Advertisement

ಪ್ಲಾಸ್ಟಿಕ್‌ ನಿಷೇಧ ಪರಿಣಾಮಕಾರಿಯಾಗಿ ಜಾರಿಯಾಗಲಿ

12:51 AM Jun 27, 2022 | Team Udayavani |

ಜುಲೈ ಒಂದರಿಂದ ದೇಶಾದ್ಯಂತ ಏಕಬಳಕೆಯ ಪ್ಲಾಸ್ಟಿಕ್‌ ನಿಷೇಧಿಸಲು ಕೇಂದ್ರ ಸರಕಾರ ಮುಂದಾಗಿದೆ. ಕೇಂದ್ರ ಪರಿಸರ ಇಲಾಖೆ ಈ ಕುರಿತು ಅಧಿಸೂಚನೆ ಹೊರಡಿಸಿದ್ದು, “ಒಂದು ಸಲ ಬಳಸಿ ಎಸೆಯಬಹುದಾದ ಪ್ಲಾಸ್ಟಿಕ್‌ಗಳ ತಯಾರಿಕೆ, ಆಮದು, ಸಂಗ್ರಹ, ಸಾಗಾಟ, ಮಾರಾಟ ಹಾಗೂ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದೆ. ಬದಲಾಗುತ್ತಿರುವ ಪಾರಿಸರಿಕ ಸನ್ನಿವೇಶದಲ್ಲಿ ಇಂಥ ನಿರ್ಧಾರ ಅಗತ್ಯ ಮತ್ತು ಅನಿವಾರ್ಯ.

Advertisement

ಈಗ ಸಾಮಾನ್ಯವಾಗಿ ನಾವು ಬಳಸುತ್ತಿರುವ ಪ್ಲಾಸ್ಟಿಕ್‌ ವಸ್ತುಗಳ ಪೈಕಿ ಬಹುಪಾಲು ಇಂಥ ಏಕಬಳಕೆಯ ವಸ್ತುಗಳೇ ಆಗಿವೆ. ಶಾಂಪೂ, ಕಾಸ್ಮೆಟಿಕ್ ನಂಥ ವಸ್ತುಗಳ ಪ್ಯಾಕ್‌, ಪಾಲಿಥೀನ್‌ ಬ್ಯಾಗ್‌, ಫೇಸ್‌ ಮಾಸ್ಕ್, ಕಾಫಿ ಕಪ್‌ ಇಂಥ ಹಲವು ಬಗೆಯ ಪ್ಲಾಸ್ಟಿಕ್‌ಗಳು ಈ ನಿಷೇಧದ ವ್ಯಾಪ್ತಿಗೆ ಬರುತ್ತದೆ. ಒಂದು ಲೆಕ್ಕಾಚಾರದ ಪ್ರಕಾರ, 2019ರಲ್ಲಿ 130 ದಶಲಕ್ಷ ಮೆಟ್ರಿಕ್‌ ಟನ್‌ನಷ್ಟು ಪ್ಲಾಸ್ಟಿಕ್‌ಗಳು ತ್ಯಾಜ್ಯಕ್ಕೆ ಸೇರಿವೆ. ಏಕಬಳಕೆಯ ಪ್ಲಾಸ್ಟಿಕ್‌ನ ಬಳಕೆ ವರ್ಷದಿಂದ ವರ್ಷಕ್ಕೆ ಅಪಾಯದ ಮಟ್ಟಕ್ಕೆ ಏರುತ್ತಿದೆ. ಭಾರತದಲ್ಲಿ 11.8 ದಶಲಕ್ಷ ಮೆಟ್ರಿಕ್‌ ಟನ್‌ನಷ್ಟು ಪ್ಲಾಸ್ಟಿಕ್‌ ಉತ್ಪಾದನೆ ಯಾಗುತ್ತಿದ್ದು, 2.9 ದಶಲಕ್ಷ ಟನ್‌ನಷ್ಟು ಸರಕನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ನಂಬಲೇಬೇಕಾದ ಸಂಗತಿಯೆಂದರೆ, ಒಬ್ಬ ವ್ಯಕ್ತಿ ವರ್ಷಕ್ಕೆ 4 ಕೆ.ಜಿ.ಯಷ್ಟು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಭೂಮಿಯ ಒಡಲಿಗೆ ಸೇರಿಸುತ್ತಾನೆ ಎಂದು ಸಮೀಕ್ಷೆಯೊಂದು ಹೇಳುತ್ತದೆ.

ಈ ಪ್ಲಾಸ್ಟಿಕ್‌ ತ್ಯಾಜ್ಯಗಳು ಮನುಕುಲಕ್ಕೆ ಮುಂದಿನ ದಿನಗಳಲ್ಲಿ ಬಹುದೊಡ್ಡ ಶತ್ರುವಾಗಿ ಕಾಡಲಿದೆ. ಕರಗದ, ಸುಡದ ಹಾಗೂ ಪುನರ್‌ಬಳಕೆಗೂ ಎಟುಕದ ಈ ಪ್ಲಾಸ್ಟಿಕ್‌ಗಳು ಭೂಮಿಯೊಳಗೆ ಅಡಗಿ ಕುಳಿತು ಮೈಕ್ರೊಪ್ಲಾಸ್ಟಿಕ್‌ ಆಗಿ ರೂಪಾಂತರಗೊಳ್ಳುತ್ತದೆ. ಅನಂತರ ಯಾರ ಕಣ್ಣಿಗೂ ಕಾಣಿಸದೆ, ನಾವು ಸೇವಿಸುವ ಆಹಾರಕ್ಕೆ ಪ್ರವೇಶಿಸಿ ಇಡೀ ಮನುಕುಲದ ಸ್ವಾಸ್ಥ್ಯವನ್ನು ಹದಗೆಡಿಸಿಬಿಡುತ್ತದೆ. ಈಗಾಗಲೇ ಹಲವು ರಾಷ್ಟ್ರಗಳು ಇಂಥ ಪ್ಲಾಸ್ಟಿಕ್‌ ಬಳಕೆಯನ್ನು ಪೂರ್ಣಪ್ರಮಾಣದಲ್ಲಿ ನಿಷೇಧಿಸಿದ್ದು, ಭಾರತ ತಡವಾಗಿಯಾದರೂ ಇತ್ತ ಕಡೆ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ.

ಈಗಾಗಲೇ ಹಲವು ಉದ್ಯಮಗಳು ಹಾಗೂ ಉದ್ಯಮಿಗಳು ಈ ನಿರ್ಧಾರವನ್ನು ವಿರೋಧಿಸಿದ್ದಾರೆ. ಅಖೀಲ ಭಾರತ ಪ್ಲಾಸ್ಟಿಕ್‌ ತಯಾರಕರ ಸಂಘ ನೀಡುವ ಮಾಹಿತಿ ಪ್ರಕಾರ, ದೇಶದಲ್ಲಿ 88,000 ಪ್ಲಾಸ್ಟಿಕ್‌ ತಯಾರಕ ಘಟಕಗಳು ಸ್ಥಗಿತಗೊಳ್ಳಬೇಕಾಗುತ್ತದೆ. ಇದರಿಂದ ಹತ್ತು ಲಕ್ಷ ಮಂದಿಗೆ ಉದ್ಯೋಗ ಲಭಿಸುವುದರಿಂದ ಸಹಜವಾಗಿಯೇ ಈ ಉದ್ಯಮ ತನ್ನ ವಿರೋಧ ದಾಖಲಿಸಿದೆ.

ಆದರೆ ಪ್ರಕೃತಿಯ ದೂರಗಾಮಿ ಚಿಂತನೆಯನ್ನು ಮುಂದಿಟ್ಟುಕೊಂಡು ಸರಕಾರ ಇಟ್ಟಿರುವ ಹೆಜ್ಜೆಯನ್ನು ಯಾವುದೇ ಕಾರಣಕ್ಕೂ ಹಿಂದೆ ತೆಗೆದು ಕೊಳ್ಳುವುದು ಸೂಕ್ತ ಎನಿಸದು. ಪ್ಲಾಸ್ಟಿಕ್‌ ತಯಾರಿಕೆಯನ್ನೇ ನಂಬಿ ಕೊಂಡಿರುವ ಉದ್ಯಮಗಳ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ, ಸೂಕ್ತ ಪರಿಹಾರ ಪ್ಯಾಕೇಜ್‌ ನೀಡುವುದರ ಜತೆಗೆ ಈ ಉದ್ಯಮಗಳು ಪರ್ಯಾಯ ಮಾರ್ಗವನ್ನು ಅರಸಲು ಸರಕಾರ ನೆರವು ನೀಡುವುದು ಸೂಕ್ತ.

Advertisement

ಆದರೆ ಇಲ್ಲಿರುವ ಪ್ರಮುಖ ವಿಚಾರ ಎಂದರೆ ಈ ಕಠಿನ ನಿರ್ಧಾರದ ಅನುಷ್ಠಾನ ಎಷ್ಟರ ಮಟ್ಟಿಗೆ ಆಗಲಿದೆ ಎನ್ನುವುದು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಇದರ ಉಸ್ತುವಾರಿ ವಹಿಸಲಿದ್ದರೆ, ರಾಜ್ಯ ಪರಿಸರ ಮಾಲಿನ್ಯ ಮಂಡಳಿಗಳ ಮೇಲೆ ಅನುಷ್ಠಾನ ಜವಾಬ್ದಾರಿ ಇದೆ. ವಿಶೇಷವೆಂದರೆ, ಕರ್ನಾಟಕದಲ್ಲಿ 2016ರಿಂದಲೇ ಪ್ಲಾಸ್ಟಿಕ್‌ಗಳ ನಿಷೇಧ ಆಗಿದ್ದರೂ ಅದರ ಅನುಷ್ಠಾನ ಎಷ್ಟು ಪರಿಣಾಮಕಾರಿಯಾಗಿದೆ ಎಂದು ಎಲ್ಲರಿಗೂ ತಿಳಿದಿದೆ. ಈ ಹಿನ್ನೆಲೆಯಲ್ಲಿ ಇಂಥ ಕಾಯ್ದೆಗಳು ಪರಿಣಾಮ ಕಾರಿಯಾಗಿ ಜಾರಿಯಾಗಬೇಕಾದರೆ ಸರಕಾರದ ಉಸ್ತುವಾರಿ ಜತೆಗೆ ಗ್ರಾಹಕರು ಮತ್ತು ವರ್ತಕರ ಸಹಕಾರವೂ ಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next