ಹೊಸದಿಲ್ಲಿ: ನ್ಯಾಯಾಂಗ ಮತ್ತು ಕೊಲಿಜಿಯಂ ವ್ಯವಸ್ಥೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಈ ಬಗ್ಗೆ ದಾವೆ ಹೂಡಿರುವ ಬಾಂಬೆ ವಕೀಲರ ಒಕ್ಕೂಟದ ಪರ ವಾದಿಸಿದ ವಕೀಲರನ್ನು ಪ್ರಶ್ನಿಸಿದ ನ್ಯಾ| ಸಂಜಯ ಕಿಶನ್ ಕೌಲ್ ಮತ್ತು ನ್ಯಾ| ಎ.ಅಮಾನುಲ್ಲಾ ನೇತೃತ್ವದ ನ್ಯಾಯಪೀಠ “ಇದೇನಿದು? ಯಾವ ಕಾರಣಕ್ಕಾಗಿ ಅರ್ಜಿ ಸಲ್ಲಿಕೆ ಮಾಡಲಾಗಿದೆ’ ಎಂದು ಕೇಳಿತು.
ಇಬ್ಬರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಲ್ಲಿಕೆ ಮಾಡಿದ್ದ ವಕೀಲರ ಒಕ್ಕೂಟ ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿತ್ತು. ಅದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ. “ಹೈಕೋರ್ಟ್‌ನ ಅಭಿಪ್ರಾಯ ಸರಿಯಾಗಿದೆ. ಯಾವುದಾರೂ ಒಂದು ಪ್ರಾಧಿಕಾರ ಅನುಚಿತ ಹೇಳಿಕೆ ನೀಡಿದರೆ, ಸುಪ್ರೀಂಕೋರ್ಟ್ ಅದನ್ನು ವಿಶಾಲ ಅರ್ಥದಲ್ಲಿ ಪರಿಗಣಿಸುತ್ತದೆ’ ಎಂದು ಹೇಳಿತು.
ಕಾನೂನು ಸಚಿವರು, ಉಪರಾಷ್ಟ್ರಪತಿಗಳು ಸಂವಿಧಾನದಲ್ಲಿ ನಂಬಿಕೆಯನ್ನು ಹೊಂದಿಲ್ಲ ಎಂದು ವಕೀಲರ ಒಕ್ಕೂಟ ವಾದಿಸಿತ್ತು.