Advertisement

SM Krishna: ವಿದ್ವತ್ಪೂರ್ಣ ಎಸ್‌.ಎಂ.ಕೃಷ್ಣ ವಿದೇಶದಲ್ಲಿ ಕಾನೂನು ಪದವಿ ಪಡೆದ ನಿಪುಣ

12:21 AM Dec 11, 2024 | Team Udayavani |

ಮದ್ದೂರಿನ ಪ್ರತಿಷ್ಠಿತ ಕುಟುಂಬದ ಕೂಸು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರದ್ದು ಮದ್ದೂರು ಭಾಗದಲ್ಲಿ ಅತ್ಯಂತ ಪ್ರತಿಷ್ಠಿತ ಕುಟುಂಬ. ಕೃಷ್ಣ ಅವರ ತಾತ ಚಿಕ್ಕೇ ಗೌಡ ಅವರಿಗ ಹತ್ತು ಮಂದಿ ಮಕ್ಕಳು. ಕೃಷ್ಣ ಅವರ ತಂದೆ ಎಸ್‌. ಸಿ. ಮಲ್ಲಯ್ಯ ಅವರಿಗೆ 8 ಹೆಣ್ಣು, ಇಬ್ಬರು ಗಂಡು ಮಕ್ಕಳು. ಕೃಷ್ಣ ಅವರು 8ನೇ ಮಗುವಾಗಿ 1932ರ ಮೇ 1ರಂದು ಜನಿಸಿದರು. ಎಸ್‌.ಎಂ.ಕೃಷ್ಣ ಅವರು 1937ರಂದು ಸೋಮನಹಳ್ಳಿಯ ಸರ್ಕಾರಿ ಪ್ರಾಥ­ಮಿಕ ಶಾಲೆಯಲ್ಲಿ ವಿದ್ಯಾರಂಭ ಮಾಡಿದರು. ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ತುಂಬಾ ಆರಂಭಿಕ ಶಿಕ್ಷಣ ಪೂರೈಸಿದರು. ಮೈಸೂರು ಮಹಾ­ರಾಜ ಕಾಲೇಜಿನಲ್ಲಿ ಪದವೀಧರರಾದ ನಂತರ ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ನಡೆಸಿದರ ಕೃಷ್ಣ ಅವರು ಕಾನೂನು ಪದವಿ ಓದುತ್ತಿರುವಾಗ ಎರಡನೇ ವರ್ಷದ ಪರೀಕ್ಷೆಯಲ್ಲಿ ರೋಮನ್‌ ಲಾ ವಿಷಯದಲ್ಲಿ ಫೇಲ್‌ ಆಗಬಹುದು ಎಂದು ಭಾವಿಸಿದ್ದರು. ಆದರೆ ಅವರಿಗೆ ಆಶ್ಚರ್ಯ ಆಗುವಂತೆ 69 ಅಂಕ ಬಂದಿದ್ದವು. ಈ ಅಂಕಗಳು ಎಸ್‌ಎಂಕೆಗೆ ಕಾನೂನು ಪದವಿಯಲ್ಲಿ ಹೈ ಸೆಕೆಂಡ್‌ ಕ್ಲಾಸ್‌ ಪಡೆಯಲು ನೆರವು ನೀಡಿತು.

Advertisement

ಜ್ಯೂನಿಯರ್‌ ಲಾಯರ್‌
ಎಸ್‌ಎಂಕೆ ಕಾನೂನು ಪದವಿ ಪಡೆದ ಬಳಿಕ ಸ್ನಾತಕೋತ್ತರ ಪದವಿ ಪಡೆಯುವ ಹಂಬಲ ಹೊಂದಿದ್ದರು. ಆದರೆ ನ್ಯಾಯಮೂರ್ತಿ ಹೊಂಬೇ ಗೌಡರು, ‘ಸ್ವಲ್ಪಕಾಲ ಪ್ರಾಕ್ಟೀಸ್‌ ಮಾಡು, ಆಮೇಲೆ ಪೋಸ್ಟ್‌ ಗ್ರಾಡುಯೇಷನ್‌ ಮಾಡು’ ಎಂದು ನೀಡಿದ ಸಲಹೆಯನ್ನು ಗಂಭೀರವಾಗಿ ಸ್ವೀಕರಿಸಿ ಅವರೇ ಸೂಚಿಸಿದಂತೆ ಪ್ರಸಿದ್ಧ ವಕೀಲ ಎಸ್‌.ಡಿ.ಗಣೇಶ ರಾಯರ ಬಳಿ ಜೂನಿ­ಯರ್‌ ವಕೀಲರಾಗಿ ಸೇರಿಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ಫ‌ುಲ್‌ ಬ್ರೈಟ್‌ ಸ್ಕಾಲರ್‌ಶಿಪ್‌ಗೆ ಪ್ರಯತ್ನಿಸುವಂತೆ ಸ್ನೇಹಿತ ನೀಡಿದ ಸಲಹೆ ಪರಿಗಣಿಸಿ ಅರ್ಜಿ ಹಾಕುತ್ತಾರೆ. ಆಗಿನ ಮದ್ರಾಸ್‌ನಲ್ಲಿ ನಡೆದ ಇಂಟರ್‌ವ್ಯೂನಲ್ಲಿ ಸುಮಾರು 5 ಸಾವಿರ ಜನ ಭಾಗಿಯಾಗಿರುತ್ತಾರೆ. ಈ ಪೈಕಿ 25 ಮಂದಿಯನ್ನು ಆಯ್ಕೆ ಮಾಡುವ ಉದ್ದೇಶ ಇರುತ್ತದೆ. ಕೃಷ್ಣ ಅವರಿಗೆ ಭಾರತೀಯ ಸಂಗೀತ ಅದರಲ್ಲಿಯೂ ತಬಲಾದ ಬಗೆಗಿದ್ದ ವಿಶೇಷ ಜ್ಞಾನ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್‌ ಬಗ್ಗೆಗಿದ್ದ ಮಾಹಿತಿ ಸಂದರ್ಶನಕಾರರ ಮೆಚ್ಚುಗೆ ಪಡೆದು ಎಸ್‌ಎಂಕೆ ವಿದ್ಯಾರ್ಥಿ ನಿಧಿಗೆ ಅರ್ಹತೆ ಪಡೆಯುತ್ತಾರೆ. ಅಮೆರಿಕದ ಡಲ್ಲಾಸ್‌ ಟೆಕ್ಸಾಸ್‌ನ ಸದರ್ನ್ ಮೆಥಾಡಿಸ್ಟ್‌ ವಿವಿಗೆ ಪ್ರವೇಶ ಪಡೆಯುತ್ತಾರೆ. ಈ ವಿವಿಯು ಕಾನೂನು ಶಿಕ್ಷಣಕ್ಕೆ ಅತ್ಯಂತ ಪ್ರಸಿದ್ಧವಾಗಿತ್ತು.

ಅಮೆರಿಕದಲ್ಲಿ ಜಾನ್‌ ಕೆನಡಿ ಪರ ಪ್ರಚಾರ
ಈ ಮಧ್ಯೆ 1960ರ ಸೆಪ್ಟೆಂಬರ್‌ನಲ್ಲಿ ಅಮೆರಿಕ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಾನ್‌ ಎಫ್. ಕೆನಡಿ ಸ್ಪರ್ಧಿಸಿದ್ದರು. ಕೃಷ್ಣ ಅವರು ಸ್ವತಃ ಕೆನಡಿಯವರಿಗೆ ಪತ್ರ ಬರೆದು ಭಾರತೀಯರು ವಾಸಿಸುವ ಸ್ಥಳಗಳಲ್ಲಿ ಅವರ ಪರ ತಾವು ಪ್ರಚಾರ ಮಾಡುವುದಾಗಿ ತಿಳಿಸಿದ್ದರು. ಈ ಪತ್ರಕ್ಕೆ ಕೆನಡಿಯವರು ಮರುತ್ತರವನ್ನು ಸಹ ಬರೆದಿದ್ದರು. ತಮ್ಮ ಪರವಾಗಿ ಪ್ರಚಾರ ನಡೆಸಿದ್ದಕ್ಕೆ ಎಸ್‌ಎಂಕೆ ಅವರಿಗೆ ಕೆನಡಿ ಧನ್ಯವಾದ ಹೇಳಿ ಪತ್ರ ಬರೆದಿದ್ದರು. ಎಸ್‌ಎಂಕೆ ಕೆನಡಿ ಅವರನ್ನು ತಮ್ಮ ರಾಜಕೀಯ ಗುರು ಎಂದು ಮನಸ್ಸಿನಲ್ಲೇ ಸ್ವೀಕರಿಸಿದರು. ಈ ಮಧ್ಯೆ ಜಾರ್ಜ್‌ ವಾಷಿಂಗ್ಟನ್‌ ವಿವಿಯಲ್ಲಿ ಕಂಪಾರೆಟಿವ್‌ ಕನ್ಸಲ್ಟೆಷನ್‌ ಎಂಬ ವಿಷಯದಲ್ಲಿ ಪಿಎಚ್‌ಡಿ ಮಾಡಲು ಎಸ್‌ಎಂಕೆ ನೋಂದಾಯಿಸಿಕೊಂಡಿದ್ದರು. ಸ್ಕಾಲರ್‌ಶಿಪ್‌ ಮುಗಿದಿದ್ದ ಹಿನ್ನೆಲೆಯಲ್ಲಿ ನ್ಯಾಷನಲ್‌ ಅಸೋಸೀಯೇಷನ್‌ ಆಫ್ ಮ್ಯಾನ್ಯುಫ್ಯಾಕ್ಚರ್‌ (ಎನ್‌ಎಎಂ) ಅರೆಕಾಲಿಕ ಕೆಲಸವೊಂದಕ್ಕೆ ಸೇರಿದ್ದರು. ಆದರೆ ತಾಯಿ ತೀವ್ರ ಅಸ್ವಸ್ಥರಾಗಿದ್ದಾರೆಂಬ ಕರೆ ಬಂದ ಹಿನ್ನೆಲೆಯಲ್ಲಿ ಪಿಎಚ್‌ಡಿಯನ್ನು ಮೊಟಕುಗೊಳಿಸಿ ಭಾರತಕ್ಕೆ ಹಿಂತಿರುಗಿದರು.

ತೀರ್ಥಹಳ್ಳಿಯ ಪ್ರೇಮಾ ಜತೆಗೆ ವಿವಾಹ
1964ರ ಸಮಯದಲ್ಲಿ ಕೃಷ್ಣ ಪ್ರಜಾ ಸೋಷಿಯಲಿಸ್ಟ್‌ ಪಕ್ಷದಲ್ಲಿ ಸಕ್ರಿಯ­ರಾಗಿದ್ದರು. ಅದೇ ವೇಳೆಗೆ ತೀರ್ಥಹಳ್ಳಿಯಪ್ರೇಮಾ ಅವರ ಸೋದರ ಸಂಬಂಧಿಯೊಬ್ಬರು ಕೃಷ್ಣ ಅವರನ್ನು ಮದುವೆಯಾಗುವಂತೆ ಪ್ರಸ್ತಾವಿಸಿದರು. ಪ್ರೇಮಾ ಹಾಗೂ ಅವರ ಕುಟುಂಬದವರು ಸಮ್ಮತಿಸಿ ಎ.19, 1964ರಲ್ಲಿ ಮದುವೆಯಾದರು. ರಾಜಕಾರಣ ಎಂದ ಮೇಲೆ ಸುತ್ತಾಟ, ಪಕ್ಷ ಕಟ್ಟುವ ಕೆಲಸದ ಹೊಣೆಗಾರಿಕೆ ಇರುತ್ತದೆ. ರಾಷ್ಟ್ರಮಟ್ಟದ ರಾಜಕಾರಣಿಯಾಗಿ ಬೆಳೆಯುತ್ತ ಹೋದಂತೆ ಜವಾಬ್ದಾರಿಯೂ ಹೆಚ್ಚಾಯ್ತು. ಎಷ್ಟೇ ಒತ್ತಡವಿದ್ದರೂ ಕೌಟುಂಬಿಕ ಜೀವನಕ್ಕೆ ಧಕ್ಕೆಯಾಗ­ದಂತೆ ನೋಡಿಕೊಂಡಿದ್ದಾರೆ. ಪತ್ನಿ ಪ್ರೇಮಾ ಕೂಡ ಪತಿಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿದ್ದಾಗ ಸುಮಾರು 3 ವರ್ಷಗಳ ಕಾಲ ಅಲ್ಲಿಯೇ ಇದ್ದೇವು. ಆರಂಭದಲ್ಲಿ ಅವರೊಂದಿಗೆ ಸುತ್ತಾಡುತ್ತಿದ್ದೆ. ಆರೋಗ್ಯ ಸರಿಯಿಲ್ಲ. ಹವಾನಿಯಂತ್ರಿತ (ಎಸಿ) ಎಂದರೆ ನನಗೆ ಅಲರ್ಜಿ. ಅಲ್ಲದೇ ಬೆನ್ನು ನೋವು ಕಾಡುತ್ತಿದೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಅವರೊಂದಿಗೆ ಹೊರಗಡೆ ತೆರಳಲು ಆಗುತ್ತಿಲ್ಲ. ಮನೆಯಲ್ಲೇ ಆರಾಮಾಗಿ ಕಾಲ ಕಳೆಯುತ್ತಿದ್ದೇನೆ’ ಎನ್ನುವ ಪ್ರೇಮಾ, ರಾಜಕೀಯದಲ್ಲಿ ಅವರ ಚಾಕಚಕ್ಯತೆ ಅಂದರೆ ನನಗಿಷ್ಟ ಎಂದು ಆಗಾಗ ಹೇಳುತ್ತಿರುತ್ತಾರೆ.

Advertisement

ರಾಜಕೀಯದಿಂದ ದೂರ ಉಳಿದ ಶಾಂಭವಿ
ಕೃಷ್ಣ ಅವರ ಇಬ್ಬರು ಪುತ್ರಿಯರ ಪೈಕಿ ಶಾಂಭವಿ ಅವರ ಹೆಸರು ಆಗಾಗಾ ರಾಜಕೀಯ ಉತ್ತರಾಧಿಕಾರಕ್ಕಾಗಿ ಕೇಳಿ ಬರುತ್ತಿತ್ತು. ಆದರೆ ಎಸ್‌ಎಂಕೆ ಸಕ್ರೀಯ ರಾಜಕಾರಣದಲ್ಲಿ ಇರುವ ತನಕ ಅದು ಸಾಕಾರಗೊಂಡಿಲ್ಲ. ಶಾಂಭವಿ ಅವರ ಹೆಸರು ಮಂಡ್ಯ, ಬೆಂಗಳೂರು ಉತ್ತರ ಕ್ಷೇತ್ರಗಳಿಗೆ ಕೇಳಿ ಬಂದಿತ್ತು. ಕಾಫಿ ದೈತ್ಯ ಉದ್ಯಮಿ ಹಾಗೂ ಎಸ್‌ಎಂಕೆ ಅವರ ಅಳಿಯ ಸಿದ್ದಾರ್ಥ ದಾರುಣ ಅಂತ್ಯ ಎಸ್‌ಎಂಕೆ ಅವರನ್ನು ಮಾನಸಿಕವಾಗಿ ಜರ್ಝ­ರಿತಗೊಳಿಸಿತು. ಎಸ್‌ಎಂಕೆ ಪುತ್ರಿ ಹಾಗೂ ಸಿದ್ದಾರ್ಥ ಪತ್ನಿ ಮಾಳವಿಕಾ ಹೆಗ್ಡೆ ಮೊದಲಿಂದಲೂ ರಾಜಕೀಯದಿಂದ ದೂರ. ಏನಿದ್ದರೂ ಅವರದ್ದು ಕುಟುಂಬ, ವ್ಯವಹಾರದತ್ತ ಗಮನ. ಪತಿಯ ಸಾವಿನ ಅನಂತರ ಮಾಳವಿಕ ವ್ಯವಹಾರವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಯುರೋಪ್‌ನ ಬುಡಾಪೆಸ್ಟ್‌ ಅಂದರೆ ಇಷ್ಟ
ಯುರೋಪ್‌ನ ಬುಡಾಪೆಸ್ಟ್‌ ಪ್ರದೇಶ ಎಂದರೆ ತುಂಬಾ ಇಷ್ಟ. ಬೋಟ್‌ ಲ್ಲಿ ಕುಟುಂಬದೊಂದಿಗೆ ಪ್ರಯಾಣ ಮಾಡುವುದು ಎಂದರೆ ಕೃಷ್ಣ ಅವರಿಗೆ ತುಂಬಾ ಖುಷಿ. ಎಸ್‌ಎಂಕೆ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಮಾಳವಿಕಾ ಸಿದ್ಧಾರ್ಥ ಮತ್ತು ಶಾಂಭವಿ ಹಿಂಗೋರಾಣಿ. ಮಾಳವಿಕಾ ಮತ್ತು ಸಿದ್ದಾರ್ಥ ದಂಪತಿಗೆ ಅಮಾರ್ತ್ಯ ಹೆಗ್ಡೆ ಮತ್ತು ಇಶಾನ್‌ ಸುಬ್ರಹ್ಮಣ್ಯ ಎಂಬಿಬ್ಬರು ಮಕ್ಕಳಿದ್ದಾರೆ. ಈ ಪೈಕಿ ಅಮಾರ್ತ್ಯ ಹೆಗ್ಡೆ ಅವರ ವಿವಾಹವು ರಾಜ್ಯದ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಅವರ ಮಗಳಾದ ಐಶ್ವರ್ಯಾರ ಜತೆ ನಡೆದಿದೆ. ಶಾಂಭವಿ ಮತ್ತು ಉಮೇಶ್‌ ಹಿಂಗೋರಾಣಿ ದಂಪತಿಗೆ ದೇವ್‌ ಎಂಬ ಪುತ್ರನಿದ್ದಾನೆ.

ಜಾತ್ಯತೀತ ಸಾಕ್ಷಿಪ್ರಜ್ಞೆ
ವೈಚಾರಿಕ ಕ್ರಾಂತಿಯ ಹರಿಕಾರರಾದ ಬಸವಣ್ಣನವರ ಮಾತುಗಳಿಂದ ಪ್ರೇರಿತರಾಗಿದ್ದ ಎಸ್‌.ಎಂ.ಕೃಷ್ಣ ಅವರು ಜಾತ್ಯತೀತ ಪ್ರಜ್ಞೆಯಿಂದ ಕೆಲಸ ಮಾಡಿದ್ದಾರೆ. ಸಂವಿಧಾನದ ಬಗ್ಗೆ ಇವರು ಇಟ್ಟುಕೊಂಡಿದ್ದ ಬದ್ಧತೆ ಸಮಾಜದಲ್ಲಿ ಎಲ್ಲಾ ಸಮುದಾಯಗಳಿಗೂ ನ್ಯಾಯ ದೊರಕಿಸಿಕೊಡಲು ನೆರವಾಯಿತು.

ರಾಜಕೀಯ ಹಾದಿ…
-1932: ಮೇ 1 ಜನನ
-1962: ಮೊದಲ ಬಾರಿಗೆ ವಿಧಾನ ಸಭೆಗೆ ಪ್ರವೇಶ
-1968: ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶ
-1972-1977: ಉಪ ಚುನಾವಣೇಲಿ ಗೆದ್ದು ವಾಣಿಜ್ಯ, ಕೈಗಾರಿಕೆ
-1982: ವಿಶ್ವಸಂಸ್ಥೆಗೆ ಭಾರತದ ಪ್ರತಿನಿಧಿಗಳ ತಂಡದ ಸದಸ್ಯ
-1983-84: ಕೇಂದ್ರ ಕೈಗಾರಿಕಾ ಸಚಿವ
-1989-1993: ಕರ್ನಾಟಕ ವಿಧಾನಸಭಾ ಸ್ಪೀಕರ್‌
-1993-94: ಕರ್ನಾಟಕದ ಉಪ ಮುಖ್ಯಮಂತ್ರಿ
-1999: ಕೆಪಿಸಿಸಿ ಅಧ್ಯಕ್ಷ
-1999-2004: ಕರ್ನಾಟಕದ ಮುಖ್ಯಮಂತ್ರಿ
-2004-2008: ಮಹಾರಾಷ್ಟ್ರದ ರಾಜ್ಯಪಾಲ
-2009-2012: ವಿದೇಶಾಂಗ ವ್ಯವಹಾರಗಳ ಸಚಿವ
-2017: ಜನವರಿಯಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ
-2017: ಮಾರ್ಚ್‌ನಲ್ಲಿ ಬಿಜೆಪಿಗೆ ಸೇರ್ಪಡೆ
-2023: ಜನವರಿಯಲ್ಲಿ ರಾಜಕಾರಣದಿಂದ ನಿವೃತ್ತಿ

ಪ್ರಶಸ್ತಿ, ಗೌರವ ಪಟ್ಟಿ
-ಪದ್ಮವಿಭೂಷಣ ಪ್ರಶಸ್ತಿ (2023)
-ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್‌
-ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್‌

ಪುಸ್ತಕಗಳ ಪಟ್ಟಿ
-ನೆಲದ ಸಿರಿ
-ಎಸ್‌.ಎಂ.ಕೃಷ್ಣ ಅವರ ಜೀವನಗಾಥೆ
-ಕೃಷ್ಣ ಪಥ
-ಡೌನ್‌ ಮೆಮೊರಿ ಲೈನ್‌ ಆಫ್ ರೇಡಿಯಂಟ್‌ ಜಾಯ್ಸ
-ಭವಿಷ್ಯದರ್ಶನ
-ಸ್ಟೇಟ್‌ಮನ್‌ ಎಸ್‌.ಎಂ.ಕೃಷ್ಣ
-ಸ್ಮತಿವಾಹಿನಿ

ಜೀವನಗಾಥೆ
ಮಲೆಮಹದೇಶ್ವರನ ಹರಕೆಯ ಫ‌ಲ
ಕೃಷ್ಣ ಅವರ ಜನನಕ್ಕೂ ಮುನ್ನ ಎರಡು ಗಂಡು ಮಕ್ಕಳು ಸಾವನ್ನಪ್ಪಿದ್ದರು. ಬಳಿಕ ಕೃಷ್ಣ ಅವರ ತಂದೆ-ತಾಯಿ ಮಲೆಮಹದೇಶ್ವರನಿಗೆ ಹರಕೆ ಹೊತ್ತ ಫಲವಾಗಿ ಎಸ್‌.ಎಂ.ಕೃಷ್ಣ ಅವರು ಜನನವಾಯಿತು. ಕೃಷ್ಣ ಅವರದ್ದು ಶ್ರೀಮಂತ ಕುಟುಂಬ. ಅವರ ತಂದೆ ಮಲ್ಲಯ್ಯ ಅವರು ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. 40 ವರ್ಷಕ್ಕೂ ಅ ಧಿಕ ಕಾಲ ಪ್ರಜಾಪ್ರತಿನಿಧಿ  ಸಭೆ, ಮೈಸೂರು ವಿವಿ ಸೆನೆಟ್‌ ಸದಸ್ಯರಾಗಿ, ರಾಜ್ಯ ಆರ್ಥಿಕ ಸುಧಾರಣಾ ಸಮಿತಿ ಸದಸ್ಯರಾಗಿ ಅವರು ಸೇವೆ ಸಲ್ಲಿಸಿದ್ದಾರೆ.

“ಟೆನಿಸ್‌ ಕೃಷ್ಣ’ ಪಂಚಪ್ರಾಣ
ಟೆನ್ನಿಸ್‌ ಎಂದರೆ ಕೃಷ್ಣ ಅವರಿಗೆ ಪಂಚಪ್ರಾಣ. ಬೆಂಗಳೂರಿನಲ್ಲಿದ್ದಾಗ ಪ್ರತೀ ರ ವಿವಾರ ತಪ್ಪದೇ ಬೆಳಗಿನ ಜಾವ ಮೂರು ಗಂಟೆಗೆ ಟೆನ್ನಿಸ್‌ ಕೋರ್ಟ್‌ನಲ್ಲಿ ಇರುವುದನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಕನಿಷ್ಠ ಮೂರು ಗಂಟೆಯಾದರೂ ಟೆನ್ನಿಸ್‌ ಆಡುತ್ತಿದ್ದರು. ಅವರು ವಿಂಬಲ್ಡನ್‌ ಕ್ರೀಡಾ ಕೂಟವನ್ನು ತಪ್ಪಿಸಿ­ ಕೊಂಡವರೇ ಅಲ್ಲ. 2004ರಲ್ಲಿ ಅವಧಿಪೂರ್ವ ಚುನಾವಣೆ ಎದುರಿಸಿದ ಅವರು ಫ‌ಲಿತಾಂ ಶಕ್ಕೂ ಕಾಯದೇ ವಿಂಬಲ್ಡನ್‌ಗೆ ತೆರಳಿದ್ದರು.

ಸಂಗೀತ ಮತ್ತು ಸಂಸ್ಕೃತ
ಕೃಷ್ಣ ಅವರಿಗೆ ಟೆನ್ನಿಸ್‌ನಷ್ಟೇ ಆಪ್ಯಾಯಮಾನ ವಾದ ಇನ್ನೆರಡು ಸಂಗತಿಗಳೆಂದರೆ ಸಂಗೀತ ಮತ್ತ ಸಂಸ್ಕೃತ. ಸಂಸ್ಕೃತ ವಿದ್ವಾಂಸ ಪಾವಗಡ ಪ್ರಕಾಶ ರಾಯರೂ ಸೇರಿದಂತೆ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಜ್ಞಾನ ಹೊಂದಿದ್ದ ವಿದ್ವಾಂಸರ ಜತೆಗೆ ನಿಕಟವಾದ ಸಂಪರ್ಕ ಹೊಂದಿದ್ದರು. ಮಹಾರಾಷ್ಟ್ರದ ರಾಜ್ಯ ಪಾಲ ರಾಗಿದ್ದ ಸಂದರ್ಭದಲ್ಲಿ ಅಲ್ಲಿನ ರಾಜಭವನ ವಿದ್ವತ್‌ ಚರ್ಚೆಯ ತಾಣವಾಗಿ ಪರಿವರ್ತನೆಯಾಗಿತ್ತು. ಚಾಮರಾಜಪೇಟೆಯ ಕೋಟೆ ಶಾಲೆಯ ಆವರಣದಲ್ಲಿ ನಡೆಯುತ್ತಿದ್ದ ರಾಮನವಮಿ ಸಂಗೀತ ಮಹೋತ್ಸವವನ್ನು ಕೃಷ್ಣ ತಪ್ಪಿಸಿಕೊಂಡಿದ್ದೇ ಕಡಿಮೆಯಂತೆ. ಕ್ಲಾಸಿಕಲ್, ಹಿಂದೂಸ್ಥಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಇಷ್ಟ. ಡಾ|ಎಂ. ಬಾಲಮುರಳಿಕೃಷ್ಣ, ಸುಧಾ ರಘುನಾಥನ್‌ ಅವರ ಸಂಗೀತಕ್ಕೆ ಮಾರು ಹೋಗುತ್ತಾರೆ.

ಅಳೆದು ತೂಗಿ ಮಾತು
ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಎಂದರೆ ತತ್‌ಕ್ಷಣ ನೆನಪಾಗುವುದು ಕಲಫ‌ುìಲ್‌ ರಾಜಕಾರಣಿ! ನೀಟಾಗಿ ಡ್ರೆಸ್‌ ಮಾಡಿಕೊಳ್ಳುವ, ಮುಖದಲ್ಲೊಂದು ಕಿರು ನಗೆ ಬೀರುವ, ಕರಾರುವಕ್ಕಾಗಿ ಅಗತ್ಯಕ್ಕೆ ತಕ್ಕಷ್ಟು ಮಾತನಾಡುವ ಕೃಷ್ಣ, ಪ್ರತಿಪಕ್ಷದವರು ಎಷ್ಟೇ ಬಿರುಸಾಗಿ ಮಾತನಾಡಿದರೂ ಸಹನೆ ಕಳೆದುಕೊಳ್ಳುತ್ತಿರಲಿಲ್ಲ. ಇತರರಂತೆ ಅಂಗಿ ಪರಚಿ ಕೂಗಾಡುವುದಿಲ್ಲ. ಸಮಯಕ್ಕೆ ತಕ್ಕಂತೆ, ವಿಷಯಾಧಾರಿತ ವಾಗಿ ಮಾರುತ್ತರ ನೀಡುತ್ತಿದ್ದರು. ಇದೇ ಅವರ ಹೆಗ್ಗಳಿಕೆ.

ಸಭ್ಯ ಉಡುಗೆಗೆ ಹೆಸರುವಾಸಿ
ಅತ್ಯಂತ ಶಿಸ್ತಿನ ರಾಜಕಾರಣಿ ಎಂದೇ ಹೆಸರು ಗಳಿಸಿಕೊಂಡಿದ್ದ ಎಸ್‌.ಎಂ.ಕೃಷ್ಣ ಅವರು ಯಾವಾಗಲೂ ಉತ್ತಮವಾದ ಉಡುಗೆಗಳನ್ನೇ ಧರಿಸುತ್ತಿದ್ದರು. ಸದಾ ಶುಭ್ರವಾದ, ಸರಳವಾದ ಬಟ್ಟೆಗಳನ್ನಷ್ಟೇ ಎಸ್‌.ಎಂ.ಕೃಷ್ಣ ಅವರ ಮೈಮೇಲೆ ನೋಡಲು ಸಾಧ್ಯವಿತ್ತು. ಸೂಟ್‌ ಆಗಲಿ, ಶರ್ಟ್‌- ಪ್ಯಾಂಟ್‌ ಆಗಲಿ, ಖಾದಿ ಬಟ್ಟೆಯಾಗಲಿ ಎಲ್ಲವೂ ಶಿಸ್ತಿನಿಂದ ಕೂಡಿರುತ್ತಿತ್ತು. ಅವರು ಧರಿಸುತ್ತಿದ್ದ ವಿಗ್‌ ಸಹ ನೈಜ ಕೂದಲು ಎನ್ನುವಂತೆಯೇ ಕಾಣುತ್ತಿತ್ತು.

ಅಪ್ಪಟ ಫ್ಯಾಮಿಲಿ ಮ್ಯಾನ್‌
ಬಿಡುವಿಲ್ಲದ ರಾಜಕಾರಣದಲ್ಲೂ ಕುಟುಂಬದ ಜತೆ ಕಾಲ ಕಳೆಯುವುದು, ಹೆಂಡತಿ, ಇಬ್ಬರು ಮಕ್ಕಳೊಂದಿಗೆ ಬೆರೆಯುವುದು ಸದಾ ರೂಢಿಸಿಕೊಂಡಿದ್ದರು. ಸಮಯ ಪಾಲನೆ ಮಾಡುವುದರಲ್ಲಿ ಇತರೆ ರಾಜಕಾರಣಿಗಳಿಗೆ ಕೃಷ್ಣ ಮಾದರಿ. “ಕೈ’ ಕೆಸರು ಮಾಡಿಕೊಳ್ಳದೆ “ಸ್ವತ್ಛ’ ರಾಜಕಾರಣ ಮಾಡುತ್ತ ಹಂತ ಹಂತವಾಗಿ ಮೇಲೆ ಬಂದವರು. ಅವರ ಶ್ರಮ ಹಾಗೂ ಪಕ್ಷ ನಿಷ್ಠೆಗೆ ತಕ್ಕಂತೆ ಉನ್ನತ ಹು¨ªೆಗಳೂ ಅವರನ್ನು ಹುಡುಕಿಕೊಂಡು ಬಂದಿವೆ. ಅದಕ್ಕೆ ತಕ್ಕ ಜೀವ ತುಂಬುವಲ್ಲಿ ಕೃಷ್ಣ ಯಾವತ್ತೂ ಎಡವಿಲ್ಲ.

ಚಿಕ್ಕ ವಯಸ್ಸಿಗೆ ಹೆಸರು ಮಾಡಿದ ನಾಯಕ
ಎಸ್‌.ಎಂ.ಕೃಷ್ಣ ಅವರು ಅತ್ಯಂತ ಚಿಕ್ಕ ವಯಸ್ಸಿಗೆ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ಪ್ರಸಿದ್ಧ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು. ಇದರಿಂದ ಮಂಡ್ಯ ಜಿಲ್ಲೆಯಲ್ಲಿ ಎಸ್‌.ಎಂ.ಕೃಷ್ಣ ಅವರದ್ದು ಬಲಿಷ್ಠ ನಾಯಕರಾಗಿ ಬೆಳೆದರು. ಕಾಂಗ್ರೆಸ್‌ ಪಕ್ಷದಲ್ಲಿ ತಮ್ಮ ಪ್ರಾಬಲ್ಯ ಉಳಿಸಿಕೊಂಡು ಚಾಣಾಕ್ಷ ನಾಯಕನಾಗಿ ಬೆಳೆದರು. ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲೂ ಬೆಳೆಯುವ ಮೂಲಕ ಮಂಡ್ಯ ಜಿಲ್ಲೆಯ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ.

ನಾಟಿ ಶೈಲಿ ಮಾಂಸಾಹಾರ ಇಷ್ಟ
ಎಸ್‌.ಎಂ.ಕೃಷ್ಣ ಅವರು ಊಟದಲ್ಲಿ ಸಿಹಿ ಪದಾರ್ಥ ಹೆಚ್ಚು ಇಷ್ಟಪಡುತ್ತಿದ್ದರು. ಅಲ್ಲದೇ ಮಾಂಸಹಾರದಲ್ಲಿ ನಾಟಿ ಶೈಲಿಯನ್ನು ಇಷ್ಟಪಟ್ಟು ತಿನ್ನುತ್ತಿದ್ದರು.ವಿದೇಶದಲ್ಲಿ ಕೃಷ್ಣ ಅವರು ವ್ಯಾಸಂಗ ಮಾಡಿದ ಕಾರಣ ವಿದೇಶಿ ತಿನಿಸುಗಳನ್ನು ಸಹ ತಿನ್ನುತ್ತಿದ್ದರು.

ಸಿದ್ದಾರ್ಥ ಆತ್ಮಹತ್ಯೆ ಬಳಿಕ ಜರ್ಝರಿತ
ಕಾಫಿ ದೈತ್ಯ ಉದ್ಯಮಿ ಹಾಗೂ ಎಸ್‌ಎಂಕೆ ಅವರ ಅಳಿಯ ಸಿದ್ದಾರ್ಥ ದಾರುಣ ಅಂತ್ಯ ಎಸ್‌ಎಂಕೆ ಅವರನ್ನು ಮಾನಸಿಕವಾಗಿ ಜರ್ಝರಿತಗೊಳಿಸಿತು. ಎಸ್‌ಎಂಕೆ ಪುತ್ರಿ ಹಾಗೂ ಸಿದ್ದಾರ್ಥ ಪತ್ನಿ ಮಾಳವಿಕಾ ಹೆಗ್ಡೆ ಮೊದಲಿಂದಲೂ ರಾಜಕೀಯದಿಂದ ದೂರ. ಏನಿದ್ದರೂ ಅವರದ್ದು ಕುಟುಂಬ, ವ್ಯವಹಾರದತ್ತ ಗಮನ. ಪತಿಯ ಸಾವಿನ ಅನಂತರ ಮಾಳವಿಕ ವ್ಯವಹಾರವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next