ಉಡುಪಿ: ಈ ವರ್ಷ ಸುರಿದ ಭಾರೀ ಮಳೆಯಿಂದ ಹಾನಿಯಾಗಿರುವ ಶಾಲೆ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡದ ತುರ್ತು ದುರಸ್ತಿಗೆ ಉಡುಪಿ ಜಿಲ್ಲಾಡಳಿತ ಮುಂದಾಗಿದೆ.
ಸುಮಾರು 6.74 ಕೋ.ರೂ. ವೆಚ್ಚದಲ್ಲಿ ಜಿಲ್ಲೆಯ 240 ಶಾಲೆ, 84 ಅಂಗನವಾಡಿ ಕಟ್ಟಡ, 13 ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ದುರಸ್ತಿಗೆ ಕಾರ್ಯಾದೇಶ ನೀಡಲಾಗಿದೆ.
60 ಶಾಲಾ ಕಟ್ಟಡ, 28 ಅಂಗನವಾಡಿ ಕಟ್ಟಡ ದುರಸ್ತಿಗೆ 1.76 ಕೋ.ರೂ. ಮೀಸಲಿಟ್ಟಿದ್ದು ಇದರ ಕಾಮಗಾರಿಯನ್ನು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದಿಂದ ಮಾಡಲಾಗುತ್ತದೆ. 180 ಶಾಲಾ ಕಟ್ಟಡ, 56 ಅಂಗನವಾಡಿ ಕಟ್ಟಡದ ದುರಸ್ತಿಗೆ 4.72 ಕೋ.ರೂ. ವಿನಿ ಯೋಗಿಸಲಾಗುತ್ತಿದ್ದು, ಇದರ ಕಾಮಗಾರಿ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. 13 ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ದುರಸ್ತಿಯನ್ನು 26 ಲಕ್ಷ ರೂ. ಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಾಪಾಲ ಅಭಿಯಂತರರ ಮೂಲಕ ಮಾಡಲಾಗುತ್ತದೆ.
ತಾಲೂಕುವಾರು ಹಾನಿ ವಿವರ ಉಡುಪಿಯಲ್ಲಿ 40 ಶಾಲಾ ಕಟ್ಟಡ, 25 ಅಂಗನವಾಡಿ ಕಟ್ಟಡ, ಬೈಂದೂರಿನಲ್ಲಿ 88 ಶಾಲಾ ಕಟ್ಟಡ 9 ಅಂಗನವಾಡಿ ಕಟ್ಟಡ, ಕಾರ್ಕಳದಲ್ಲಿ 52 ಶಾಲಾ ಕಟ್ಟಡ, 22 ಅಂಗನವಾಡಿ ಕಟ್ಟಡ, ಕಾಪುವಿನಲ್ಲಿ 23 ಶಾಲಾ ಕಟ್ಟಡ, 19 ಅಂಗನವಾಡಿ ಕಟ್ಟಡ ಹಾಗೂ ಕುಂದಾಪುರದಲ್ಲಿ 37 ಶಾಲಾ ಕಟ್ಟಡ ಮತ್ತು 9 ಅಂಗನವಾಡಿ ಕಟ್ಟಡಕ್ಕೆ ಜೂನ್ ನಿಂದ ಅಗಸ್ಟ್ ಅಂತ್ಯದ ವರೆಗೂ ಸುರಿದ ಭಾರೀ ಮಳೆಯಿಂದ ಹಾನಿಯಾಗಿತ್ತು. ಉಡುಪಿ, ಕುಂದಾಪುರದಲ್ಲಿ ತಲಾ 3, ಕಾಪುವಿನಲ್ಲಿ 5 ಹಾಗೂ ಬೈಂದೂರಿನಲ್ಲಿ 2 ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ಹಾನಿಯಾಗಿತ್ತು.
20 ಕೋ.ರೂ. ಅನುದಾನ 2022ನೇ ಸಾಲಿನ ಪ್ರಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಜಿಲ್ಲೆಗೆ ಪ್ರವಾಹ ಪರಿಹಾರ ಕಾರ್ಯಗಳಿಗೆ ಈವರೆಗೂ ಸರಕಾರದಿಂದ 20 ಕೋ.ರೂ. ಬಂದಿದೆ. ಹಾಗೆಯೇ ಮೂಲಸೌಕರ್ಯ (ಶಾಲೆ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ, ರಸ್ತೆ ಇತ್ಯಾದಿ) ದುರಸ್ತಿಗೆ 9.73 ಕೋ.ರೂ. ಬಂದಿದೆ. ಜೀವ ಹಾಗೂ ಜಾನುವಾರು ಹಾನಿ ಸಹಿತ ವಿವಿಧ 1,087 ಪ್ರಕರಣದಲ್ಲಿ 2.89 ಕೋ.ರೂ.ಗಳನ್ನು ತಹಶೀಲ್ದಾರ್ ಮೂಲಕ ಸಂಬಂಧಪಟ್ಟವರ ಖಾತೆಗೆ ಪರಿಹಾರ ನೇರ ವರ್ಗಾವಣೆ ಮಾಡಲಾಗಿದೆ.
ಪೂರ್ಣ ಅನುದಾನ ಬಳಕೆ: ಕಾಲುಸಂಕಗಳ ದುರಸ್ತಿಯನ್ನು ಪಿಡಬ್ಲೂéಡಿ ಇಲಾಖೆಯ ಜತೆಗೆ ಜಿ.ಪಂ. ಮೂಲಕ ನರೇಗಾದಡಿಯೂ ಮಾಡ ಲಾಗುತ್ತಿದೆ. ಮೂಲಸೌಕರ್ಯ ಪುನರ್ ಸ್ಥಾಪಿಸಲು ಸರಕಾರದಿಂದ ಬಂದಿರುವ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಶಾಲೆ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದ ದುರಸ್ತಿಗೆ ಕಾರ್ಯಾದೇಶ ನೀಡಲಾಗಿದೆ. -ಕೂರ್ಮಾರಾವ್ ಎಂ. ಜಿಲ್ಲಾಧಿಕಾರಿ ಉಡುಪಿ