Advertisement

ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಟೂಲ್‌ಕಿಟ್‌ ಸಿಕ್ಕಿಲ್ಲ

06:00 AM Dec 16, 2018 | |

ಬೆಂಗಳೂರು: ಸರ್ಕಾರಿ ಎಂಜಿನಿಯರಿಂಗ್‌ ಹಾಗೂ ಡಿಪ್ಲೊಮಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಾವಿರಾರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸಮ್ಮಿಶ್ರ ಸರ್ಕಾರದಿಂದ ಈ ಬಾರಿ ಉಚಿತ ಲ್ಯಾಬೊರೇಟರಿ ಟೂಲ್‌ಕಿಟ್‌ ಸಿಗುವುದು ಅನುಮಾನ…

Advertisement

ಹಿಂದಿನ ಸಿದ್ದರಾಮಯ್ಯ ಸರ್ಕಾರದ ಮಹತ್ವದ ಯೋಜನೆ ಇದು. ಸದ್ಯ 2018-19ನೇ ಸಾಲಿನ ತರಗತಿಗಳು ಆರಂಭವಾಗಿ ಸೆಮಿಸ್ಟರ್‌ ಪರೀಕ್ಷೆ ನಡೆಯುತ್ತಿದೆ. ಆದರೂ, ಲ್ಯಾಬೋರೇಟರಿ ಟೂಲ್‌ಕಿಟ್‌ ಖರೀದಿಗೆ ಸರ್ಕಾರದಿಂದ ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಮುಗಿಯುವುದರೊಳಗೆ ಲ್ಯಾಬೋರೇಟರಿ ಟೂಲ್‌ಕಿಟ್‌ ವಿದ್ಯಾರ್ಥಿಗಳ ಕೈ ಸೇರುವುದು ಬಹುತೇಕ ಅನುಮಾನವಾಗಿದೆ. ಎಸ್ಸಿ, ಎಸ್ಟಿ  ವಿದ್ಯಾರ್ಥಿಗಳಿಗೆ ಸೌಲಭ್ಯ ನೀಡಲು ಸರ್ಕಾರದ ಬಳಿ ಕೋಟ್ಯಂತರ ರೂ. ಇದ್ದರೂ, ಸೌಲಭ್ಯ ಮಾತ್ರ ಸಿಗುತ್ತಿಲ್ಲ.

ಯೋಜನೆ ಏನು?
ಕುಟುಂಬದ ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಕಡಿಮೆ ಇರುವ ಎಸ್ಸಿ, ಎಸ್ಟಿ  ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಜತೆಗೆ ಲ್ಯಾಬೋರೇಟರಿ ಟೂಲ್‌ಕಿಟ್‌ ನೀಡುವ ವ್ಯವಸ್ಥೆಯನ್ನು  ಕಳೆದ ವರ್ಷ ಜಾರಿಗೆ ತರಲಾಗಿತ್ತು. ಪ್ರತಿ ವಿದ್ಯಾರ್ಥಿಗೆ 6000ರಿಂದ 6500 ರೂ. ಮೌಲ್ಯದ ಶೈಕ್ಷಣಿಕ  ಕಲಿಕೆಗೆ ಅನುಕೂಲವಾಗುವ ಟೂಲ್‌ಕಿಟ್‌ ನೀಡಲಾಗಿತ್ತು. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದಿನ ಯೋಜನೆಗಳನ್ನು ಮುಂದುವರಿಸುವುದಾಗಿ ಹೇಳಿತ್ತು. ಆದರೆ, ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಈವರೆಗೂ ಲ್ಯಾಪ್‌ಟಾಪ್‌ ಇಲ್ಲ, ಟೂಲ್‌ಕಿಟ್‌ ಬಿಡುಗಡೆ ಮಾಡಲಾಗಿಲ್ಲ ಎಂದು ಇಲಾಖೆ ಮೂಲಗಳು ತಿಳಿಸಿವೆ. 

2017-18ನೇ ಸಾಲಿನಲ್ಲಿ ಸರ್ಕಾರಿ ಎಂಜಿನಿಯರಿಂಗ್‌ ಹಾಗೂ ಡಿಪ್ಲೊಮಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಬೋರೇಟರಿ ಟೂಲ್‌ಕಿಟ್‌ ನೀಡುವುದಕ್ಕಾಗಿ ವಿಷಯ ತಜ್ಞರ ಸಮಿತಿಯೊಂದನ್ನು ರಚನೆ ಮಾಡಲಾಗಿತ್ತು. ಈ ಸಮಿತಿಯು ಎಲೆಕ್ಟ್ರಾನಿಕ್ಸ್‌, ಸಿವಿಲ್‌, ಮೆಕ್ಯಾನಿಕಲ್‌, ಕಂಪ್ಯೂಟರ್‌ ಸೈನ್ಸ್‌  ಹಾಗೂ ಟೆಕ್ಸ್‌ಟೈಲ್‌ ತಂತ್ರಜ್ಞಾನದ ಕೋರ್ಸ್‌ನ ವಿದ್ಯಾರ್ಥಿಗಳಿಗೆ ಕಿಂಡ್ಲೆ ಇ-ರೀಡರ್‌, 32 ಜಿಬಿ ಪೆನ್‌ಡ್ರೈವ್‌, ವೈ-ಫೈ ಡಾಂಗಲ್‌ ಹಾಗೂ ಸೈಂಟಿಫಿಕ್‌ ಕ್ಯಾಲ್ಯುಕೇಲೇಟರ್‌ ನೀಡಲು ಶಿಫಾರಸು ಮಾಡಿತ್ತು. ಹಾಗೆಯೇ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಡಿಪ್ಲೊಮಾ ಓದುತ್ತಿರುವ ವಿದ್ಯಾರ್ಥಿಗಳಿಗೆ ಡ್ರಾಯಿಂಗ್‌ ಬೋರ್ಡ್‌, ಮಿನಿ ಡ್ರಾಫ್ಟರ್‌, ಎಂಜಿನಿಯರಿಂಗ್‌ ಡ್ರಾಯಿಂಗ್‌ ಪರಿಕರ, ಸೋಲ್ಡರಿಂಗ್‌ ಕಿಟ್‌, ಡಿಜಿಟಲ್‌ ಎಲ್‌ಸಿಆರ್‌ ಮಿಟರ್‌, ಅಲ್ಲೇನ್‌ ಕೀ ಸೆಟ್‌, ಡಿಜಿಟಲ್‌ ಅಲ್ಟ್ರಾಸೋನಿಕ್‌ ಟೇಪ್‌ ಹಾಗೂ ಅಳೆಯಲು ಬಳಸುವ ಅಗತ್ಯ ಪರಿಕರ ನೀಡುವಂತೆ ಶಿಫಾರಸು ಮಾಡಿತ್ತು. 

ಪರಿಶಿಷ್ಟ ಜಾತಿ ಉಪ ಯೋಜನೆ  ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ ಅಡಿಯಲ್ಲಿ ಹಿಂದಿನ ಕಾಂಗ್ರೆಸ್‌ ಸರ್ಕಾರ ನೀಡಿದ್ದ ಅನುದಾನದಂತೆ ಸರ್ಕಾರಿ ಎಂಜಿನಿಯರಿಂಗ್‌ ಹಾಗೂ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ 2017-18ನೇ ಸಾಲಿನಲ್ಲಿ ಪ್ರಥಮ ವರ್ಷದ ಕೋರ್ಸ್‌ಗೆ ಸೇರಿರುವ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಟೂಲ್‌ಕಿಟ್‌ ವಿತರಣೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಸರ್ಕಾರದಿಂದ ಯಾವುದೇ ಸೂಚನೆ ಬಾರದೇ ಇರುವುದರಿಂದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಮಾಹಿತಿಯನ್ನೂ ಇನ್ನೂ ಸಂಗ್ರಹಿಸಿಲ್ಲ ಎಂದು ತಾಂತ್ರಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

Advertisement

10 ಸಾವಿರ ವಿದ್ಯಾರ್ಥಿಗಳು
ರಾಜ್ಯದ 11 ಸರ್ಕಾರಿ  ಎಂಜಿನಿಯರಿಂಗ್‌ ಹಾಗೂ 82 ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಹತ್ತು ಸಾವಿರಕ್ಕೂ ಅಧಿಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ ಬಹುತೇಕ ವಿದ್ಯಾರ್ಥಿಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ. ಸರ್ಕಾರದಿಂದ ಲ್ಯಾಬೋರೇಟರಿ ಟೂಲ್‌ಕಿಟ್‌ ಯಾವಾಗ ಬರುತ್ತದೋ ಎಂದು ಕಾದು ಕುಳಿತಿದ್ದಾರೆ.  

ಗುಣಮಟ್ಟ ಚೆನ್ನಾಗಿಲ್ಲ 
2017-18ನೇ ಸಾಲಿನಲ್ಲಿ  ಸರ್ಕಾರಿ ಎಂಜಿನಿಯರಿಂಗ್‌ ಹಾಗೂ ಪಾಲಿಟೆಕ್ನಿಕ್‌ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರ ಮೂಲಕವೇ ಟೂಲ್‌ಕಿಟ್‌ ಖರೀದಿಸಿ ನೀಡಲಾಗಿತ್ತು. ಆದರೆ, ಕೆಲವು ಕಾಲೇಜುಗಳು ಇದರ ಮಾಹಿತಿಯನ್ನು ಕೇಂದ್ರ ಕಚೇರಿಗೆ ಕಳುಹಿಸಿಕೊಟ್ಟಿಲ್ಲ. ಪ್ರತಿ ವಿದ್ಯಾರ್ಥಿಗಳಿಗೆ 6000 ನಿಂದ 6500 ರೂ. ಮೌಲ್ಯದ ಟೂಲ್‌ಕಿಟ್‌ ಖರೀದಿಗೆ ಅನುಮತಿ ನೀಡಲಾಗಿತ್ತು. ಆದರೆ, ಕೆಲವೊಂದು ಕಡೆಗಳಲ್ಲಿ ಕಳಪೆ ಗುಣಮಟ್ಟದ ಟೂಲ್‌ಕಿಟ್‌ ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. 

– ರಾಜು ಖಾರ್ವಿ ಕೊಡೇರಿ 
 

Advertisement

Udayavani is now on Telegram. Click here to join our channel and stay updated with the latest news.

Next