ನವದೆಹಲಿ: ಐಸಿಸ್ ಉಗ್ರಗಾಮಿ ಸಂಘಟನೆ ಜತೆ ಸಂಪರ್ಕ ಮತ್ತು ಉಗ್ರವಾದ ಸಿದ್ದಾಂತ ಪ್ರಚಾರದಲ್ಲಿ ತೊಡಗಿದ್ದ ಕೇರಳ ಮೂಲದ ಮಹಿಳೆಗೆ ಸುಪ್ರೀಂಕೋರ್ಟ್ ಏಳು ವರ್ಷಗಳ ಜೈಲುಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.
ಐಸಿಸ್ ಉಗ್ರಗಾಮಿ ಸಂಘಟನೆಯ ಐಡಿಯಾಲಜಿಯನ್ನು ಪ್ರಚಾರ ಮಾಡುತ್ತಿದ್ದ ಹಾಗೂ ಮುಸ್ಲಿಮೇತರರ ಮೇಲಿನ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಿರುವುದನ್ನು ಸಾಕ್ಷ್ಯ ಸಾಬೀತುಪಡಿಸಿದೆ ಎಂದು ಸುಪ್ರೀಂಕೋರ್ಟ್ ನ ನ್ಯಾ.ಯು.ಯು.ಲಲಿತ್ ಮತ್ತು ಇಂದು ಮಲೋತ್ರ ಅವರಿದ್ದ ಪೀಠ ತಿಳಿಸಿದೆ.
ಅಲ್ಲದೇ ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ಆಕೆ ದೋಷಿ ಎಂದು ನೀಡಿರುವ ತೀರ್ಪನ್ನು ಸುಪ್ರೀಂ ಪೀಠ ಎತ್ತಿಹಿಡಿದಿದೆ. ಆದರೆ ಆಕೆಗೆ ಮೂರು ವರ್ಷ ಜೈಲುಶಿಕ್ಷೆ ವಿಧಿಸಿರುವ ಹೈಕೋರ್ಟ್ ಆದೇಶವನ್ನು ವಜಾಗೊಳಿಸಿ, ವಿಚಾರಣಾ ನ್ಯಾಯಾಲಯ ನೀಡಿರುವ ಏಳು ವರ್ಷಗಳ ಜೈಲುಶಿಕ್ಷೆ ತೀರ್ಪನ್ನು ಸುಪ್ರೀಂ ಎತ್ತಿಹಿಡಿದಿದೆ.
ಭಾರತದಿಂದ(ಕೇರಳ) 14 ಮಂದಿ ವಿದೇಶಕ್ಕೆ ತೆರಳಿ ಐಸಿಸ್ ಗೆ ಸೇರ್ಪಡೆಗೊಂಡಿರುವುದಾಗಿ 2016ರಂದು ಪೊಲೀಸರಿಗೆ ದೂರು ಬಂದಿತ್ತು. ತನಿಖೆಯ ನಂತರ ತನ್ನ ಮಗುವಿನ ಜತೆ ಅಫ್ಘಾನಿಸ್ತಾನಕ್ಕೆ ತೆರಳಲು ಪ್ರಯತ್ನಿಸಿದ್ದ ಯಾಸ್ಮೀನ್ ಮೊಹಮ್ಮದ್ ಝಾಹಿದ್ ಳನ್ನು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದರು.
ಯಾಸ್ಮೀನ್ ಪತಿ ಹಾಗೂ ಇತರರು ಭಾರತದಿಂದ ಅಫ್ಘಾನಿಸ್ತಾನಕ್ಕೆ ತೆರಳಿ ಐಸಿಸ್ ಸೇರಿದ್ದರು ಎಂದು ವರದಿ ವಿವರಿಸಿದೆ. ಪ್ರಕರಣದ ವಿಚಾರಣೆ ನಡೆಸಿದ್ದ ಎರ್ನಾಕುಲಂ ಎನ್ ಐಎ ಕೋರ್ಟ್ ಆಕೆಗೆ ಕಠಿಣ ಸಜೆ ವಿಧಿಸಿತ್ತು.