ನವದೆಹಲಿ: ಆಡಳಿತದ ನೇಮಕಾತಿಯಲ್ಲಿ ನ್ಯಾಯಮೂರ್ತಿಗಳು ಪಾಲ್ಗೊಳ್ಳಲು ಶುರು ಮಾಡಿದರೆ, ನ್ಯಾಯ ನೀಡುವ ಕೆಲಸ ಯಾರು ಮಾಡುತ್ತಾರೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಪ್ರಶ್ನಿಸಿದ್ದಾರೆ.
ಮುಖ್ಯ ಚುನಾವಣಾ ಅಧಿಕಾರಿ ಮತ್ತು ಚುನಾವಣಾ ಆಯುಕ್ತರ ನೇಮಕಕ್ಕೆ ಪ್ರಧಾನಿ, ಸರ್ವೋಚ್ಚ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿ ರಚಿಸುವಂತೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಪೀಠ, ಕೇಂದ್ರ ಸರ್ಕಾರಕ್ಕೆ ಸೂಚಿಸಿರುವ ಕುರಿತು ರಿಜಿಜು ಈ ರೀತಿ ಪ್ರತಿಕ್ರಿಯಿಸಿದ್ದಾರೆ. “ಮುಖ್ಯ ಚುನಾವಣಾ ಅಧಿಕಾರಿ ನೇಮಕದ ಕುರಿತು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಸಂಸತ್ತು ಕಾನೂನು ರೂಪಿಸಬೇಕು. ಅದರಂತೆ ನೇಮಕಾತಿ ನಡೆಯಬೇಕು. ನಾನು ಸರ್ವೋಚ್ಚ ನ್ಯಾಯಾಲಯವನ್ನು ಟೀಕಿಸುತ್ತಿಲ್ಲ. ಆದರೆ ಪ್ರತಿಯೊಂದು ಮುಖ್ಯ ಹುದ್ದೆಯ ನೇಮಕದಲ್ಲಿ ನ್ಯಾಯಮೂರ್ತಿಗಳು ಪಾಲ್ಗೊಂಡರೆ, ನ್ಯಾಯಾಂಗದ ಕೆಲಸ ಮಾಡುವವರು ಯಾರು?’ ಎಂದು ರಿಜಿಜು ಹೇಳಿದರು.