ಹೊಸದಿಲ್ಲಿ : ಪ್ರಾಣಿ ಹಿಂಸೆ ತಡೆ ಕಾಯಿದೆಯ ನಿಯಮಗಳ ಉಲ್ಲಂಘನೆ ಮಾಡುತ್ತಿರುವ ಕಾರಣಕ್ಕೆ ಮಾಂಸ ರಫ್ತು ಕಸಾಯಿಖಾನೆಗಳನ್ನು ನಿಷೇಧಿಸಬೇಕು ಎಂದು ಕೋರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ಸೋಮವಾರ ವಜಾ ಮಾಡಿದೆ.
ವರಿಷ್ಠ ನ್ಯಾಯಮೂರ್ತಿ ಜಸ್ಟಿಸ್ ರಂಜನ್ ಗೊಗೋಯ್ ಮತ್ತು ಜಸ್ಟಿಸ್ ಸಂಜೀವ್ ಖನ್ನಾ ಅವರನ್ನು ಒಳಗೊಂಡ ಪೀಠವು, “ಸಾರ್ವಜನಿಕ ಹಿತಾಸಕ್ತಿಯ ಈ ಅರ್ಜಿಯನ್ನು ಮಾನ್ಯ ಮಾಡಬೇಕೆಂದು ನಮಗೆ ತೋರುತ್ತಿಲ್ಲ” ಎಂದು ಹೇಳಿ ಅದನ್ನು ಸಾರಾಸಗಟು ವಜಾ ಮಾಡಿತು.
ಮಾಂಸ ಮತ್ತು ಮಾಂಸ ಉತ್ಪನ್ನಗಳ ರಫ್ತು ಈ ಕೂಡಲೇ ನಿಲ್ಲಿಸುವಂತೆ ಕೇಂದ್ರ, ರಾಜ್ಯ ಸರಕಾರಗಳು ಮತ್ತು ಖಾಸಗಿ ವಲಯಕ್ಕೆ ಸೂಕ್ತ ನಿರ್ದೇಶ ನೀಡುವಂತೆ ಕೋರಿ Healthy, Wealthy, Ethical, World- Guide India Trust ನವರು ಮತ್ತು ಇತರರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.