Advertisement

ಮಹಾ ಪ್ರಯಾಣಿಕರಿಗೆ ಸ್ಕ್ಯಾನಿಂಗ್ ಕಡ್ಡಾಯ

07:21 PM Mar 22, 2021 | Team Udayavani |

ಬೀದರ: ಮಹಾರಾಷ್ಟ್ರದಿಂದ ಓಡಾಡುವ ಬಸ್‌ಗಳ ನಿರ್ವಾಹಕರಿಗೆ ಕಡ್ಡಾಯ ಥರ್ಮಲ್‌ ಸ್ಕ್ಯಾನರ್‌ ನೀಡಿ, ಪ್ರಯಾಣಿಕರ ಆರೋಗ್ಯ ಪರೀಕ್ಷೆ ನಡೆಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಅವರು ಎನ್‌ ಈ ಕೆ ಆರ್‌ ಟಿ ಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಿಂದ ಬರುವವರಲ್ಲಿ ಆರ್‌ಟಿಪಿಸಿಆರ್‌ ನೆಗೆಟಿವ್‌ ರಿಪೋರ್ಟ್‌ ನೋಡುವುದರ ಜೊತೆಗೆ ಥರ್ಮಲ್‌ ಸ್ಕ್ಯಾನರ್‌ ಮೂಲಕ ಆ ಪ್ರಯಾಣಿಕರ ದೇಹದ ಉಷ್ಣತೆ ಪರೀಕ್ಷಿಸಿ ಕೋವಿಡ್‌-19 ಹರಡದಂತೆ ಸಾಕಷ್ಟು ಮುಂಜಾಗ್ರತೆ ವಹಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು. ಕೋವಿಡ್‌-19 ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಮಂಚೂಣಿ ಇಲಾಖೆಗಳ ಪೈಕಿ ಇದೀಗ ರಾಜ್ಯ ಸರ್ಕಾರವು ರಸ್ತೆ ಸಾರಿಗೆ ಸಂಸ್ಥೆಯನ್ನೂ ಗುರುತಿಸಿದೆ. ಹೀಗಾಗಿ ಎನ್‌ ಈಕೆಆರ್‌ಟಿಸಿಯಲ್ಲಿ ಕೆಲಸ ಮಾಡುವ ಎಲ್ಲರಿಗೂ ಹಂತಹಂತವಾಗಿ ಕೋವಿಶಿಲ್ಡ್‌ ಅಥವಾ ಕೋವ್ಯಾಕ್ಸಿನ್‌ ಲಸಿಕೆ ನೀಡಲು ಕ್ರಮ ವಹಿಸಬೇಕು ಎಂದು ತಿಳಿಸಿದರು.

ಪಿಎಚ್‌ಸಿವಾರು ಪರಿಶೀಲನೆ: ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಯಾ ದಿನದಂದು ಕೋವಿಶಿಲ್ಡ್‌ ಲಸಿಕೆ ನೀಡುವಲ್ಲಿ ನಿಗದಿಪಡಿಸಿರುವ ಗುರಿಯ ಸಾಧನೆಯ ಪ್ರಗತಿಯನ್ನು ಜಿಲ್ಲಾಧಿಕಾರಿಗಳು ಪ್ರತಿ ತಾಲೂಕುವಾರು ಪರಿಶೀಲನೆ ನಡೆಸಿದರು. ಸಾಧನೆ ಕಡಿಮೆ ತೋರಿದ್ದಕ್ಕೆ ವಿವರಣೆ ಕೇಳಿ ಪೂರ್ಣ ಗುರಿಸಾಧನೆಗೆ ಮುಂದಾಗಲು ಮತ್ತೆರಡು ದಿನಗಳ ಗಡುವು ವಿದಿಸಿದರು. ಜಿಲ್ಲೆಯಲ್ಲಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕೋವಿಡ್‌-19 ಲಸಿಕೆ ಹಾಕುವಲ್ಲಿ ಪ್ರತಿ ದಿನ ಶೇ. 100ರಷ್ಟು ಸಾಧನೆ ಮಾಡಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗುರುತಿಸಿದ ಫಲಾನುಭವಿಗಳಿಗೆ 1ನೇ ಮತ್ತು 2ನೇ ಡೋಸ್‌ ನೀಡಿದ ಬಗೆಗಿನ ಮಾಹಿತಿಯು ಸಂಬಂಧಿಸಿದ ವೆಬ್‌ಸೈಟ್‌ನಲ್ಲಿ ಪ್ರತಿ ದಿನ ಅಪ್‌ ಲೋಡ್‌ ಆಗಬೇಕು. ತಮ್ಮ ಹಂತದಲ್ಲಿ ಆಗಾಗ ಸಭೆ ನಡೆಸಿ ಎಲ್ಲ ಪ್ರಾಥಮಿಕ, ಸಮುದಾಯ ಮತ್ತು ಇನ್ನಿತರ ಆರೋಗ್ಯ ಕೇಂದ್ರಗಳು ಕ್ರಿಯಾಶೀಲತೆಯಿಂದ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು ಎಂದು ಇದೇ ವೇಳೆ ಜಿಲ್ಲಾಧಿಕಾರಿಗಳು ಡಿಎಚ್‌ಒ ಡಾ| ವಿ.ಜಿ. ರೆಡ್ಡಿ ಅವರಿಗೆ ಸೂಚಿಸಿದರು.

ವಿಡಿಯೋ ಸಂವಾದದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್‌., ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಹಾಯಕ ಆಯುಕ್ತೆ ಗರೀಮಾ ಪನ್ವಾರ, ಜಿ.ಪಂ ಉಪ ಕಾರ್ಯದರ್ಶಿ ಸೂರ್ಯಕಾಂತ ಎಸ್‌., ತಹಶೀಲ್ದಾರ್‌ ಗಂಗಾದೇವಿ ಸಿ.ಎಚ್‌. ಹಾಗೂ ಇನ್ನಿತರರು ಇದ್ದರು. ವಿವಿಧ ತಾಲೂಕುಗಳ ತಹಶೀಲ್ದಾರರು, ತಾ.ಪಂ ಇಒಗಳು, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಆಯಾ ತಾಲೂಕುಗಳಿಂದ ವಿಡಿಯೋ ಸಂವಾದದಲ್ಲಿ ಭಾಗಿಯಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next