Advertisement

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

02:36 PM Apr 13, 2024 | Team Udayavani |

ಕನ್ನಡದಲ್ಲಿ ಈಗ ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾಗಳ ಜೊತೆಗೆ ಒಂದು ವಿಷಯನ್ನು ಆಧರಿಸಿ, ಆ ಮೂಲಕ ಥ್ರಿಲ್ಲರ್‌ ಅನುಭವ ನೀಡುವ ಚಿತ್ರಗಳು ಬರುತ್ತಿವೆ. ಇದೇ ಕಾರಣದಿಂದ ಕನ್ನಡ ಚಿತ್ರರಂಗ ಹೊಸಬರ ಮೇಲೆ ಒಂದಷ್ಟು ಭರವಸೆ ಇಟ್ಟಿದೆ. ಈ ವಾರ ತೆರೆಕಂಡಿರುವ “ಸ್ಕ್ಯಾಮ್‌’ ಸಿನಿಮಾ ಕೂಡಾ ಗಟ್ಟಿ ಕಥಾಹಂದರದೊಂದಿಗೆ ಮೂಡಿಬಂದಿದೆ.

Advertisement

ಮೆಡಿಕಲ್‌ ಸೀಟಿನ ಹಿಂದಿನ ಹಗರಣವನ್ನು ಮುಖ್ಯವಾಗಿಟ್ಟುಕೊಂಡು ನಡೆಯುವ ಕಥೆಯಲ್ಲಿ ಹಲವು ತಿರುವುಗಳು, ಹೊಸ ಹೊಸ ಆಯಾಮಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ಹುಡುಗಿಯೊಬ್ಬಳು ತನಗೆ ಸಿಕ್ಕ ಮೆಡಿಕಲ್‌ ಸೀಟನ್ನು ಬಿಟ್ಟುಕೊಟ್ಟು, ಸಾವಿಗೆ ಶರಣಾಗುವ ಮೂಲಕ ಆರಂಭವಾಗುವ ಕಥೆ ಮುಂದೆ ಹಲವು ಮಗ್ಗುಲುಗಳಾಗಿ ಬದಲಾಗುತ್ತಾ ಹೋಗುತ್ತದೆ. ಮೆಡಿಕಲ್‌ ಸೀಟಿನ ಹಿಂದಿನ ಹಗರಣ, ಕಾಣದ ಕೈಗಳ ಪ್ರಭಾವ, ಈ ಸ್ಕ್ಯಾಮ್‌ ನ ಬಯಲಿಗೆಳೆಯಲು ಹೊರಡುವ ವ್ಯಕ್ತಿ… ಹೀಗೆ ಸಾಗುವ ಸಿನಿಮಾ ಅಲ್ಲಲ್ಲಿ ಒಂದಷ್ಟು ಪ್ರಶ್ನೆಗಳನ್ನು, ಕುತೂಹಲಗಳನ್ನು ಪ್ರೇಕ್ಷಕರಿಗೆ ಬಿಟ್ಟು ಮುಂದೆ ಸಾಗುತ್ತದೆ. ಅವೆಲ್ಲದಕ್ಕೂ ಉತ್ತರ ಸಿಗಬೇಕಾದರೆ ಕೊನೆಯವರೆಗೆ ಕಾಯಲೇಬೇಕು. ಒಂದು ಸಸ್ಪೆನ್ಸ್‌-ಥ್ರಿಲ್ಲರ್‌ ಸಿನಿಮಾವಾಗಿ “ಸ್ಕ್ಯಾಮ್‌’ ಒಂದೊಳ್ಳೆಯ ಪ್ರಯತ್ನ.

ಚಿತ್ರದಲ್ಲಿ ಮೆಡಿಕಲ್‌ ಮಾಫಿಯಾ ಜೊತೆಗೆ ಮೆಡಿಕಲ್‌ ಸೀಟ್‌ ಬಯಸುವ ಮಧ್ಯಮ ಕುಟುಂಬದ ವಿದ್ಯಾರ್ಥಿಗಳ ನೋವಿನ ಕಥೆಯೂ ತೆರೆದುಕೊಳ್ಳುತ್ತಾ ಹೋಗುತ್ತದೆ. ಇಲ್ಲಿ ವ್ಯವಸ್ಥೆ, ಅದರ ಹಿಂದಿನ ಕಾಣದ ಕೈಗಳು, ಇದರಿಂದ ತೊಂದರೆ ಅನುಭವಿಸುವ ವರ್ಗ ಎಲ್ಲವೂ ಬಂದು ಹೋಗುತ್ತದೆ. ಚಿತ್ರದ ನಿರೂಪಣೆ ಕಥೆಗೆ ಪೂರಕವಾಗಿದೆ. ಆದರೆ,ಚಿತ್ರಕಥೆಯಲ್ಲಿ ಇನ್ನೊಂದಿಷ್ಟು ಗಟ್ಟಿತನ ಬೇಕಿತ್ತು. ಅದರ ಹೊರತಾಗಿ “ಸ್ಕ್ಯಾಮ್‌’ ಒಂದು ನೀಟಾದ ಪ್ರಯತ್ನ.

ರಂಜನ್‌ ಪೂರ್ಣ ಪ್ರಮಾಣದ ನಾಯಕರಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಹಗರಣ ಗಳನ್ನು ಬಯಲಿಗೆಳೆಯಲು ಓಡಾಡುವ, ಈ ಹಾದಿಯಲ್ಲಿ ಸಮಸ್ಯೆ ಎದುರಿಸುವ ಪಾತ್ರ ಅವರದು. ಉಳಿದಂತೆ ಚಿತ್ರದಲ್ಲಿ ಬಿ.ಸುರೇಶ್‌, ರಾಘು ಶಿವಮೊಗ್ಗ ಸೇರಿದಂತೆ ಇತರರು ನಟಿಸಿದ್ದಾರೆ.

 ಆರ್‌.ಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next