ಮಹಾನಗರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ರೇಷನಿಂಗ್ ಕಾರ್ಯ ಆರಂಭವಾದ ಬೆನ್ನಲ್ಲೇ, ನಗರದ ವಿವಿಧ ವಸತಿ ಸಮು ಚ್ಚಯಗಳಲ್ಲಿ ನೀರಿನ ಮಿತ ಬಳಕೆ ಮಾಡು ವಂತೆ ಅಪಾರ್ಟ್‌ಮೆಂಟ್ ಮಾಲಕರು ಸ್ವಯಂ ಪ್ರೇರಣೆಯಿಂದ ಮನವಿ ಮಾಡುತ್ತಿದ್ದಾರೆ.
ವಸತಿ ಸಮುಚ್ಚಯಗಳ ಪ್ರತಿ ಮನೆಗಳಿಗೂ ಮಿತವಾಗಿ ನೀರಿನ ಬಳಕೆ ಮಾಡುವಂತೆ ಮನವಿ ಪತ್ರವನ್ನು ನೀಡಲಾಗುತ್ತಿದೆ. ಇದು ನಗರದಲ್ಲಿ ನೀರಿನ ಕೊರತೆಯ ಗಂಭೀರತೆಯನ್ನು ತಿಳಿಸುತ್ತಿದೆ.
ಬಿಸಿಲಿನ ಪ್ರಖರತೆಗೆ ನೀರು ಆವಿ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ದಿನೇ ದಿನೇ ಇಳಿಕೆಯಾಗುತ್ತಿದೆ. ಶುಕ್ರವಾರ 5.37 ಅಡಿ ಇದ್ದ ನೀರಿನ ಮಟ್ಟ ಶನಿವಾರ 5.34ರಷ್ಟು ಇಳಿದಿದೆ. ಹೆಚ್ಚುತ್ತಿರುವ ಬಿಸಿಲಿನ ಪ್ರಖರತೆಯಿಂದಾಗಿ ನೀರು ಆವಿ ಯಾಗುತ್ತಲೇ ಹೋಗುತ್ತಿದೆ. ಇರುವ ನೀರನ್ನು ಮುಂದಿನ ಒಂದೂವರೆ ತಿಂಗಳು ನಗರಾದ್ಯಂತ ಪೂರೈಸಬೇಕಾಗಿದೆ. ಆ ಬಳಿಕವೂ ಮಳೆ ಬಾರದಿದ್ದರೆ ನೀರಿನ ಕೊರತೆ ನಗರಕ್ಕೆ ತೀವ್ರವಾಗಿ ಕಾಡಲಿದೆ. ಈ ಎಲ್ಲ ಮುನ್ಸೂಚನೆಗಳನ್ನು ಮನಗಂಡು ಪಾಲಿಕೆ ಜತೆಗೆ ಕೈ ಜೋಡಿಸಿರುವ ವಿವಿಧ ವಸತಿ ಸಮುಚ್ಚಯಗಳ ಮಾಲಕರು, ವಾಸವಾ ಗಿರುವ ನಿವಾಸಿಗಳಿಗೆ ನೀರನ್ನು ಮಿತವಾಗಿ ಬಳಸುವಂತೆ ಮನವಿ ಮಾಡುತ್ತಿದ್ದಾರೆ.
ನೀರು ಪೋಲು;ಎಚ್ಚರ ವಹಿಸಿ
ದೈನಂದಿನ ಮನೆ ಬಳಕೆಗೆ ಮಿತವಾಗಿ ನೀರನ್ನು ಬಳಸಿ. ಹೆಚ್ಚು ನೀರು ಪೋಲಾಗದಂತೆ ಜಾಗೃತೆ ವಹಿಸಿ.ನೀರಿನ ಸಮಸ್ಯೆ ನಿವಾರಣೆಯಾಗುವವರೆಗೂ ವಾಹನ ತೊಳೆಯಲು ನೀರು ಬಳಸಬೇಡಿ. ನೀರು ಸೋರಿಕೆಯಾಗದಂತೆ ನೋಡಿಕೊಳ್ಳಿ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ನೀರಿನ ರೇಷನಿಂಗ್ ಆರಂಭವಾಗಿ ರುವುದರಿಂದ ವಾರದಲ್ಲಿ ನಾಲ್ಕು ದಿನ ನೀರು ಪೂರೈಕೆಯಾದರೆ, ಎರಡು ದಿನ ಸ್ಥಗಿತಗೊಳ್ಳಲಿದೆ. ಹೀಗಾಗಿ ಇಡೀ ವಸತಿ ಸಮುಚ್ಚಯದ ನಿವಾಸಿಗಳಿಗೆ ಸಾಕಾಗುವಷ್ಟು ನೀರನ್ನು ಸಂಗ್ರಹಿಸಿಡಲು, ನೀರು ಪೂರೈಕೆಗೆ ವೇಳಾಪಟ್ಟಿಯನ್ನೂ ಹಾಕಿಕೊಳ್ಳಲಾಗಿದೆ. ನಿಗದಿತ ಸಮಯದೊಳಗೆ ಬೇಕಾದಷ್ಟು ನೀರನ್ನು ತುಂಬಿಸಿಟ್ಟುಕೊಳ್ಳಬೇಕು. ನೀರನ್ನು ವ್ಯರ್ಥ ಮಾಡದಂತೆ ತಿಳಿಸಲಾಗಿದೆ.
ನೀರು ವಿತರಣೆ ವೇಳಾಪಟ್ಟಿ
ಬೆಳಗ್ಗೆ 6ರಿಂದ 10.30,ಮಧ್ಯಾಹ್ನ 3.30ರಿಂದ 5.30 ಮತ್ತು ರಾತ್ರಿ 8.30ರಿಂದ 10.30ರ ವರೆಗೆ ಮಾತ್ರ ಪೂರೈಕೆ ಮಾಡಲಾಗುತಿದೆ. ಕೆಲವು ವಸತಿ ಸಮುಚ್ಚಯಗಳು ವೇಳಾಪಟ್ಟಿ ನಿಗದಿಪಡಿಸಿ ಅಲ್ಲಿನ ನಿವಾಸಿಗಳಿಗೆ ವೇಳಾಪಟ್ಟಿ ನೀಡಿವೆ.