Advertisement

ಮಣ್ಣು ಉಳಿಸುವುದು ಪ್ರತಿಯೊಬ್ಬರ ಸಂಕಲ್ಪವಾಗಬೇಕು; ಗಟ್ಟಿ ದನಿಯಿಂದಷ್ಟೇ ಇದು ಸಾಧ್ಯ: ಸದ್ಗುರು

12:09 AM Jun 18, 2022 | Team Udayavani |

ಬೆಂಗಳೂರು: ಮಣ್ಣು ಉಳಿಸುವ ಕಾಯಕ ಒಬ್ಬರು -ಇಬ್ಬರಿಂದ ಆಗುವ ಕೆಲಸವಲ್ಲ; ಪ್ರತಿಯೊಬ್ಬರೂ ಗಟ್ಟಿಯಾಗಿ ದನಿ ಎತ್ತಲು ಈಗ ಕಾಲ ಕೂಡಿಬಂದಿದೆ. ದೊಡ್ಡ ದನಿಯ ಮೂಲಕ ನಮ್ಮ ಚುನಾಯಿತ ಸರಕಾರಗಳು ನೀತಿ ಬದಲಾಯಿಸುವಂತೆ ನೋಡಿಕೊಳ್ಳಬೇಕು.

Advertisement

-ಇದು “ಮಣ್ಣು ಉಳಿಸಿ’ ಎಂಬ ಉದ್ಘೋಷ ದೊಂದಿಗೆ 27 ರಾಷ್ಟ್ರಗಳನ್ನು ಬೈಕಿನಲ್ಲಿ ಸಂಚರಿಸಿ ಶುಕ್ರವಾರ ಸಂಜೆ ಕರ್ನಾಟಕಕ್ಕೆ ಕಾಲಿರಿಸಿದ ಸದ್ಗುರು ಅವರ ಆಗ್ರಹ. ಆಂಧ್ರದ ಮೂಲಕ ಚಿಕ್ಕಬಳ್ಳಾಪುರಕ್ಕೆ ಪ್ರವೇಶಿಸುತ್ತಿರುವಾಗಲೇ ಝೂಮ್‌ ಮೂಲಕ ಉದಯ ವಾಣಿಗೆ ಸಂದರ್ಶನ ನೀಡಿದ ಅವರು, 96 ದಿನಗಳ ಪ್ರಯಾಣದ ಅನುಭವಗಳನ್ನು ಹಂಚಿಕೊಂಡರು.

ಮಣ್ಣು ಉಳಿಸಿ ಅಭಿಯಾನವನ್ನು 27 ರಾಷ್ಟ್ರಗಳಲ್ಲಿ ಮುನ್ನಡೆಸಿ ಈಗ ತವರು ಮಣ್ಣಿಗೆ ಕಾಲಿಡುತ್ತಿದ್ದೀರಿ. ಈಗ ವಿಶೇಷ ಭಾವ ನಿಮ್ಮದಾಗಿರಬಹುದು.
-ಇಡೀ ಜಗತ್ತಿನ ಮಣ್ಣು ಮತ್ತು ಭಾವದಲ್ಲಿ ವ್ಯತ್ಯಾಸವೇನಿಲ್ಲ. ಎಲ್ಲ ಮಣ್ಣಿನ ಜನರೂ ನನ್ನನ್ನು ಪ್ರೀತಿಯಿಂದ ಕಂಡಿದ್ದಾರೆ. ಸಹಜವಾಗಿಯೇ ಕರ್ನಾಟಕಕ್ಕೆ ಪ್ರವೇಶಿಸುವಾಗ ಸಂತೋಷವಾಗಿದೆ. ಚಿಕ್ಕಬಳ್ಳಾಪುರ ನನ್ನ ತಾಯಿ ಊರು. ಹೀಗಾಗಿ ಹಳೆಯ ನೆನಪುಗಳು ಕಾಡುತ್ತಿವೆ.

ನೂರು ದಿನ, 30 ಸಹಸ್ರ ಕಿ.ಮೀ. ಪ್ರಯಾಣ… ಇಂಥ ಸಾಹಸಕ್ಕೆ ನೀವು ಬೈಕ್‌ ಸವಾರಿಯಂಥ ಸವಾಲಿನ ಹಾದಿಯನ್ನು ಏಕೆ ಆಯ್ಕೆ ಮಾಡಿಕೊಂಡಿರಿ?
-ಅಂದುಕೊಂಡ ಉದ್ದೇಶ ಈಡೇರಿಸಲು ಇಂಥ ದೊಡ್ಡ ರಿಸ್ಕ್ ತೆಗೆದುಕೊಳ್ಳಲೇಬೇಕಾಯಿತು. 300 ಕೋಟಿ ಜನರಿಗೆ ಮಣ್ಣು ಉಳಿಸಿ ಅಭಿಯಾನದ ಬಗ್ಗೆ ಮನವರಿಕೆ ಮಾಡಿದೆ. 34 ರಾಷ್ಟ್ರಗಳು ಒಡಂಬಡಿಕೆಗೆ ಸಹಿ ಹಾಕಿವೆ. ಈಗಷ್ಟೇ ನಾನು 537ನೇ ಕಾರ್ಯಕ್ರಮವನ್ನು ಮುಗಿಸಿ ಬರುತ್ತಿದ್ದೇನೆ. ಸರಾಸರಿ ದಿನಕ್ಕೆ ಹತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವೆ. ಈ ಕಾರ್ಯಕ್ರಮದ ಉದ್ದೇಶ ಜಗತ್ತಿನ ಬಹುತೇಕ ಜನರಿಗೆ ಮುಟ್ಟಿದೆ ಎಂದುಕೊಂಡಿದ್ದೇನೆ.

ಎಲ್ಲರನ್ನೂ ಕಾಡುವ ಪ್ರಶ್ನೆ ಒಂದೇ- ಈ ವಯಸ್ಸಿನಲ್ಲಿ ಇದು ಹೇಗೆ ಸಾಧ್ಯ ಎನ್ನುವುದು?
-ಹೌದು ಎಲ್ಲರೂ ಕೇಳುತ್ತಿದ್ದಾರೆ. ನಾನು 40 ವರ್ಷ ಗಳಿಂದಲೂ ಹೇಳುತ್ತಿದ್ದೇನೆ- ಯೋಗ ಮಾಡಿ ಎಂದು. ನನ್ನನ್ನು ಇಷ್ಟು ಮುನ್ನಡೆಸುತ್ತಿರುವುದು ಯೋಗದ ಶಕ್ತಿ. ಯೋಗಜೀವನದಿಂದ ಎಂಥದ್ದನ್ನೂ ಸಾಧಿಸಬಹುದು ಎನ್ನುವುದಕ್ಕೆ ಇದು ಉದಾಹರಣೆ. ಒಂದು ರೀತಿಯಲ್ಲಿ ಯೋಗದ ಜಾಹೀರಾತು ನಾನು!

Advertisement

ಜಗತ್ತಿನೆಲ್ಲೆಡೆ ಸಿಕ್ಕ ಪ್ರತಿಕ್ರಿಯೆ ಹೇಗಿತ್ತು? ಇಂಥ ದ್ದೊಂದು ಅಭಿಯಾನ ನಡೆಸಿದ್ದು ಸಾರ್ಥಕವಾಯಿತು ಎಂದು ಅನ್ನಿಸಿದ ಕ್ಷಣವನ್ನು ನೆನಪಿಸಿಕೊಳ್ಳಬಹುದೇ?
-ಅಂಥ ಹಲವು ಘಟನೆಗಳಿವೆ. ನಾನು ಮುಖ್ಯವಾಗಿ ಯುಎನ್‌ಸಿಸಿಡಿ ಕಾಪ್‌15 ಉದ್ದೇಶಿಸಿ ಮಾತನಾಡಿದೆ. ಅಲ್ಲಿ ನಾನು ಮಣ್ಣು ಉಳಿಸಬೇಕಾದ ಅನಿವಾರ್ಯ ವನ್ನು ಒತ್ತಿ ಹೇಳಿದೆ. ಖಚಿತವಾಗಿ ಇದು ಅವರ ಮೈಂಡ್‌ಸೆಟ್‌ ಬದಲಾಯಿಸಿದೆ. ನಾನು ಎಲ್ಲ ರಾಷ್ಟ್ರಗಳ ಪ್ರಮುಖರಿಗೂ ವಿಸ್ತೃತವಾದ ಹೊತ್ತಗೆಯನ್ನು ನೀಡಿ ಮಣ್ಣನ್ನು ಉಳಿಸಬೇಕಾದ ಅನಿವಾರ್ಯವನ್ನು ಹೇಳಿ ದ್ದೇನೆ. ನಾನು ಮಿನಿಸ್ಟರ್‌ ಅಲ್ಲ. ಆದರೆ ಜನಪ್ರತಿನಿಧಿಗಳ ಮನಸ್ಸನ್ನು ಬದಲಾಯಿಸಬಲ್ಲೆ ಎನ್ನುವ ಖಚಿತ ಧೈರ್ಯ ನನ್ನದು. ನಮ್ಮ ಮನವಿಯನ್ನು ಯಾರೂ ನಿರ್ಲಕ್ಷಿಸಲು ಸಾಧ್ಯವಿಲ್ಲ.

ನೀತಿ ನಿರೂಪಣೆ ವಿಚಾರದಲ್ಲಿ ಯಾವ ದೇಶ ನಿಮ್ಮ ಆಲೋಚನೆಗೆ ಹೆಚ್ಚು ಸ್ಪಂದಿಸಿದೆ?
-ಬಹುತೇಕ ಎಲ್ಲ ರಾಷ್ಟ್ರಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ. ಕಾಮನ್‌ವೆಲ್ತ್‌ ರಾಷ್ಟ್ರಗಳು ಜತೆಗೂಡಿವೆ. ಐರೋಪ್ಯ ಒಕ್ಕೂಟ, ಅಮೆರಿಕ ಕೂಡ ಹೊಸ ನೀತಿ ರೂಪಿಸಲು ಮುಂದಾಗಿವೆ. ಬಳಕೆಯಾದ ಭೂಮಿ ಯಲ್ಲಿ ಮಣ್ಣಿನ ರಕ್ಷಣೆಗೆ ನಿಯಮ ರೂಪಿಸುತ್ತಿವೆ. ಭಾರತದಲ್ಲೂ ಕೇಂದ್ರ ಸರಕಾರ ಮತ್ತು ಹಲವು ರಾಜ್ಯಗಳು ನನ್ನ ಜತೆ ಕೈ ಜೋಡಿಸಿವೆ. ಕಾರ್ಪೊರೆಟ್‌ ಕಂಪೆನಿಗಳ ಜತೆಯೂ ನಾನು ಮಾತನಾಡುತ್ತಿದ್ದೇನೆ. ಭಾರತದ ರೈತರ ಜತೆಗೂ ನಾನು ಮಾತನಾಡಿದ್ದು, ಪ್ರತಿಭಟನೆ ನಡೆಸುವ ಬದಲು ಹೊಸ ನೀತಿ ರೂಪಿಸಲು ಏನು ಮಾಡಬಹುದು ಎಂದು ಸಲಹೆ ನೀಡಬೇಕಾಗಿದೆ. ಹಾಗೆಂದು ಅಗತ್ಯ ಬಿದ್ದಾಗ ಪ್ರತಿಭಟಿಸಬಾರದು ಎಂದು ಹೇಳುತ್ತಿಲ್ಲ. ಭಾರತದ ರೈತರೂ ನೀತಿ ನಿರೂಪಣೆಯಲ್ಲಿ ಭಾಗಿಯಾಗಬೇಕು.

ಸರಕಾರ ನೀತಿ ನಿರೂಪಿಸಬಹುದು. ಆದರೆ ಸಾಮಾನ್ಯ ಮನುಷ್ಯ ಮಾಡಬೇಕು?
ಸಾಮಾನ್ಯ ಜನರು ಎಂದು ಹೇಳಿಕೊಳ್ಳುವವರು ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ದೊಡ್ಡದಾಗಿ ದನಿ ಎತ್ತಬೇಕು. ಈಗ ಬಲವಾಗಿ ದನಿ ಮಾಡಲು ಸಕಾಲ. ಹಾಗೆ ಮಾಡುವ ಮೂಲಕ ಸರಕಾರಗಳು ನೀತಿ ನಿರೂಪಿಸುವ ಹಾಗೆ ಮಾಡಬೇಕು. ನೀತಿ ಬದಲಾಗದೆ ಏನನ್ನೂ ಮಾಡಲೂ ಸಾಧ್ಯವಿಲ್ಲ. ಒಬ್ಬೊಬ್ಬ ವ್ಯಕ್ತಿ ತಂತಮ್ಮ ತೋಟದ ಮಣ್ಣು, ಕಿಚನ್‌ ಗಾರ್ಡನ್‌ ಉಳಿಸಿ ಕೊಳ್ಳು ವುದರಿಂದ ಏನೂ ಬದಲಾವಣೆ ಸಾಧ್ಯವಿಲ್ಲ. ಇದಕ್ಕೆ ನೀತಿ ಬದಲಾಗಲೇಬೇಕು. ಪ್ರತೀ ವರ್ಷ 27,000 ಪ್ರಬೇಧಗಳ ಜೀವಿಗಳು ನಾಶವಾಗುತ್ತಿವೆ. ಇದು ಮುಂದುವರಿದರೆ ನಾವೇನೂ ಮಾಡಲೂ ಸಾಧ್ಯವಿಲ್ಲ. ಮೊದಲಿಗೆ ನಮ್ಮ ಬದುಕಿನ ಆಧಾರವಾದ ಕೃಷಿ ಭೂಮಿಯ ಮಣ್ಣನ್ನು ಉಳಿಸಬೇಕಿದೆ. ಪರಿಸರದ ಇತರ ಸಮಸ್ಯೆಗಳನ್ನು ಮಣ್ಣಿನ ಸಮಸ್ಯೆಯ ಜತೆ ಬೆರೆಸ ಕೂಡದು ಎನ್ನುವುದು ನನ್ನ ಮನವಿ.

ಕಳೆದ ಬಾರಿ ನೀವು ನಡೆಸಿದ ಕಾವೇರಿ ಕೂಗು ಪ್ರತಿಫ‌ಲ ಏನಾಯಿತು?
-ರ್‍ಯಾಲಿ ಫಾರ್‌ ರಿವರ್ ನೀತಿ 760 ಪುಟಗಳ ಬೃಹತ್‌ ದಾಖಲೆ. ಇದೇ ಮೊದಲ ಬಾರಿಗೆ ಖಾಸಗಿ ಸಂಸ್ಥೆಯೊಂದು ರೂಪಿಸಿದ ನೀತಿಯನ್ನು ಕೇಂದ್ರ ಸರಕಾರ ಒಪ್ಪಿಕೊಂಡಿದೆ. ಇಪ್ಪತ್ತು ರಾಜ್ಯಗಳು ಇದನ್ನು ಒಪ್ಪಿವೆ. ಆರು ರಾಜ್ಯಗಳು ಇದನ್ನು ಜಾರಿಗೊಳಿಸುತ್ತಿದೆ. “ಕಾವೇರಿ ಕೂಗು’ ಕಾರ್ಯಕ್ರಮ ಕೂಡ ಯಶಸ್ವಿಯಾಗು ತ್ತಿದ್ದು, ಮರವೊಂದಕ್ಕೆ ಕರ್ನಾಟಕ ಸರಕಾರ 125 ರೂ. ಸಬ್ಸಿಡಿ ನೀಡುತ್ತಿದೆ. ಇದರಿಂದಾಗಿ ಕೇಂದ್ರ ಸರಕಾರ ಗಂಗಾ ನದಿ ಸಹಿತ 13 ನದಿಗಳ ಪಾತ್ರಗಳ ರಕ್ಷಣೆಗೆ ಯೋಜನಾ ವರದಿಯನ್ನು ರೂಪಿಸಿದೆ. ಇದರಿಂದಾಗಿ ಶೇ. 68ರಷ್ಟು ಮಣ್ಣು ಸಂರಕ್ಷಣೆ ಯಾಗುತ್ತಿದೆ.

ಪ್ರಯಾಣ ಮುಗಿಯುತ್ತಿದೆ. ಮಣ್ಣು ಉಳಿಸುವ ಅಭಿಯಾನದ ಮುಂದಿನ ಹೆಜ್ಜೆ ಏನು?
ಇದೇನು ನೂರು ದಿನಕ್ಕೆ ಮುಗಿಯುವ ಕೆಲಸ ಅಲ್ಲ. ನಿರಂತರ ಹೋರಾಟ ಮತ್ತು ಒತ್ತಡ ಹೇರಬೇಕಾಗಿದೆ. ಚುನಾಯಿತ ಸರಕಾರ ಈಗ ನೀತಿ ಬದಲಾವಣೆಯ ಭರವಸೆ ನೀಡಿದೆ. ಇದು ಮುಂದಿನ ಹತ್ತು ವರ್ಷಗಳಲ್ಲಿ ಅನುಷ್ಠಾನ ಪ್ರಾಮಾಣಿಕವಾಗಿ ನಡೆಯುವಂತೆ ನೋಡಿಕೊಳ್ಳುವುದೇ ಸವಾಲು.

“ಉದಯವಾಣಿ’ ನಿರಂತರ ತೊಡಗಿಸಿಕೊಳ್ಳಲಿ
“ಉದಯವಾಣಿ’ ಪತ್ರಿಕೆ ರಾಜ್ಯದಲ್ಲಿ ಮಣ್ಣು ಮತ್ತು ಪರಿಸರವನ್ನು ಉಳಿಸುವ ಕಾಯಕದಲ್ಲಿ ತೊಡ ಗಿಸಿಕೊಳ್ಳುವುದನ್ನು ನಿರಂತರವಾಗಿ ಮುಂದುವರಿಸಲಿ. ಸಶಕ್ತ ಮಾಧ್ಯಮವಾದ “ಉದಯವಾಣಿ’ ನಾಡಿನ ಪರಿಸರ ಕಾಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಮಣ್ಣು ಉಳಿಸುವ ಕಾಳಜಿ ಮನೆಮನಕ್ಕೆ ತಲುಪಿಸುವ ಹೊಣೆಗಾರಿಕೆಯನ್ನು ಮುಂದುವರಿಸಲಿ.

ಕರ್ನಾಟಕ ಸರಕಾರದಿಂದ ನೀವು ಏನು ನಿರೀಕ್ಷೆ ಮಾಡುತ್ತೀರಿ?
-ನಾನು ಈಗಾಗಲೇ ಕರ್ನಾಟಕ ಮುಖ್ಯಮಂತ್ರಿ ಯವರ ಜತೆ ಮಾತನಾಡಿದ್ದೇನೆ. ಮೂರು ಹಂತಗಳ ಯೋಜನೆಯನ್ನು ಸರಕಾರದ ಮುಂದಿಟ್ಟಿದ್ದೇನೆ. ಮುಖ್ಯ ಮಂತ್ರಿ ಗಳು ಇದನ್ನು ಕೈಗೂಡಿಸುವ ಭರವಸೆ ನೀಡಿದ್ದಾರೆ. ಸರಕಾರ ನಮ್ಮ ಜತೆ ಒಡಂಬಡಿಕೆ ಮಾಡಿಕೊಂಡಿದೆ. ತಾಂತ್ರಿಕ ಕೈಪಿಡಿ ಯನ್ನು ನಾನು ಜಗತ್ತಿನ ಎಲ್ಲ ರಾಷ್ಟ್ರಗಳಿಗೂ ಮುಟ್ಟಿಸಿ ದ್ದೇನೆ. ಮಣ್ಣು ಬರೇ ಕರ್ನಾಟಕ, ಭಾರತದ ವಿಷಯ ಅಲ್ಲ. ಜಗತ್ತಿನ ಜೀವವೈವಿಧ್ಯಕ್ಕೆ ಸಂಬಂಧಿಸಿದ ವಿಚಾರ. ಎಲ್ಲರೂ ಕೈಜೋಡಿಸಿದಾಗ ಮಾತ್ರ ಬದಲಾವಣೆ ಸಾಧ್ಯ.

-ಬಿ.ಕೆ. ಗಣೇಶ್‌

 

Advertisement

Udayavani is now on Telegram. Click here to join our channel and stay updated with the latest news.

Next