ಪಳ್ಳಿ : ಪಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಚೆನ್ನಾಗಿದ್ದರೂ ಸಿಬಂದಿ ಕೊರತೆಯಿಂದ ಬಳಲುತ್ತಿದೆ. ಹೀಗಾಗಿ ಆಸ್ಪತ್ರೆಯ ವೈದ್ಯಾಧಿಕಾರಿಯವರೇ ಇತರ ಸಹಾಯಕ ಸಿಬಂದಿಯ ಕಾರ್ಯಗಳನ್ನೂ ಮಾಡ ಬೇಕಾಗಿದೆ. ಪಳ್ಳಿ, ನಿಂಜೂರು, ಕುಂಟಾಡಿ, ಕಣಜಾರು ಆಸುಪಾಸಿನ ಗ್ರಾಮಸ್ಥರು ಬಹುತೇಕವಾಗಿ ಈ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ
20 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಇಲ್ಲಿನ ಪ್ರಾಥಮಿಕ ಕೇಂದ್ರದಲ್ಲಿ ನಿಯಮದಂತೆ ವೈದ್ಯಾಧಿಕಾರಿ ಹೊರತುಪಡಿಸಿ ಒಟ್ಟು 9 ಸಿಬಂದಿ ಇರಬೇಕಿತ್ತು. ತಲಾ ಓರ್ವರಂತೆ ಫಾರ್ಮಾಸಿಸ್ಟ್, ಕಿರಿಯ ಪ್ರಯೋಗ ಶಾಲಾ ತಂತ್ರಜ್ಞ, ಪ್ರಥಮ ದರ್ಜೆ ಲಿಪಿಕಾ ಸಹಾಯಕ, ಗ್ರೂಪ್ ಡಿ ನೌಕರ ಹಾಗೂ ಇಬ್ಬರು ಆರೋಗ್ಯ ಸಹಾಯಕರು ಹಾಗೂ ಮೂವರು ಆರೋಗ್ಯ ಸಹಾಯಕಿಯರನ್ನು ಹೊಂದಿರಬೇಕಿತ್ತು. ಆದರೆ ಪ್ರಸ್ತುತ ಇಲ್ಲಿರುವುದು 3 ಮಂದಿ.
ವೈದ್ಯಾಧಿಕಾರಿಯಿಂದಲೇ ಕೆಲಸ
ಫಾರ್ಮಾಸಿಸ್ಟ್ ಹಾಗೂ ಪ್ರಥಮ ದರ್ಜೆ ಲಿಪಿಕಾರ ಸಹಾಯಕ ಹುದ್ದೆಗಳು ಖಾಲಿಯಿರುವುದರಿಂದ ವೈದ್ಯಾಧಿಕಾರಿಯವರೇ ಈ ಎರಡು ಹುದ್ದೆ ನಿಭಾಯಿಸುತ್ತಿದ್ದಾರೆ. ಆನ್ ಲೈನ್ ಅಪ್‌ಡೇಟ್ ಸೇರಿದಂತೆ ಇನ್ನಿತರ ಕಾರ್ಯಗಳನ್ನು ವೈದ್ಯರೇ ನಿರ್ವಹಿಸಬೇಕಿದೆ.
Advertisement
ದಶಕದಿಂದ ಹುದ್ದೆ ಖಾಲಿ
Related Articles
Advertisement
ಇಬ್ಬರು ಕಿರಿಯ ಪ್ರಯೋಗ ಶಾಲಾ ತಂತ್ರಜ್ಞರು ಇರಬೇಕಾದಲ್ಲಿ ಓರ್ವರೇ ಇದ್ದು, ಅವರು ಕುಕ್ಕುಂದೂರು ಆರೋಗ್ಯ ಕೇಂದ್ರದಲ್ಲೂ ಕಾರ್ಯನಿರ್ವಹಿಸಬೇಕಿದೆ. ಗ್ರೂಪ್ ಡಿ ಹುದ್ದೆಯನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲಾಗಿದೆ.
ಉಪಕೇಂದ್ರ
ಪಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವು ಪಳ್ಳಿ ಹಾಗೂ ಹಾಳೆಕಟ್ಟೆ ಕಲ್ಯಾದಲ್ಲಿ ಉಪಕೇಂದ್ರವನ್ನು ಹೊಂದಿದೆ. ಪಳ್ಳಿ ಉಪಕೇಂದ್ರ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಶೋಚನೀಯವಾಗಿದೆ. ಅಲ್ಲದೆ ಮೂಲಭೂತ ಸೌಕರ್ಯದಿಂದಲೂ ವಂಚಿತವಾಗಿದೆ. ಪಳ್ಳಿ ಉಪಕೇಂದ್ರಕ್ಕೆ ಹೋಲಿಸಿದಲ್ಲಿ ಹಾಳೆಕಟ್ಟೆ ಉಪಕೇಂದ್ರ ಪರವಾಗಿಲ್ಲ ಎಂಬಂತಿದೆ.
ಸಿಬಂದಿಯನ್ನೇ ಬಳಸಿಕೊಂಡು ಚಿಕಿತ್ಸೆ
ಆರೋಗ್ಯ ಕೇಂದ್ರದಲ್ಲಿ ಇರುವ ಸಿಬಂದಿಯನ್ನೇ ಬಳಸಿಕೊಂಡು ರೋಗಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಚಿಕಿತ್ಸೆ ನೀಡಲಾಗುತ್ತಿದೆ. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆಯೂ ಸಾಕಷ್ಟು ಮನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
– ಡಾ| ಅರುಣಾ, ವೈದ್ಯಾಧಿಕಾರಿ, ಪಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ