Advertisement

ಬಸ್‌ಗಾಗಿ ಶಾಲಾ-ಕಾಲೇಜ್‌ ಮಕ್ಕಳ ಪರದಾಟ

04:54 PM Jun 28, 2022 | Team Udayavani |

ಜೋಯಿಡಾ: ರಾಮನಗರದ ಬಸ್‌ ನಿಲ್ದಾಣದಲ್ಲಿ ಶಾಲಾ ಮಕ್ಕಳು ಬಸ್‌ ಹತ್ತುತ್ತಿರುವಾಗಲೇ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಬಸ್‌ ಚಲಯಿಸಿ ಮಕ್ಕಳನ್ನು ಬಿಟ್ಟು ಹೋದ ಘಟನೆ ತಾಲೂಕಿನ ರಾಮನಗರದಲ್ಲಿ ನಡೆದಿದೆ.

Advertisement

ರಾಮನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಶಾಲಾ ಕಾಲೇಜು ಮಕ್ಕಳನ್ನು ಬಸ್‌ನಲ್ಲಿ ಹತ್ತಿಸಿಕೊಳ್ಳದೇ ಇರುವುದರಿಂದ ಮಕ್ಕಳಿಗೆ ಶಾಲೆ ಬಿಟ್ಟ ನಂತರ ಮನೆ ಸೇರುವುದೇ ಕಷ್ಟವಾಗಿದೆ.

ಜೋಯಿಡಾ ತಾಲೂಕಿನಾದ್ಯಂತ ಮೊದಲೇ ಕೆಎಸ್‌ಆರ್‌ಟಿಸಿ ಬಸ್‌ಗಳು ಓಡಾಡುವುದು ಕಡಿಮೆ. ಅದರಲ್ಲೂ ಸಮಯಕ್ಕೆ ಸರಿಯಾಗಿ ಯಾವ ಹಳ್ಳಿಗಳಿಗೂ ಬಸ್‌ಗಳು ಸಾಗುವುದಿಲ್ಲ. ಅಂತದ್ದರಲ್ಲಿ ಬರುವ ಬಸ್‌ಗಳೂ ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳದೇ ಮಕ್ಕಳ ಸಮಸ್ಯೆಗೆ ಸ್ಪಂದಿಸುತ್ತಿಲ್ಲ, ರಾಮನಗರ ಬಸ್‌ ನಿಲ್ದಾಣಕ್ಕೆ ಬರುವ ಬೆಳಗಾವಿ- ದಾಂಡೇಲಿ ಬಸ್‌ ಹಾಗೂ ಸೇರಿದಂತೆ ಇನ್ನೂ ಕೆಲವು ಬಸ್‌ಗಳು ರಾಮನಗರ ಬಸ್‌ ನಿಲ್ದಾಣದಲ್ಲಿ ನಿಂತರು ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳುತ್ತಿಲ್ಲ, ಶಾಲಾ ಮಕ್ಕಳು ಪಾಸ್‌ ತೆಗೆದುಕೊಂಡು ಹೋಗುವ ಕಾರಣಕ್ಕೆ ಬಸ್‌ ಹತ್ತಿಸಿಕೊಳ್ಳುತ್ತಿಲ್ಲ ಎಂಬುದು ಕೆಎಸ್‌ಆರ್‌ಟಿಸಿಯವರ ಗೋಳಾಗಿದ್ದು ಮಕ್ಕಳ ಭವಿಷ್ಯ ನೀರು ಪಾಲಾದರು ಇವರಿಗೇನು ಚಿಂತೆಯಿಲ್ಲ ಎಂಬತಾಗಿದೆ.

ಜೋಯಿಡಾ ತಾಲೂಕು ಹಳ್ಳಿಗಳಿಂದ ಮತ್ತು ದಟ್ಟವಾದ ಕಾಡಿನಿಂದ ಶಾಲೆಗೆ ಬರುವ ಮಕ್ಕಳು ಹತ್ತಾರು ಕಿಮೀ ನಡೆದೇ ಬರಬೇಕು. ಅಂತದ್ದರಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮತ್ತು ಡೈವರ್‌, ಕಂಡೆಕ್ಟರ್‌ಗಳು ಶಾಲಾ ಮಕ್ಕಳನ್ನು ಬಸ್‌ನೊಳಗೆ ಹತ್ತಿಸಿಕೊಳ್ಳದೆ ದರ್ಪ ತೋರುತ್ತಿರುವುದು ಬೇಸರದ ಸಂಗತಿಯಾಗಿದೆ.

ಜೋಯಿಡಾ ತಾಲೂಕು ಸಮಸ್ಯೆಗಳಿಂದಲೇ ಕೂಡಿದ್ದು ಅದರಲ್ಲೂ ರಾಮನಗರ ಭಾಗದಲ್ಲಿ ರಸ್ತೆಗಳು ಸರಿಯಿಲ್ಲದ ಕಾರಣ ನಡೆದುಕೊಂಡೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ತಾಲೂಕಿನ ಅಧಿಕಾರಿಗಳು, ಶಾಸಕರು ಗಮನಹರಿಸಿ ಎಲ್ಲಾ ಸರ್ಕಾರಿ ಬಸ್‌ಗಳಲ್ಲಿಯು ಮಕ್ಕಳಿಗೆ ಅವಕಾಶ ನೀಡಬೇಕಾಗಿರುವುದು ಅನಿವಾರ್ಯವಾಗಿದೆ.

Advertisement

ಶಾಲಾ ಮಕ್ಕಳು ಬಸ್‌ ಏರುತ್ತಿರುವಾಗಲೇ ಬಸ್‌ ಚಲಾಯಿಸುತ್ತಾರೆ. ಏನಾದರು ಅನಾಹುತವಾದರೆ ಯಾರು ಹೊಣೆ. ಎಲ್ಲಾ ಸರ್ಕಾರಿ ಬಸ್‌ಗಳಲ್ಲಿ ಶಾಲಾ ಮಕ್ಕಳಿಗೆ ಅವಕಾಶ ಸಿಗಬೇಕು. ಈ ಬಗ್ಗೆ ಅಧಿಕಾರಿಗಳು ಜನಪ್ರತಿನಿಧಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು. –ರಾಮ್‌ ದೇಸಾಯಿ, ರಾಮನಗರ ಸ್ಥಳೀಯ.

ಶಾಲಾ ಮಕ್ಕಳನ್ನು ಬಸ್‌ ಹತ್ತಿಸಿಕೊಳ್ಳದೇ ಇರುವುದು ತೀರಾ ತಪ್ಪು. ಈ ಬಗ್ಗೆ ಕೂಡಲೇ ಎಚ್ಚರವಹಿಸಿ ಜೋಯಿಡಾ ರಾಮನಗರ ಭಾಗದಲ್ಲಿ ಶಾಲಾ ಮಕ್ಕಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ. –ಕೆ.ಎಸ್‌. ರಾಥೋಡ, ಡಿಪೋ ಮೆನೇಜರ್‌ ದಾಂಡೇಲಿ.

ಈ ಬಗ್ಗೆ ಕೂಡಲೇ ಗಮನ ಹರಿಸಿ ಶಾಲಾ ಮಕ್ಕಳಿಗೆ ಯಾವುದೇ ಸಮಸ್ಯೆ ಆಗದಂತೆ ಹಾಗೂ ಕೆಎಸ್‌ಆರ್‌ಟಿಸಿಯವರಿಗೆ ಎಚ್ಚರಿಕೆ ನೀಡಲಾಗುವುದು. -ಸಂಜಯ ಕಾಂಬಳೆ, ತಹಶೀಲ್ದಾರ್‌ ಜೋಯಿಡಾ.

„ಸಂದೇಶ ದೇಸಾಯಿ

Advertisement

Udayavani is now on Telegram. Click here to join our channel and stay updated with the latest news.

Next