ಬೆಂಗಳೂರು : ಕನ್ನಡದ ಚಿತ್ರರಂಗದಲ್ಲಿ ಹಲವು ಸಿನಿಮಾಗಳನ್ನು ನಿರ್ದೇಶಿಸಿ ಭರವಸೆ ಮೂಡಿಸಿದ್ದ ನಿರ್ದೇಶಕ ಪ್ರದೀಪ್ ರಾಜ್ ಅವರು ಗುರುವಾರ ನಿಧನ ಹೊಂದಿರುವುದಾಗಿ ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಪ್ರದೀಪ್ ರಾಜ್ ಅವರಿಗೆ 46 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಪ್ರದೀಪ್ ರಾಜ್ ಕೆಲ ದಿನಗಳ ಹಿಂದೆ ಕೋವಿಡ್ ಸೋಂಕಿಗೆ ಗುರಿಯಾಗಿದ್ದರು, ಎಂದು ಸಹೋದರ ಪ್ರಶಾಂತ್ ರಾಜ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಯಶ್ ಅಭಿನಯದ ‘ಕಿರಾತಕ’ ಚಿತ್ರವನ್ನು ಪ್ರದೀಪ್ ರಾಜ್ ನಿರ್ದೇಶನ ಮಾಡಿ ಖ್ಯಾತಿ ಗಳಿಸಿದ್ದರು. ಕನ್ನಡದ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದರು. ಸತೀಶ್ ನೀನಾಸಂ ನಟನೆಯ ‘ಅಂಜದ ಗಂಡು’, ಕಾರ್ತಿಕ್ ಜಯರಾಮ್, ಚಿಕ್ಕಣ್ಣ ಅಭಿನಯಿಸಿದ್ದ ‘ಬೆಂಗಳೂರು 560023’, ದುನಿಯಾ ವಿಜಿ ನಟನೆಯ ‘ರಜನಿ ಕಾಂತ’ ಚಿತ್ರಗಳನ್ನು ನಿರ್ದೇಶಿಸಿ ಗಮನ ಸೆಳೆದಿದ್ದರು.
ಪಾಂಡಿಚೇರಿ ಮೂಲದವರಾದ ಪ್ರದೀಪ್ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಜ.20 ರಂದು ಮಧ್ಯಾಹ್ನ 3 ಗಂಟೆ ವೇಳೆಗೆ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ನಿಧನದ ಸುದ್ದಿ ತಿಳಿದು ಚಿತ್ರರಂಗದ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.