ಮಂಗಳೂರು: ಕೊರಿಯರ್ ಮಾಡಿದ ಪಾರ್ಸೆಲ್‌ನಲ್ಲಿ ಡ್ರಗ್ಸ್ ಇತ್ತು ಎಂದು ಸುಳ್ಳು ಹೇಳಿ ವ್ಯಕ್ತಿಯೋರ್ವರನ್ನು ಬೆದರಿಸಿ 39.30 ಲ.ರೂ. ಪಡೆದು ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ.
ಸೆ.23ರಂದು ದೂರುದಾರರಿಗೆ 9235127412 ಸಂಖ್ಯೆಯಿಂದ ಕರೆ ಮಾಡಿದ ಮಹಿಳೆಯೊಬ್ಬಳು ಆಕೆಯನ್ನು ಮುಂಬಯಿಯ ಡಿಎಚ್‌ಎಲ್ ಕೊರಿಯರ್ ಕಚೇರಿಯ ಶ್ರೇಯ ಶರ್ಮಾ ಎಂದು ಪರಿಚಯಿಸಿಕೊಂಡು “ನಿಮ್ಮ ಹೆಸರಿನಲ್ಲಿ ಚೀನಕ್ಕೆ ಕಳುಹಿಸಿದ ಪಾರ್ಸೆಲ್ ಬಂದಿದ್ದು, ಅದು ಚೀನಕ್ಕೆ ರವಾನೆಯಾಗದೆ ನಮ್ಮ ಕಚೇರಿಯಲ್ಲಿಯೇ ಉಳಿದಿದೆ.
ಅದರಲ್ಲಿ 5 ಪಾಸ್‌ಪೋರ್ಟ್, 1 ಲ್ಯಾಪ್‌ಟಾಪ್, 400 ಗ್ರಾಂ ಎಂಡಿಎಂಎ ಡ್ರಗ್ಸ್ , ಬ್ಯಾಂಕ್ ದಾಖಲೆಗಳು, ಮೂರೂವರೆ ಕೆಜಿ ಬಟ್ಟೆ ಇದೆ’ ಎಂದಳು. ದೂರುದಾರರು ತಾನು ಪಾರ್ಸೆಲ್ ಕಳುಹಿಸಿಲ್ಲ ಎಂದು ಹೇಳಿದರೂ ಆ ಮಹಿಳೆ “ನಿಷೇಧಿತ ಡ್ರಗ್ಸ್ ಇರುವುದರಿಂದ ನಿಮ್ಮನ್ನು ಸಂಜೆ 6 ಗಂಟೆಯ ಒಳಗೆ ಕಸ್ಟಮ್ಸ್ ಅಧಿಕಾರಿಗಳು ಬಂಧಿಸುತ್ತಾರೆ. ಸೆ.24ರ ಬೆಳಗ್ಗೆ 9ಕ್ಕೆ ವಿಚಾರಣೆಗೆ ಒಳಪಡಿಸಲಾಗುವುದು’ ಎಂದಳು.
ಸೆ.24ರಂದು ಬೆಳಗ್ಗೆ 9 ಗಂಟೆಗೆ ಕರೆ ಮಾಡಿದ ಆಕೆ ವೀಡಿಯೋ ಕಾಲ್‌ನಲ್ಲಿ ವಿಚಾರಣೆಗೆ ಒಳಪಡಿಸುವಂತೆ ಮಾಡಿದ್ದು, ಬಂಧಿಸದೆ ನಿರಪರಾಧಿ ಎಂದು ಸಾಬೀತುಪಡಿಸಬೇಕಾದರೆ ಕೂಡಲೇ ಹಣವನ್ನು ವರ್ಗಾಯಿಸಬೇಕು ಎಂದು ಬ್ಯಾಂಕ್ ಖಾತೆ ಸಂಖ್ಯೆಯನ್ನು ತಿಳಿಸಿದಳು.
ಹೆದರಿದ ದೂರುದಾರರು 37 ಲ.ರೂ.ಗಳನ್ನು ಆಕೆ ಹೇಳಿದ ಖಾತೆಗೆ ವರ್ಗಾಯಿಸಿದ್ದಾರೆ. ಅನಂತರ ಸೆ.26ರಂದು ಸೊತ್ತುಗಳ ವಿಚಾರಣೆಯನ್ನು ಆಡಿಟರ್ ಮಾಡುವುದಾಗಿ ನಂಬಿಸಿ ಮತ್ತೆ 2.30 ಲ.ರೂ.ಗಳನ್ನು ವರ್ಗಾಯಿಸಿಕೊಂಡಿದ್ದಾಳೆ.
ವಿಚಾರಣೆ ಮುಗಿದ ಬಳಿಕ ಸೆ.28ರಂದು ಹಣವನ್ನು ಬಡ್ಡಿ ಸಮೇತ ವಾಪಸ್ ನೀಡುವುದಾಗಿಯೂ ಹೇಳಿದ್ದಾಳೆ. ಆದರೆ ಅನಂತರ ಕರೆ ಮಾಡಿಲ್ಲ. ಬಳಿಕ ಆಕೆಗೆ ಎಷ್ಟೇ ಕರೆ, ಮೆಸೇಜ್ ಮಾಡಿದರೂ ಪ್ರತಿಕ್ರಿಯೆ ಬರಲಿಲ್ಲ ಎಂದು ಮಂಗಳೂರಿನ ಸೆನ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ನೀಡಿದ್ದಾರೆ.