ಗದಗ: ವನ್ಯಜೀವಿ ಸಪ್ತಾಹ ಅಂಗವಾಗಿ ಜಿಲ್ಲಾ ಅರಣ್ಯ ಇಲಾಖೆಯಿಂದ ನಗರದಲ್ಲಿ ರವಿವಾರ ಆಯೋಜಿಸಿದ್ದ 140 ಕಿಮೀ ಹಾಗೂ 20 ಕಿಮೀ ದೂರದ ಸೈಕ್ಲೋಥಾನ್ (ಸೈಕಲ್ ಜಾಥಾ) ಯಶಸ್ವಿಯಾಗಿ ನಡೆಯಿತು. ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ 140 ಕಿಮೀ ಸೈಕಲ್ ಜಾಥಾಗೆ ಜಿಪಂ ಸಿಇಒ ಡಾ| ಆನಂದ ಕೆ., ಎಸ್‌ಪಿ ಯತೀಶ್ ಎನ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ. ಸೂರ್ಯಸೇನ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಲಗರೆ ಚಾಲನೆ ನೀಡಿದರು. ಬಳಿಕ 20 ಕಿಮೀ ವಿಭಾಗದ ಸೈಕಲ್ ಜಾಥಾಕ್ಕೆ ಜಿಲ್ಲಾಧಿಕಾರಿ ಎಂ. ಸುಂದರೇಶ್ ಹಸಿರು ನಿಶಾನೆ ತೋರಿದರು.
ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾದ ನೀಲಮ್ಮ ಮಲ್ಲಿಗವಾಡ, ಪ್ರೇಮಾ ಹುಚ್ಚಣ್ಣವರ, ಬಸಿರಾ ಹಾಗೂ ಹರೀಶ ಮುಟಗಾರ, ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಜಿ.ಬಿ. ವಿಶ್ವನಾಥ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪರಿಮಳ ವಿ.ಎಚ್. ಫಯಾಜ್ ಖಾಜಿ, ಗದಗ ವಲಯ ಅರಣ್ಯಾಧಿಕಾರಿಗಳಾದ ರಾಜು ಗೊಂದಕರ, ಮಹಾಂತೇಶ ಪೇಟೂರ ಸೇರಿದಂತೆ ಅರಣ್ಯ, ಕ್ರೀಡಾ ಇಲಾಖೆ ಸಿಬ್ಬಂದಿ ಇದ್ದರು.
ಇದನ್ನೂ ಓದಿ:ಬಿಜೆಪಿಯ ಗೊಡ್ಡು ಬೆದರಿಕೆಗಳಿಗೆ ಜಗ್ಗುವುದಿಲ್ಲ: ಸಿಬಿಐ ದಾಳಿ ಬಳಿಕ ಕಿಡಿಕಾರಿದ ಡಿಕೆ ಸುರೇಶ್
ಹಸಿರು ಕಾನನದಲ್ಲಿ ಸೈಕಲ್ ಸವಾರಿ: ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 6.30ಕ್ಕೆ ಚಾಲನೆ ಪಡೆದ 140 ಕಿಮೀ ಸೈಕಲ್ ಜಾಥಾ ಕಪ್ಪತ್ತಗುಡ್ಡ ಮೈಯೊಡ್ಡಿರುವ ಗದಗ, ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನಲ್ಲಿ ಸುಮಾರು 8 ಗಂಟೆಗಳ ಕ್ರಮಿಸಿತು. ಈ ಪೈಕಿ ಮುಂಡರಗಿ-ಶಿರಹಟ್ಟಿ ತಾಲೂಕಿನ ಕಪ್ಪತ್ತಗುಡ್ಡದ ಹಸಿರು ಸೆರಗಿನ ಮಧ್ಯೆ ಸಾಗಿತು. ಗದಗ ತಾಲೂಕಿನ ಕದಾಂಪುರ, ಮೇವುಂಡಿ, ಮುಂಡರಗಿ, ಬಾಗೇವಾಡಿ, ಕಡಕೋಳ, ಶಿರಹಟ್ಟಿ, ಮಾಗಡಿ, ಹರ್ತಿ ಮಾರ್ಗವಾಗಿ ಗದಗ ತಾಲೂಕಿನ ಬಿಂಕದಕಟ್ಟಿಯ ಸಾಲು ಮರದದ ತಿಮ್ಮಕ್ಕ ಸಸ್ಯೋದ್ಯಾನಕ್ಕೆ ತಲುಪಿ ಕೊನೆಗೊಂಡಿತು. ಈ ನಡುವೆ ಸುಮಾರು 10 ಕಡೆ ಹಣ್ಣು, ಉಪಾಹಾರ ಹಾಗೂ ಕುಡಿಯುವ ನೀರು ಒದಗಿಸಲಾಯಿತು.
ಇನ್ನು ನಗರದ ಪ್ರಮುಖ ಮಾರ್ಗಗಳಲ್ಲಿ ಸಾಗಿದ 20 ಕಿಮೀ ದೂರದ ಸೈಕಲ್ ಜಾಥಾದಲ್ಲಿ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು, ಜಿಪಂ ಸಿಇಒ ಡಾ| ಆನಂದ ಹಾಗೂ ಎಸ್ಪಿ ಯತೀಶ್ ಎನ್., ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ಗಮನ ಸೆಳೆದರು.
ಉಭಯ ಸೈಕಲ್ ಜಾಥಾಗಳು
ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನಕ್ಕೆ ತಲುಪಿ ಮುಕ್ತಾಯಗೊಂಡವು. ಎರಡೂ ವಿಭಾಗಗಳದಲ್ಲಿ 290 ಜನರು ಆನ್‌ಲೈನ್ ಮೂಲಕ ನೋಂದಾಯಿಸಿದ್ದು, ಆ ಪೈಕಿ 150 ಜನರು ಪಾಲ್ಗೊಂಡಿದ್ದರು. ಈ ಪೈಕಿ ಬಾಗಲಕೋಟೆ, ವಿಜಯಪುರ ಹಾಗೂ ಗದಗಿನ ಸೈಕ್ಲಿಸ್ಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಧಾರವಾಡ ಸೇರಿದಂತೆ ಇನ್ನಿತರೆ ಜಿಲ್ಲೆಯ ಸೈಕಲ್ ಪಟುಗಳು ಪಾಲ್ಗೊಂಡಿದ್ದರು.