Advertisement

ಶಾಲೆ ಮಕ್ಕಳಿಗೆ ಇನ್ನೂ ಸಮವಸ್ತ್ರವಿಲ್ಲ !

02:58 PM Jul 10, 2018 | Harsha Rao |

ಮಂಗಳೂರು/ಉಡುಪಿ: ಉಭಯ ಜಿಲ್ಲೆಗಳಲ್ಲಿ ಸರಕಾರಿ ಶಾಲೆಗಳು ಆರಂಭವಾಗಿ ತಿಂಗಳಾದರೂ ಸುಮಾರು 1.75 ಲಕ್ಷ ವಿದ್ಯಾರ್ಥಿಗಳಿಗೆ ಇನ್ನೂ ಸಮವಸ್ತ್ರ ತಲುಪಿಲ್ಲ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷದಷ್ಟು ಮಕ್ಕಳು ಸಮವಸ್ತ್ರ ವಂಚಿತರಾಗಿದ್ದರೆ, ಉಡುಪಿ ಜಿಲ್ಲೆಯಲ್ಲಿ 73 ಸಾವಿರ ಮಂದಿಗೆ ಇನ್ನೂ ತಲುಪಿಲ್ಲ.

ರಾಜ್ಯ ಸರಕಾರವು 1ರಿಂದ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಒಂದು ಜೊತೆ ಸಮವಸ್ತ್ರ ನೀಡುತ್ತಿದೆ. ಸರ್ವ ಶಿಕ್ಷಾ ಅಭಿಯಾನದಡಿ 1ರಿಂದ 8ನೇ ತರಗತಿಯ ಎಲ್ಲ ವಿದ್ಯಾರ್ಥಿನಿಯರು, ಪ.ಜಾ., ಪ.ಪಂ. ಹಾಗೂ ಬಿಪಿಎಲ್‌ ಕುಟುಂಬದ ಹುಡುಗರಿಗೆ ಮತ್ತೂಂದು ಜೊತೆ ನೀಡಲಾಗುತ್ತಿದೆ.

ಕೇಂದ್ರ ಸರಕಾರದ ಸರ್ವ ಶಿಕ್ಷಣ ಅಭಿಯಾನದಡಿ ಇ-ಟೆಂಡರ್‌ ಪ್ರಕ್ಯೂರ್‌ವೆುಂಟ್‌ ಪೋರ್ಟಲ್‌ ಮೂಲಕ ಸ್ಪರ್ಧಾತ್ಮಕ ಟೆಂಡರ್‌ ಕರೆದು ಸಮವಸ್ತ್ರ ವಿತರಣೆ ಕೆಲಸ ನೀಡಲಾಗುತ್ತಿತ್ತು. ಪ್ರಸ್ತುತ ವರ್ಷ ಪ್ರತೀ ವಿದ್ಯಾರ್ಥಿಗೆ 1ರಿಂದ 5ನೇ ತರಗತಿಗೆ 200 ರೂ., 6ರಿಂದ 8ನೇ ತರಗತಿ ವಿದ್ಯಾರ್ಥಿಗೆ 300 ರೂ. ಲೆಕ್ಕಾಚಾರದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಮೂಲಕ ಸಮವಸ್ತ್ರ ವಿತರಿಸಲಾಗುತ್ತಿದೆ.

ಖರೀದಿ ಸಮಿತಿಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು, ಮುಖ್ಯೋಪಾಧ್ಯಾಯರು, ಎಸ್‌ಡಿಎಂಸಿ ನಾಮನಿರ್ದೇಶಿತ ಮೂವರು ಸದಸ್ಯರು, ಇಬ್ಬರು ಮಹಿಳಾ ಸದಸ್ಯರು ಇರಲೇಬೇಕು. ಖರೀದಿ ಪ್ರಕ್ರಿಯೆಯಲ್ಲಿ ಜಿಲ್ಲಾ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್‌ಪಿ/ಸಿಆರ್‌ಪಿಗಳಾಗಲಿ ಹಸ್ತಕ್ಷೇಪ ಮಾಡುವಂತಿಲ್ಲ. 

Advertisement

ದಕ್ಷಿಣ ಕನ್ನಡ: 97,810 ಮಂದಿ
ಪ್ರತಿ ವರ್ಷ ಸಮವಸ್ತ್ರಕ್ಕಾಗಿ ಪ್ರತಿ ಜಿಲ್ಲೆಯಿಂದ ಕಳೆದ ವರ್ಷದ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಬೇಡಿಕೆ ಸಲ್ಲಿಸಬೇಕಿದ್ದು, ಅದರಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಪೂರೈಸಲಾಗುತ್ತದೆ. ದ.ಕ.ಜಿಲ್ಲೆಯಲ್ಲಿ ಕಳೆದ ವರ್ಷ 97,810 ವಿದ್ಯಾರ್ಥಿಗಳಿದ್ದರು. ಪ್ರೌಢಶಾಲೆಯಲ್ಲಿ 9,141 ಹುಡುಗರು ಹಾಗೂ 8,776 ಹುಡುಗಿಯರು ಸೇರಿ ಒಟ್ಟು 17,917 ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಪ್ರಾಥಮಿಕ ಶಾಲೆಯಲ್ಲಿ 40,417 ಹುಡುಗರು ಹಾಗೂ 39,476 ಹುಡುಗಿಯರು ಸೇರಿ ಒಟ್ಟು 79,893 ಮಂದಿ ಇದ್ದರು. ಹೀಗಾಗಿ ಒಟ್ಟು ವಿದ್ಯಾರ್ಥಿಗಳ ಸಮವಸ್ತ್ರಕ್ಕಾಗಿ 97,810 ಸಂಖ್ಯೆಯ ಬೇಡಿಕೆ ಸಲ್ಲಿಸಲಾಗುತ್ತದೆ. ಸರ್ವ ಶಿಕ್ಷಾ ಅಭಿಯಾನದ ಸಮವಸ್ತ್ರಕ್ಕೆ ಒಟ್ಟು 79,893 ವಿದ್ಯಾರ್ಥಿಗಳಿಗೆ ಬೇಡಿಕೆ ಸಲ್ಲಿಸಬೇಕಾಗಿದೆ.

ಉಡುಪಿ: 71,000 ಮಂದಿ
ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ 71,000 ವಿದ್ಯಾರ್ಥಿಗಳು ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದರು. ಹಿಂದಿನ ವರ್ಷ 9ನೇ ತರಗತಿ (ಸರಕಾರಿ) ವಿದ್ಯಾರ್ಥಿ/ ವಿದ್ಯಾರ್ಥಿನಿಯರು 14,100, ಅನುದಾನಿತ 8,700 ವ್ಯಾಸಂಗ ಮಾಡಿದ್ದಾರೆ. ಪ್ರಾಥಮಿಕ ಶಾಲೆಯಲ್ಲಿ 1ರಿಂದ 8ನೇ ತರಗತಿ 73,284 ವಿದ್ಯಾರ್ಥಿ/ ವಿದ್ಯಾರ್ಥಿನಿಯರು ವ್ಯಾಸಂಗ ಮಾಡಿದ್ದಾರೆ. ಹಿಂದಿನ ವರ್ಷದ ಸ್ಯಾಟ್ಸ್‌ ಆಧಾರದಲ್ಲಿ ತರಗತಿ ಗನುಸಾರ ಮೊತ್ತ ನಿಗದಿಗೊಳಿಸಿ ಎಸ್‌ಡಿಎಂಸಿ ಖಾತೆಗೆ ಜಮಾ ಮಾಡಲಾಗುತ್ತದೆ.

ಸ್ಪಷ್ಟ  ಮಾಹಿತಿ ನಮಗೂ ಇಲ್ಲ
ದ.ಕ. ಜಿಲ್ಲೆಗೆ ಇನ್ನೂ ಸಮವಸ್ತ್ರ ಬಂದಿಲ್ಲ. ಕೇಂದ್ರ ಕಚೇರಿಯಲ್ಲಿ ಕೇಳಿದರೆ ಟೆಂಡರ್‌ನಲ್ಲಿ  ತಾಂತ್ರಿಕ ದೋಷವಿದ್ದು, ಜುಲೈ ಅಂತ್ಯ ಅಥವಾ ಆಗಸ್ಟ್‌ ಆರಂಭದಲ್ಲಿ ಬರುತ್ತದೆ ಎಂಬ ಉತ್ತರವನ್ನು ನೀಡುತ್ತಿದ್ದಾರೆ. ಹೀಗಾಗಿ ಸ್ಪಷ್ಟವಾಗಿ ಯಾವಾಗ ಬರುತ್ತದೆ ಎಂಬ ಮಾಹಿತಿ ನಮಗೂ ಸಿಕ್ಕಿಲ್ಲ.
– ವೈ. ಶಿವರಾಮಯ್ಯ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ದ.ಕ.

ಖರೀದಿ ಪ್ರಕ್ರಿಯೆ ತಡ
ಈ ಹಿಂದಿನ ವರ್ಷ ಮೇ ತಿಂಗಳಲ್ಲಿ ಸಮವಸ್ತ್ರ ಸರಬರಾಜು ಆಗಿತ್ತು. ಈ ವರ್ಷ ಚುನಾವಣಾ ನೀತಿ ಸಂಹಿತೆಯಿಂದಾಗಿ ಖರೀದಿ ಪ್ರಕ್ರಿಯೆ ತಡವಾಗಿದೆ. ಈ ವರ್ಷ ಆದಷ್ಟು ಬೇಗ ಖರೀದಿಸಲೆಂದು ನೇರವಾಗಿ ಎಸ್‌ಡಿಎಂಸಿ ಖಾತೆಗೆ ಹಣ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ. 
-ನಾಗೇಶ್‌ ಶ್ಯಾನುಭಾಗ್‌, ಪ್ರಭಾರ ಡಿಡಿಪಿಐ

ಸ್ಯಾಂಪಲ್‌ ಇನ್ನೂ ಬಂದಿಲ್ಲ
ಸಮವಸ್ತ್ರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಇಲಾಖೆಯಿಂದ ಇನ್ನೂ ಬೇಡಿಕೆ ಸಲ್ಲಿಕೆಯಾಗಿಲ್ಲ. ಅಂದರೆ ಒಂದು ಜತೆ ಸಮವಸ್ತ್ರ ಬಂದ ಬಳಿಕ ಅದರ ಸ್ಯಾಂಪಲ್‌ ನೋಡಿ ಬೇಡಿಕೆ ಸಲ್ಲಿಸಲಾಗುತ್ತದೆ. ಈ ಕುರಿತು ಪ್ರತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೂ ಜ್ಞಾಪನಾ ಪತ್ರ ಬಂದಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ವಿಳಂಬ ಏಕಾಯ್ತು?
ಸ್ಯಾಟ್ಸ್‌ (ಸ್ಟೂಡೆಂಟ್‌ ಎಚೀವ್‌ಮೆಂಟ್‌ ಟ್ರ್ಯಾಕಿಂಗ್‌ ಸಿಸ್ಟಮ್‌) ಆಧಾರದಲ್ಲಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆಗಳಿಗೆ ಅನುಗುಣವಾಗಿ ಸಂಖ್ಯೆಯನ್ನು ಸರಕಾರವೇ ನೀಡಿ, ಅದರಂತೆ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಪ್ರತಿವರ್ಷ ಸರಕಾರದ ಸಮವಸ್ತ್ರವು ಶಾಲೆ ಆರಂಭದಲ್ಲೇ ವಿದ್ಯಾರ್ಥಿಗಳಿಗೆ ಸಿಗುತ್ತಿತ್ತು. ಸರ್ವ ಶಿಕ್ಷಾ ಅಭಿಯಾನದ ಸಮವಸ್ತ್ರ ಕೊಂಚ ವಿಳಂಬವಾಗುತ್ತಿತ್ತು. ಆದರೆ ಈ ಬಾರಿ ಚುನಾವಣೆ, ಸರಕಾರ ಬದಲಾವಣೆ, ಟೆಂಡರ್‌ನಲ್ಲಿನ ತಾಂತ್ರಿಕ ದೋಷ ವಿಳಂಬಕ್ಕೆ ಕಾರಣ ಎನ್ನುತ್ತಿದೆ ಇಲಾಖೆ. ಈ ವರ್ಷ ಶಾಲಾಭಿವೃದ್ಧಿ ಸಮಿತಿಗೆ ಇನ್ನೂ ಹಣ ಬಿಡುಗಡೆಯಾಗಿಲ್ಲ.

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next