪುಗಳು ಮುರಿದು ಹಂಚುಗಳು ಕೆಳಗೆ ಬೀಳುತ್ತಿವೆ. ಮಳೆಯ ನೀರು ಶಾಲೆಯ ಒಳಗಡೆ ಬೀಳುತ್ತಿದೆ. ಕಟ್ಟಡ ಕುಸಿಯುವ ಸಾಧ್ಯತೆ ಇದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ತುರ್ತು ಎಸ್‌ಡಿಎಂಸಿ ಸಭೆ
ಗೋಡೆ ಬಿರುಕು ಬಿಟ್ಟಿರುವುದನ್ನು ಗಮನಿಸಿದ ಎಸ್‌ಡಿಎಂಸಿ ತುರ್ತು ಸಭೆ ನಡೆಸಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮಕ್ಕಳನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರ ಬಗ್ಗೆ ನಿರ್ಣಯ ಕೈಗೊಂಡು ಮಕ್ಕಳನ್ನು ಸ್ಥಳಾಂತರಿಸಲಾಯಿತು. ಕಟ್ಟಡಕ್ಕೆ ಬೀಗ ಜಡಿಯಲಾಗಿದೆ. ಈ ಬಗ್ಗೆ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಶಿಕ್ಷಣ ಇಲಾಖೆಯ ಯಾವ ಅಧಿಕಾರಿಯೂ ಭೇಟಿ ನೀಡಿಲ್ಲ. ಪೂರಕ ವ್ಯವಸ್ಥೆಗೆ ಕ್ರಮ ಕೈಗೊಂಡಿಲ್ಲ ಎಂದು ಪೋಷಕರು, ವಾರ್ಡ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.
ನಿರ್ಲಕ್ಷ್ಯ ಬೇಡ
ಶಿಕ್ಷಕಿಯರನ್ನು ಮಾತ್ರ ಒಳಗೊಂಡಿರುವ ಇಲ್ಲಿ ಹಳೆಯ ಕಟ್ಟಡ ಕುಸಿಯುವ ಸ್ಥಿತಿಯಲ್ಲಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ. ಮಕ್ಕಳು ಆಟ, ಊಟದ ಸಂದರ್ಭದಲ್ಲಿ ಅತ್ತಿತ್ತ ಹೋಗುವುದು ಸಹಜ. ಶಿಕ್ಷಕರ ಸಂಖ್ಯೆಯೂ ಕೂಡ ಕಡಿಮೆ ಇದ್ದು ಮಕ್ಕಳ ಸುರಕ್ಷಾ ದೃಷ್ಟಿಯಿಂದ ಇಲಾಖೆ ಗಮನ ಹರಿಸುವುದು ಅತೀ ಅಗತ್ಯವಾಗಿದೆ.
ಅಧಿಕಾರಿಗಳು ಬರುವುದಿಲ್ಲ: ಶಾಲೆಯ ಸ್ಥಿತಿಯ ಬಗ್ಗೆ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅಧಿಕಾರಿಯವರು ಬರುತ್ತೇವೆ ಎಂದು ಹೇಳಿದರೂ ಬರುವುದೇ ಇಲ್ಲ. ಮಕ್ಕಳ ಸುರಕ್ಷತೆ ವಿಚಾರದಲ್ಲಿ ಇಲಾಖೆ ಜವಾ ಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ. –
ಫೌಝೀಯಾ, ಉಪಾಧ್ಯಕ್ಷೆ, ನೆಟ್ಟಣಿಗೆ ಮುಟ್ನೂರು ಗ್ರಾ.ಪಂ.
ಕ್ರಮಕೈಗೊಳ್ಳಬೇಕು: ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಉತ್ತಮವಾಗಿಯೇ ಇದೆ. ಶಿಕ್ಷಕರ ಕೊರತೆಯಿಂದ 8ನೇ ತರಗತಿಗೆ ದಾಖಲಾತಿ ಕುಸಿದಿದೆ. ಗೋಡೆಯಲ್ಲಿ ಬಿರುಕು ಬಿಟ್ಟಿದ್ದು , ವಾಲ್‌ಪ್ಲೇಟ್ ಜಾರಿದ ಸ್ಥಿತಿಯಲ್ಲಿದೆ. ಶಿಕ್ಷಣ ಇಲಾಖೆ ಇದರ ಬಗ್ಗೆ ಗಮನಹರಿಸಿ ಕ್ರಮಕೈಗೊಳ್ಳಬೇಕು. –
ರಾಮ ಮೇನಾಲ, ಅಧ್ಯಕ್ಷರು, ಶಾಲಾ ಹಿರಿಯ ವಿದ್ಯಾರ್ಥಿ ಸಂಘ
ಯೋಜನೆ ರೂಪಿಸಲಾಗಿದೆ: ವಿಚಾರ ಈಗಾಗಲೇ ಇಲಾಖೆ ಗಮನಕ್ಕೆ ಬಂದಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಿಥಿಲ ಕಟ್ಟಡ ತೆರವಿಗೆ ಯೋಜನೆ ರೂಪಿಸಲಾಗುತ್ತಿದೆ. –
ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು
-ಮಾಧವ್ ನಾಯಕ್ ಕೆ.