Advertisement

ಶಾಲಾ ಮಕ್ಕಳಿಗೆ ಸಿಗಲಿದೆ “ಕುಕ್ಕಿಂಗ್‌ ಕಾಸ್ಟ್‌’

12:36 AM Jul 23, 2021 | Team Udayavani |

ಕಾರ್ಕಳ: ಕೇಂದ್ರ ಸರಕಾರದ ಶಿಕ್ಷಣ ಮಂತ್ರಾಲಯದ ನಿರ್ದೇಶನದಂತೆ ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಪಾಹಾರ ಯೋಜನೆಯಡಿ ಕುಕ್ಕಿಂಗ್‌ ಕಾಸ್ಟ್‌ ಹಣ ಸಿಗಲಿದೆ.

Advertisement

2021ನೇ ಸಾಲಿನ ಮೇ ಹಾಗೂ ಜೂನ್‌ ತಿಂಗಳ 50 ದಿನಗಳ ಬಿಸಿಯೂಟ ತಯಾರಿಗೆ ತಗಲುವ ವೆಚ್ಚವು ಮಕ್ಕಳ ಬ್ಯಾಂಕ್‌ ಖಾತೆಗೆ ಜಮೆ ಆಗಲಿದೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಜು. 15ರಂದು ಶಾಲೆಗಳಿಗೆ ಸುತ್ತೋಲೆ ಕಳುಹಿಸಿದೆ. ಕೋವಿಡ್‌ 3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಮಕ್ಕಳಿಗೆ ಪೌಷ್ಟಿಕಾಂಶ ಅಗತ್ಯವಿದ್ದು ಅದಕ್ಕೆ ಈ ಮೊತ್ತವನ್ನು ಬಳಸಬೇಕು.

ಶಾಲಾ ಮಕ್ಕಳಿಗೆ ಬೇಸಗೆಯಲ್ಲಿ ಉತ್ತಮ ಆಹಾರ ನೀಡುವ ಉದ್ದೇಶದಿಂದ ಈ ಬಾರಿ ಬಿಸಿಯೂಟದ ಅಕ್ಕಿ ಮತ್ತು ಗೋಧಿಯನ್ನು ಅವರ ಮನೆಗೇ ತಲುಪಿಸಲಾಗಿತ್ತು. ಈಗ ಆಹಾರ ತಯಾರಿಯ ವೆಚ್ಚವನ್ನು ಮಕ್ಕಳಿಗೆ ನೀಡಲಾಗುತ್ತಿದೆ.

1ರಿಂದ 5ನೇ ತರಗತಿ ತನಕದ ವಿದ್ಯಾರ್ಥಿಗಳಿಗೆ ಪ್ರತೀ ದಿನದ ಅಡುಗೆ ತಯಾರಿ ವೆಚ್ಚ 4.97 ರೂ.ಗಳಂತೆ 250 ರೂ. ಹಾಗೂ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತೀ ದಿನದ ಅಡುಗೆ ತಯಾರಿ ವೆಚ್ಚ 7.45 ರೂ.ಗಳಂತೆ 390 ರೂ. ಸಿಗಲಿದೆ. ವಿದ್ಯಾರ್ಥಿ ವೇತನಕ್ಕಾಗಿ ಹಲವು ವಿದ್ಯಾರ್ಥಿಗಳು ಈಗಾಗಲೇ ಬ್ಯಾಂಕ್‌ ಖಾತೆ ಹೊಂದಿದ್ದಾರೆ. ಇಲ್ಲದವರು (ಒಂದನೇ ತರಗತಿಗೆ ದಾಖಲಾಗುವ ಮಕ್ಕಳೂ ಸೇರಿದಂತೆ) ಸಮೀಪದ ರಾಷ್ಟ್ರೀಕೃತ ಬ್ಯಾಂಕ್‌, ಗ್ರಾಮೀಣ ಬ್ಯಾಂಕ್‌ ಅಥವಾ ಅಂಚೆ ಕಚೇರಿಗಳಲ್ಲಿ ಶೂನ್ಯ ಬ್ಯಾಲೆನ್ಸ್‌ ಅಕೌಂಟ್‌ಗಳನ್ನು ತೆರೆಯಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಡುಪಿ ಮತ್ತು ದ.ಕ ಜಿಲ್ಲೆಯ ಅಕ್ಷರ ದಾಸೋಹ ಅಧಿಕಾರಿಗಳಾದ ನಾಗೇಂದ್ರಪ್ಪ ಹಾಗೂ ಉಷಾ ತಿಳಿಸಿದ್ದಾರೆ.

ಇಲಾಖೆಯು ಬ್ಯಾಂಕ್‌ ಖಾತೆ ಹೊಂದಿರುವ ವಿದ್ಯಾರ್ಥಿಗಳ ಪೂರ್ಣ ವಿವರಗಳನ್ನು ಸ್ಯಾಟ್ಸ್‌ ತಂತ್ರಾಂಶದಲ್ಲಿ ಅಳವಡಿಸುವಂತೆ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದೆ.

Advertisement

ಫ‌ಲಾನುಭವಿ ವಿದ್ಯಾರ್ಥಿಗಳ  ಸಂಖ್ಯೆ :

          ರಾಜ್ಯ – 40,53,332 ಲಕ್ಷ

          ದ.ಕ. ಜಿಲ್ಲೆ – 1,13,147 ಲಕ್ಷ

          ಉಡುಪಿ ಜಿಲ್ಲೆ – 57,387 ಸಾವಿರ

          1ರಿಂದ 5ರ ವರೆಗಿನ ಮಕ್ಕಳಿಗೆ-250 ರೂ.

          6ರಿಂದ 8ನೇ ತರಗತಿ ಮಕ್ಕಳಿಗೆ – 390 ರೂ.

          1 ಬಾರಿ ಮಾತ್ರ ಖಾತೆಗೆ ಹಣ

ವಾರದೊಳಗೆ ಜಮೆ :

ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಯ ವಿವರ ಒಂದಷ್ಟು ನಮ್ಮಲ್ಲಿ ಸಂಗ್ರಹವಿದೆ. ಮಕ್ಕಳ ಪೂರ್ಣ ವಿವರ ಪಡೆಯಲು ರಾಜ್ಯದ ಎಲ್ಲ ಶಾಲಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ವಾರದೊಳಗೆ ಹಣ ಮಕ್ಕಳ ಖಾತೆಗೆ ಜಮೆಯಾಗಲಿದೆ.– ವಿ. ಅನ್ಬುಕುಮಾರ್‌ ಭಾ.ಆ.ಸೇ. ಆಯುಕ್ತರು, ಸಾರ್ವಜನಿಕ ಶಿಕ್ಷಣ  ಇಲಾಖೆ ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next