Advertisement

ವಿದ್ಯಾರ್ಥಿ ವೇತನವಿನ್ನು ನೇರ ಬ್ಯಾಂಕ್‌ ಖಾತೆಗೆ ಜಮಾ

06:25 AM Sep 06, 2018 | Team Udayavani |

ಬೆಂಗಳೂರು: ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ವಿದ್ಯಾರ್ಥಿ ವೇತನಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಪಡೆದು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಹಣ ಪಾವತಿಸುವ “ಕರ್ನಾಟಕ ವಿದ್ಯಾರ್ಥಿ ವೇತನ ತಂತ್ರಾಂಶ’ಕ್ಕೆ ಬುಧವಾರ ಚಾಲನೆ ನೀಡಲಾಗಿದೆ.

Advertisement

ಗೃಹಕಚೇರಿ ಕೃಷ್ಣಾದಲ್ಲಿ ನೂತನ ವೆಬ್‌ಸೈಟ್‌ sp.karnataka.gov.inಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.

ಇನ್ನು ಒಂದು ತಿಂಗಳಲ್ಲಿ ಮೂರೂ ಇಲಾಖೆಗಳ ವ್ಯಾಪ್ತಿಗೆ ಬರುವ ಎಲ್ಲಾ ವಿದ್ಯಾರ್ಥಿಗಳಿಗೆ ಆನ್‌ ಲೈನ್‌ ಮೂಲಕವೇ ವಿದ್ಯಾರ್ಥಿ ವೇತನವನ್ನು ಅವರ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾವಣೆ ಮಾಡುವ ಗುರಿ ಹೊಂದಲಾಗಿದೆ ಎಂದು ಸಿಎಂ ಹೇಳಿದರು.

ದೇಶದಲ್ಲೇ ಅತಿ ದೊಡ್ಡ ಮತ್ತು ನೂತನ ವೆಬ್‌ ಪೋರ್ಟಲ್‌ ಇದಾಗಿದ್ದು, ನಾಲ್ಕೂ ಇಲಾಖೆಗಳ ವಿದ್ಯಾರ್ಥಿ ವೇತನಕ್ಕೆ ಈ ಪೋರ್ಟಲ್‌ ಮೂಲಕವೇ ಅರ್ಜಿ ಸಲ್ಲಿಸಬೇಕು. ಒಂದನೇ ತರಗತಿಯಿಂದ ಹಿಡಿದು ಮೆಟ್ರಿಕ್‌ ಪೂರ್ವ ಮತ್ತು ನಂತರದ ಎಲ್ಲಾ ವಿದ್ಯಾರ್ಥಿಗಳು ಈ ವ್ಯವಸ್ಥೆಯಲ್ಲೇ ಅರ್ಜಿ ಸಲ್ಲಿಸಬೇಕಾಗುತ್ತದೆ. ಕನ್ನಡ, ಆಂಗ್ಲದಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶವಿರುತ್ತದೆ.

ಈವರೆಗೆ ಮೂರೂ ಇಲಾಖೆಗಳು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ವಿದ್ಯಾರ್ಥಿ ವೇತನ ವಿತರಿಸಲು ಪ್ರತ್ಯೇಕ ವ್ಯವಸ್ಥೆ ಹೊಂದಿದ್ದವು. ವಿದ್ಯಾರ್ಥಿಗಳ ಪರವಾಗಿ ಶಾಲಾ ಶಿಕ್ಷಕರು ಇಲಾಖಾ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿದ ನಂತರ ಅದರ ಪ್ರತಿಯನ್ನು ಪೂರಕ ದಾಖಲೆಗಳೊಂದಿಗೆ ತಾಲೂಕು ಕಚೇರಿಗೆ ಸಲ್ಲಿಸಬೇಕಿತ್ತು. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಮಂಜೂರಾತಿ ನೀಡುತ್ತಿದ್ದರು. ಇದರಿಂದ ವಿದ್ಯಾರ್ಥಿ ವೇತನ ವಿಳಂಬವಾಗುತ್ತಿತ್ತು. ಜೊತೆಗೆ ದುರುಪಯೋಗಕ್ಕೂ ಕಾರಣವಾಗಿತ್ತು.

Advertisement

ಏನಿದು ಹೊಸ ವ್ಯವಸ್ಥೆ: ಹೊಸ ವ್ಯವಸ್ಥೆಯಡಿ ಅಂತಹ ಯಾವುದೇ ಸಮಸ್ಯೆ ಇಲ್ಲ. ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಮೂರು ರೀತಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಶಾಲೆಗಳ ಮೂಲಕ ಅರ್ಜಿ ಸಲ್ಲಿಸಬಹುದು. ಈ ವೇಳೆ ಶಾಲಾ ಶಿಕ್ಷಕರು ವಿದ್ಯಾರ್ಥಿಗಳ ಪರ ಅರ್ಜಿ ಸಲ್ಲಿಸುತ್ತಾರೆ. ಎರಡನೆಯದಾಗಿ ವಿದ್ಯಾರ್ಥಿಗಳೇ ಮೊಬೈಲ್‌ ಅಥವಾ ಕಂಪ್ಯೂಟರ್‌ ಮೂಲಕ ಅರ್ಜಿ ಸಲ್ಲಿಸಬಹುದು. ಮೂರನೆಯದಾಗಿ ಸಾಮಾನ್ಯ ಸೇವಾ ಕೇಂದ್ರಗಳು, ಬಾಪೂಜಿ ಕೇಂದ್ರಗಳಲ್ಲಿಯೂ 20 ರೂ. ಸೇವಾ ಶುಲ್ಕ ನೀಡಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್‌ ವ್ಯವಸ್ಥೆ ಗುರುತಿನ ಚೀಟಿ ಸಂಖ್ಯೆ, ಮೊಬೈಲ್‌ ಸಂಖ್ಯೆ, ಆಧಾರ್‌ ಸಂಖ್ಯೆ, ಜಾತಿ ಮತ್ತು ಆದಾಯ ಪ್ರಮಾಣಪತ್ರದ ಆರ್‌ಡಿ ಸಂಖ್ಯೆಗಳನ್ನು ನೀಡಿದರೆ ಸಾಕು. ಎಸ್‌ಎಟಿಎಸ್‌ನಲ್ಲಿರುವ
ವಿದ್ಯಾರ್ಥಿಗಳ ಶೈಕ್ಷಣಿಕ ಮಾಹಿತಿ ಮತ್ತು ಕಂದಾಯ ಇಲಾಖೆ ಅಟಲ್‌ಜಿ ಜನಸ್ನೇಹಿ ಕೇಂದ್ರದ ತಂತ್ರಾಂಶದಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ತಾಂತ್ರಿಕವಾಗಿ ಪಡೆಯಲಾಗುತ್ತದೆ. ನವೀಕರಣ ಅರ್ಜಿದಾರರು ಹಿಂದಿನ ವಿದ್ಯಾರ್ಥಿ ವೇತನದ ನೋಂದಣಿ ಸಂಖ್ಯೆ ನೀಡಬೇಕು. ಅರ್ಜಿ ಸ್ವೀಕೃತವಾದ ನಂತರ ಆಧಾರ್‌ ಸಂಖ್ಯೆ ಆಧರಿಸಿ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ನೇರ ಹಣ ವರ್ಗಾವಣೆ ಆಗುತ್ತದೆ.

ಸೋರಿಕೆ ತಪ್ಪಿಸುವ ಉದ್ದೇಶ
2017-18ನೇ ಸಾಲಿನಲ್ಲಿ 61.41 ಲಕ್ಷ ಮಕ್ಕಳಿಗೆ 1704 ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲಾಗಿತ್ತು. ಆದರೆ, ಈ ಯೋಜನೆಯಲ್ಲಿ ಸಾಕಷ್ಟು ಸೋರಿಕೆಯಾಗಿದ್ದು, ಇದನ್ನು ತಪ್ಪಿಸುವ ಉದ್ದೇಶದಿಂದ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಇದೇ ರೀತಿ ಸರ್ಕಾರದ ಎಲ್ಲಾ ಯೋಜನೆಗಳು ನೇರವಾಗಿ ಫ‌ಲಾನುಭವಿಗಳಿಗೆ ತಲುಪಿಸಲು ಏಕೀಕೃತ ಮತ್ತು ಆನ್‌ಲೈನ್‌ ವ್ಯವಸ್ಥೆಯ ಅಗತ್ಯವಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next