Advertisement

ಸತ್ತ  ಮೇಲೆ ಸಿಕ್ಕಿತು ಬೆಳಗಾವಿ ಮಗಳಿಗೆ ಜಯ

09:25 AM Dec 16, 2018 | |

ಬೆಳಗಾವಿ: ಐರ್ಲೆಂಡ್‌ನ‌ಲ್ಲಿ ಗರ್ಭಪಾತವನ್ನು ಕಾನೂನು ಬದ್ಧಗೊಳಿಸುವ ಐತಿಹಾಸಿಕ ಮಸೂದೆ ಅಂಗೀಕರಿಸಲಾಗಿದ್ದು, ಈ ಕಾನೂನಿಗೆ ಸವಿತಾಳ ಹೆಸರಿಡಬೇಕೆನ್ನುವುದು ಈಕೆಯ ಹೆತ್ತವರ ಬಯಕೆಯಾಗಿದೆ.

Advertisement

ಕ್ಯಾಥೋಲಿಕ್‌ ಸಮುದಾಯವೇ ಅಧಿಕ ಸಂಖ್ಯೆಯಲ್ಲಿರುವ ಐರ್ಲೆಂಡ್‌ನ‌ಲ್ಲಿ ಗರ್ಭಪಾತಕ್ಕೆ ಅವಕಾಶ ಇಲ್ಲದೇ 2012ರಲ್ಲಿ ಬೆಳಗಾವಿಯ ಸವಿತಾ ಹಾಲಪ್ಪನವರ ಅಸುನೀಗಿದ್ದರು. ಹಾವೇರಿ ಮೂಲದ ಎಂಜಿನಿಯರ್‌ ಪ್ರವೀಣ ಅವರೊಂದಿಗೆ ಸವಿತಾಳ ವಿವಾಹವಾಗಿತ್ತು. ಐರ್ಲೆಂಡ್‌ನ‌ ಗಾಲ್ವೇಯಲ್ಲಿ ನೆಲೆಸಿದ್ದ ದಂತವೈದ್ಯೆ ಡಾ| ಸವಿತಾ 17 ವಾರಗಳ ಗರ್ಭಿಣಿಯಾಗಿದ್ದಾಗ ರಕ್ತದಲ್ಲಿನ ನಂಜಿನಿಂದಾಗಿ ಮೃತಪಟ್ಟಿದ್ದರು.

ಸವಿತಾಳನ್ನು ಉಳಿಸಿಕೊಳ್ಳಲು ಗರ್ಭಪಾತವೇ ಕೊನೆಯ ಮಾರ್ಗವಾಗಿತ್ತು. ಗರ್ಭಪಾತಕ್ಕೆ ಮನವಿ ಮಾಡಿದರೂ ಐರ್ಲೆಂಡ್‌ ಕಾನೂನಿನಲ್ಲಿ ಅವಕಾಶ ಇಲ್ಲದ್ದರಿಂದ ವೈದ್ಯರು ಅನುಮತಿ ನೀಡಿರಲಿಲ್ಲ. ಹೀಗಾಗಿ 2012, ಅ.28ರಂದು ಸವಿತಾ ಮೃತಪಟ್ಟಿದ್ದರು. ಅಂದಿನಿಂದ ವಿಶ್ವದಾದ್ಯಂತ ನಡೆದ ತೀವ್ರ ಹೋರಾಟಗಳಿಗೆ ಸರ್ಕಾರ ಮನ್ನಣೆ ಕೊಟ್ಟಿದೆ. ಸವಿತಾಳ ಸಾವಿನ ಬಳಿಕ ಮೂರು ವರ್ಷಗಳ ಕಾಲ ಐರ್ಲೆಂಡ್‌ನ‌ಲ್ಲಿಯೇ ಇದ್ದ ಪತಿ ಪ್ರವೀಣ ಅವರು
ಈಗ ಯುಎಸ್‌ಎನಲ್ಲಿ ನೆಲೆಸಿದ್ದಾರೆ. ಸವಿತಾ ಸಾವಿನ ನಂತರ ಸಿಡಿದೆದ್ದ ಐರ್ಲೆಂಡ್‌ ಮಹಿಳೆಯರು ಗರ್ಭಪಾತಕ್ಕೆ ಅವಕಾಶ ನೀಡಬೇಕೆಂದು ದೇಶಾದ್ಯಂತ ಪ್ರತಿಭಟನೆ ನಡೆಸಿದ್ದರು. ಈ ಕೂಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ಚಳವಳಿಗೆ ಕಾರಣವಾಗಿತ್ತು. ಐರ್ಲೆಂಡ್‌ನ‌ ಧಾರ್ಮಿಕ ನಂಬಿಕೆಯ ಹಿನ್ನೆಲೆಯಲ್ಲಿ ಇದಕ್ಕೆ
ಅವಕಾಶವೇ ಇಲ್ಲ ಎಂದು ವಾದ ಶುರುವಾಯಿತು. ಸತತ ಆರು ವರ್ಷಗಳ ಸುದೀರ್ಘ‌ ಹೋರಾಟದ ಫಲವಾಗಿ ಗರ್ಭಪಾತವನ್ನು ಕಾನೂನು ಬದ್ಧಗೊಳಿಸುವ ಐತಿಹಾಸಿಕ ಮಸೂದೆಗೆ ಅಲ್ಲಿನ ಸಂಸತ್‌ ಅಂಗೀಕಾರ ನೀಡಿದೆ. ಇದಕ್ಕೆ ನಡೆದ ಜನಮತಗಣನೆಯಲ್ಲಿ ಶೇ.64ರಷ್ಟು ಬೆಂಬಲ ದೊರೆತಿದ್ದು, ಕಾನೂನು ಜಾರಿಗೆ ರಾಷ್ಟ್ರಪತಿಗಳ
ಅಂಕಿತ ಮಾತ್ರ ಬಾಕಿ ಇದೆ.

ಹೆತ್ತವರಲ್ಲಿ ಸಂತಸ: ಸವಿತಾಳ ತಂದೆ 72 ವರ್ಷದ ಅಂದಾನೆಪ್ಪ ಯಾಳಗಿ ನಿವೃತ್ತ ಎಂಜಿನಿಯರ್‌ ಹಾಗೂ ತಾಯಿ ಅಕ್ಕಮಹಾದೇವಿ ಬೆಳಗಾವಿಯಲ್ಲಿಯೇ ನೆಲೆಸಿದ್ದಾರೆ. ಮಗಳ ಸಾವಿನಿಂದ ನೊಂದಿರುವ ಈ ಹೆತ್ತ ಕರುಳು ಆರು ವರ್ಷವಾದರೂ ಇನ್ನೂ ದು:ಖದಿಂದ ಹೊರ ಬಂದಿಲ್ಲ. ಐರ್ಲೆಂಡ್‌ನ‌ಲ್ಲಿ ಮಸೂದೆ ಪಾಸ್‌ ಆಗಿದ್ದರಿಂದ ಸಂತಸಗೊಂಡಿರುವ ಪಾಲಕರು, ಕಾನೂನಿಗೆ ಸವಿತಾಳ ನಾಮಕರಣ ಮಾಡುವಂತೆ ಐರ್ಲೆಂಡ್‌ ಪ್ರಧಾನಿಗೆ ಮನವಿ ಮಾಡಿದ್ದರು. ಗರ್ಭಿಣಿಯರ ಭ್ರೂಣದಲ್ಲಿ ನ್ಯೂನತೆ ಕಂಡು ಬಂದರೆ ಗರ್ಭಪಾತಕ್ಕೆ ಅವಕಾಶ ಸಿಕ್ಕಿದ್ದು ಮಹಿಳಾ ಕುಲಕ್ಕೆ ಜೀವದಾನ ಸಿಕ್ಕಂತಾಗಿದೆ. ಈ ಹಿಂದೆ ಸವಿತಾ ಸೇರಿದಂತೆ ಎಷ್ಟೋ ಹೆಣ್ಣು ಮಕ್ಕಳು ಈ ರಾಕ್ಷಸ ಕಾನೂನಿನಿಂದ ಪ್ರಾಣತ್ಯಾಗ ಮಾಡಿದ್ದಾರೆ. ಹೀಗಾಗಿ ಅಲ್ಲಿಯ ಮಹಿಳೆಯರು ಗರ್ಭಪಾತಕ್ಕೆ ಲಂಡನ್‌ಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ಇನ್ನು ಮುಂದೆ ಐರ್ಲೆಂಡ್‌ನ‌ಲ್ಲಿಯೇ ಮಹಿಳೆಯರಿಗೆ ಗರ್ಭಪಾತ ಮಾಡಿಸಿಕೊಳ್ಳುವ ಅವಕಾಶ ನೀಡುವ ನೂತನ ಮಸೂದೆ ಎಲ್ಲರ ಹೋರಾಟದ ಫಲ ಎನ್ನುತ್ತಾರೆ ಸವಿತಾಳ ತಂದೆ ಅಂದಾನಪ್ಪ ಯಾಳಗಿ.

ಮಗಳು ಸವಿತಾಳ ಸಾವಿಗೆ ಇಡೀ ಜಗತ್ತೇ ಮರುಗಿದೆ. ಆರು ವರ್ಷಗಳ ಬಳಿಕ ಗರ್ಭಪಾತಕ್ಕೆ ಅವಕಾಶ ಮಾಡಿಕೊಟ್ಟಿರುವ ಐರ್ಲೆಂಡ್‌ ಸಂಸತ್‌ಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸವಿತಾಳ ಸಾವಿನಿಂದಾಗಿ ಎಚ್ಚೆತ್ತುಕೊಂಡು ಧಾರ್ಮಿಕ ಕಟ್ಟುಪಾಡಿನಿಂದ ಹೊರಬಂದು ಮಸೂದೆ ಪಾಸ್‌ ಮಾಡಿದ್ದು ಖುಷಿಯಾಗಿದೆ. ಐತಿಹಾಸಿಕ ಮಸೂದೆಯಾಗಿದ್ದರಿಂದ ಇದಕ್ಕೆ ಸವಿತಾಳ ಹೆಸರಿಟ್ಟು ಆಕೆಯ ಆತ್ಮಕ್ಕೆ ಶಾಂತಿ ದೊರಕಿಸಬೇಕು.
ಅಂದಾನೆಪ್ಪ ಯಾಳಗಿ, ಸವಿತಾಳ ತಂದೆ

Advertisement

ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next