Advertisement

ನೋಟು ಅಮಾನ್ಯ OT ಹಣ ವಾಪಸ್‌ ಮಾಡಿ: 70,000 ನೌಕರರಿಗೆ SBI ಆದೇಶ

04:05 PM Jul 17, 2018 | Team Udayavani |

ಹೊಸದಿಲ್ಲಿ  : ನೋಟು ಅಪನಗದೀಕರಣದ ಸಂದರ್ಭದಲ್ಲಿ ಓವರ್‌ಟೈಮ್‌ ಕೆಲಸ ಮಾಡಿದ್ದಕ್ಕೆ ನೀಡಲಾಗಿದ್ದ ಹಣವನ್ನು ವಾಪಾಸು ಮಾಡುವಂತೆ ಭಾರತೀಯ ಸ್ಟೇಟ್‌ ಬ್ಯಾಂಕ್‌ ತನ್ನ ಜತೆಗೆ ವಿಲಯನಗೊಂಡ ಐದು ಬ್ಯಾಂಕುಗಳ 70,000 ನೌಕರರನ್ನು ಕೇಳಿಕೊಂಡಿರುವುದಾಗಿ ಇಂಡಿಯಾ ಟುಡೇ ವರದಿ ತಿಳಿಸಿದೆ.

Advertisement

ಎಸ್‌ಬಿಐ ಜತೆಗೆ ವಿಲಯನಗೊಂಡ ಬ್ಯಾಂಕುಗಳೆಂದರೆ ಸ್ಟೇಟ್‌ ಬ್ಯಾಂಕ್‌ ಆಫ್ ಪಟಿಯಾಲಾ, ಸ್ಟೇಟ್‌ ಬ್ಯಾಂಕ್‌ ಆಫ್ ಹೈದರಾಬಾದ್‌, ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು, ಸ್ಟೇಟ್‌ ಬ್ಯಾಂಕ್‌ ಆಫ್ ಟ್ರ್ಯಾವಂಕೂರ್‌, ಸ್ಟೇಟ್‌ ಬ್ಯಾಂಕ್‌ ಆಫ್ ಬಿಕಾನೇರ್‌ ಮತ್ತು ಜೈಪುರ. ಈ ಬ್ಯಾಂಕುಗಳು 2017ರ ಎಪ್ರಿಲ್‌ 1ರಂದು ಎಸ್‌ಬಿಐ ಜತೆಗೆ ವಿಲೀನವಾಗಿದ್ದವು. 

ನೋಟು ಅಪನಗದೀಕರಣದ ಸಂದರ್ಭದಲ್ಲಿ ಗ್ರಾಹಕರ ಅತೀವ ಒತ್ತಡ ಇದ್ದುದರಿಂದ ಈ ಬ್ಯಾಂಕುಗಳ ನೌಕರರಿಗೆ ಓವರ್‌ಟೈಮ್‌ ಪರಿಹಾರದ ಭರವಸೆ ನೀಡಲಾಗಿತ್ತು. ಆದರೆ ಆಗಿನ್ನೂ ಮೇಲಿನ ಐದು ಬ್ಯಾಂಕುಗಳು ಎಸ್‌ಬಿಐ ಜತೆಗೆ ವಿಲೀನಗೊಂಡಿರಲಿಲ್ಲ. 

“ನಮ್ಮ ಸ್ವಂತ ನೌಕರರು ಮಾತ್ರವೇ ಓವರ್‌ ಟೈಮ್‌ ಪರಿಹಾರ ಪಡೆಯುವುದಕ್ಕೆ ಅರ್ಹರು, ಹೊರತು ವಿಲೀನಗೊಂಡ ಬ್ಯಾಂಕುಗಳ ನೌಕರರು ಅಲ್ಲ; ಏಕೆಂದರೆ ಅಪನಗದೀಕರಣ ನಡೆದ ಸಂದರ್ಭದಲ್ಲಿ ಈ ಬ್ಯಾಂಕುಗಳು ಎಸ್‌ಬಿಐ ಜತೆಗೆ ವಿಲೀನವಾಗಿದ್ದಿರಲಿಲ್ಲ. ಆದುದರಿಂದ ಆ ಐದು ಬ್ಯಾಂಕುಗಳ ನೌಕರರಿಗೆ ಓವರ್‌ಟೈಮ್‌ ಪಾವತಿಸುವ ಹೊಣೆಗಾರಿಕೆ ಆಯಾ ವಿಲಯನಪೂರ್ವ ಬ್ಯಾಂಕುಗಳದ್ದೇ ಹೊರತು ಎಸ್‌ಬಿಐ ನದ್ದಲ್ಲ’ ಎಂದು ಎಸ್‌ಬಿಐ ತನ್ನ ಎಲ್ಲ ವಲಯ ಪ್ರಧಾನ ಕಾರ್ಯಾಲಯಗಳಿಗೆ ತಿಳಿಸಿದೆ.

ನೋಟು ಅಪನಗದೀಕರಣದ ಸಂದರ್ಭದಲ್ಲಿ ಓವರ್‌ಟೈಮ್‌ ದುಡಿತ ಮಾಡಿದ್ದ ಅಧಿಕಾರಿಗಳಿಗೆ ಗರಿಷ್ಠ  ತಲಾ 30,000 ರೂ. ಮತ್ತು ಇತರ ಸಿಬಂದಿಗಳಿಗೆ ಸುಮಾರು 17,000 ರೂ. ಪಾವತಿಯಾಗಿತ್ತು. ಈ ಹಣವನ್ನು ಈ ವರ್ಷ ಮಾರ್ಚ್‌ – ಮೇ ಅವಧಿಯಲ್ಲಿ  ತನ್ನ “ಪಾಕೆಟ್‌’ನಿಂದ ತಾನು ಪಾವತಿಸಿದ್ದೆ ಎಂದು ಎಸ್‌ಬಿಐ ಹೇಳಿದೆ. 

Advertisement

ಎಸ್‌ಬಿಐ ಜತೆಗೆ ವಿಲಯನಗೊಂಡ ಐದು ಬ್ಯಾಂಕುಗಳ ಸುಮಾರು 70,000 ನೌಕರರಿಂದ ಓವರ್‌ಟೈಮ್‌ ದುಡಿತದ ಪಾವತಿಯನ್ನು ಮರು ವಸೂಲಿ ಮಾಡುವ ಎಸ್‌ಬಿಐ ಆದೇಶ ಅನುಚಿತವೂ ಅನಪೇಕ್ಷಿತವೂ ಆದುದಾಗಿದೆ ಎಂದು ಬ್ಯಾಂಕ್‌ ಯೂನಿಯನ್‌ಗಳು ಆಕ್ರೋಶ ವ್ಯಕ್ತಪಡಿಸಿವೆ. ಐದು ಬ್ಯಾಂಕ್‌ಗಳ ವಿಲಯನದೊಂದಿಗೆ ಅವುಗಳ ಸೊತ್ತು ಮತ್ತು ಬಾಧ್ಯತೆಯನ್ನು ಎಸ್‌ಬಿಐ ತನ್ನಲ್ಲಿ ಅಂತರ್ಗತಮಾಡಿಕೊಂಡಿರುವುದರಿಂದ ಈ ವಸೂಲಾತಿ ಕ್ರಮ ಸಾಧುವಲ್ಲ ಎಂದು ಯೂನಿಯನ್‌ಗಳು ಹೇಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next