Advertisement

ಸ್ವಲ್ಪ ಉಳಿಸಿ ವಿಶ್ಪಾಸ ಗಳಿಸಿ

12:31 AM Jun 03, 2019 | Team Udayavani |

ಅನುಮಾನ ಬೇಡ. ಇವತ್ತು ದುಡ್ಡಿದ್ದರೆ ಮಾತ್ರ ಸಮಾಜದಲ್ಲಿ ಮರ್ಯಾದೆ ಸಿಗುತ್ತದೆ. ಕೈ ತುಂಬಾ ದುಡ್ಡಿದ್ದಾಗ ಮಾತ್ರ ಯಾವುದೇ ಚಾಲೆಂಜಿಗೆ ಎದೆಯೊಡ್ಡಿ ನಿಲ್ಲುವ ಧೈರ್ಯ ಬರುತ್ತದೆ. ಬೆಟ್ಟದಂಥ ಸಮಸ್ಯೆಯೊಂದು ಎದುರಾದಾಗ, ಅದೇನಾಗುತ್ತೋ ಆಗಿಬಿಡಲಿ; ಒಂದು ಕೈ ನೋಡಿಯೋ ಬಿಡೋಣ ಎನ್ನುವಂಥ ಉದ್ಗಾರ ಹೊರಬೀಳುವುದು- ದೊಡ್ಡದೊಂದು ಹಣದ ಗಂಟು ಜೊತೆಗಿದ್ದಾಗ ಮಾತ್ರ.

Advertisement

‘ಹಣದ ಗಂಟು’ ಅಂದಾಕ್ಷಣ ಹೆಚ್ಚಿನವರು -ನಾವು ಮಿಡ್ಲ್ ಕ್ಲಾಸ್‌ ಜನ ಸ್ವಾಮಿ. ನಮ್ಮ ಹತ್ರ ಹೆಚ್ಚಿನ ಹಣ ಎಲ್ಲಿಂದ ಬರಬೇಕು? ನಮಗೆ ಸಿಗುವ ಸಂಬಳವೇ ಕಡಿಮೆ. ಪ್ರತಿ ತಿಂಗಳು 20ನೇ ತಾರೀಕು ಬರುವಷ್ಟರಲ್ಲಿ ಜೇಬು ಖಾಲಿಯಾಗಿರುತ್ತೆ. ಹೀಗಿರುವಾಗ ಉಳಿತಾಯ ಮಾಡುವುದಾದರೂ ಹೇಗೆ?’ ಅಂದು ಬಿಡುತ್ತಾರೆ. ನಿಜ ಹೇಳಬೇಕೆಂದರೆ, ಉಳಿತಾಯ ಮಾಡಬೇಕು ಅಂದರೆ ಮೊದಲು ಅಗತ್ಯವಿರುವುದು ಹಣವಲ್ಲ! ನಾನು ಉಳಿತಾಯ ಮಾಡಬೇಕು ಉಳಿತಾಯ ಮಾಡಬಲ್ಲೆ ಎಂಬ ಮನಸ್ಸು.

ದುಡ್ಡಿನ ಗಿಡ ಬೆಳೆಸುವುದು ಹೇಗೆ?
ಸರಿ; ಹಣ ಜೋಡಿಸುವುದು ಹೇಗೆ? ಉಳಿತಾಯ ಮಾಡುವುದು ಹೇಗೆ? ಎಂಬ ಪ್ರಶ್ನೆಗಳಿಗೆ ಒಂದೆರಡು ಉದಾಹರಣೆಯೊಂದಿಗೆ ಮುಂದುವರಿಯೋಣ. ಒಬ್ಬ ರೈತ ಉಳಿತಾಯ ಮಾಡಲು ಅನುಸರಿಸುವ ವಿಧಾನಗಳನ್ನೇ ಇಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳೋಣ.

ಒಬ್ಬ ರೈತನಿಗೆ ಜಮೀನಿನಲ್ಲಿ ಒಂದು ಹಲಸಿನ ಮರ ಇದೆ ಅಂದುಕೊಳ್ಳಿ. ಹಲಸಿನ ಮರ ಅಂದಮೇಲೆ, ಪ್ರತಿ ವರ್ಷ ನೂರರ ಸಂಖ್ಯೆಯಲ್ಲಿ ಹಲಸಿನ ಹಣ್ಣು ಸಿಕ್ಕೇ ಸಿಗುತ್ತದೆ. ಐದಾರು ಮಂದಿಯೊಂದಿಗೆ ಬದುಕುವ ಆ ರೈತ, ಹತ್ತಿಪ್ಪತ್ತು ಹಣ್ಣುಗಳನ್ನು ಮನೆಗೆ ಇಟ್ಟುಕೊಂಡು ಉಳಿದವನ್ನು ಮಾರಾಟ ಮಾಡುತ್ತಾನೆ. ಹಲಸಿನ ಹಣ್ಣಿನ ಋತು ಮುಗಿದು ಹೋಗುವ ವೇಳೆಗೆ, ಬೇರೆ ಸಂಪಾದನೆಯಿಲ್ಲದೆ ಕೈ ಖರ್ಚಿಗೆ ಹಣ ಸಾಲುತ್ತಿಲ್ಲವೆಂದು ಅರಿವಾಗುತ್ತದೆ. ಗಮನಿಸಿದ್ದೀರಾ? ಒಂದಷ್ಟು ಹಣ ಸಂಪಾದಿಸುತ್ತದೆ.

ಹಲಸಿನ ಮರದ ಸಮೀಪದಲ್ಲೇ ಮಾವಿನ ಸಸಿ ಹಾಕಿದರೆ ಹೇಗೆ ಎಂದು ಅಥವಾ ಜಮೀನಿನಲ್ಲಿ ಬದುವಿನ ಮೇಲೆ ಪಪ್ಪಾಯದ ಗಿಡಗಳನ್ನೋ ಬೆಳೆಯಲು ರೈತರು ನಿರ್ಧರಿಸುವುದೇ ಆಗ. ಈ ಹೊಸ ಬೆಳೆಯಿಂದ ಫ‌ಲ ಮತ್ತು ಲಾಭ ದೊರೆಯಲು ಎರಡು ವರ್ಷ ತಗುಲಬಹುದು. ಆದರೆ, ಒಮ್ಮೆ ಫ‌ಲ ಸಿಗುತ್ತದೆ ಎಂದಾದರೆ, ಅದು ನಿರಂತರ ಏಳೆಂಟು ವರ್ಷ ಖಂಡಿತ ಸಿಗುತ್ತದೆ.

Advertisement

ಮತ್ತೂಂದು ಉದಾಹರಣೆ ತೆಗೆದುಕೊಳ್ಳೋಣ. ಒಬ್ಬ ಭೂಮಿಯೇ ಇಲ್ಲದ ಬಡವ ಅಂದುಕೊಳ್ಳಿ. ಬದುಕಲು ಅವನು ಹಾಲು ಮಾರುವ ಕೆಲಸ ಮಾಡುತ್ತಿರುತ್ತಾನೆ. ವರ್ಷದಲ್ಲಿ ನಾಲ್ಕು ತಿಂಗಳು ಮಾತ್ರ ಹಸು ಹಾಲು ಕೊಡುತ್ತದೆ ಅಂದಾಗ, ಅವನೇನು ಮಾಡ್ತಾನೆ ಹೇಳಿ? ಹಾಲು ಮಾರಿದ ಹಣದಲ್ಲೇ ಪೈಸೆಗೆ ಪೈಸೆ ಕೂಡಿಸಿ ( ಅದು ಸಾಕಾಗದಿದ್ದಾಗ ಸ್ವಲ್ಪ ಸಾಲ ಮಾಡಿ) ಮತ್ತೂಂದು ಹಸುವನ್ನು ತಂದು ಬಿಡುತ್ತಾನೆ. ಎರಡನೇ ಹಸು ಮನೆಗೆ ಬಂದಾಗ, ತಕ್ಷಣವೇ ಅದು ಹಾಲು ಕೊಡುತ್ತದೆ ಎಂಬ ಗ್ಯಾರಂಟಿ ಇರುವುದಿಲ್ಲ. ಮೊದಲು ಹಸುವಿನ ಆರೈಕೆ ಮಾಡಬೇಕು. ಅದಕ್ಕೆ ಒಳ್ಳೆಯ ಊಟ, ಆರೈಕೆ, ಪಶುವೈದ್ಯರಿಂದ ಚಿಕಿತ್ಸೆ ಎಂದೆಲ್ಲಾ ಓಡಾಡಬೇಕು. ಆನಂತರ ನಿರೀಕ್ಷೆ ಮೀರಿ ಲಾಭವಾಗುತ್ತದೆ. ಒಂದು ಹಸು ಹಾಲು ಕೊಡುವುದನ್ನು ನಿಲ್ಲಿಸಿದ ತಕ್ಷಣ, ಇನ್ನೊಂದು ಹಸು, ಹೆಚ್ಚುವರಿ ಸಂಪಾದನೆಯ ಹಣ ರೈತನ ಕೈ ತಪ್ಪದಂತೆ ನೋಡಿಕೊಳ್ಳುತ್ತದೆ. ಇದೇ ರೀತಿ ಮತ್ತೂಂದು ಹಸು ರೈತನ ಬಳಗ ಸೇರಿಕೊಂಡು, ವರ್ಷವಿಡೀ ಆತ ಹಾಲು ಮಾರಿಕೊಂಡೇ ಸಾವಿರ ಸಾವಿರ ಎಣಿಸುವಂಥ ಸಂಭ್ರಮ ಬರಬಹುದು. ಎರಡರಲ್ಲೂ ನಮ್ಮ ಕಣ್ಮುಂದೆ ಇದ್ದವರು ರೈತರು. ಅವರಿಗೆ ನಿಶ್ಚಿತ ಸಂಬಳವಾಗಲಿ, ನೌಕರಿಯಾಗಲಿ ಇಲ್ಲ. ಆದರೂ ಅವರು ನಿರಂತರ ಸಂಪಾದನೆಯ ದಾರಿ ಕಂಡುಕೊಂಡರಲ್ಲವಾ? ವಾಸ್ತವ ಹೀಗಿರುವಾಗ, ಸಣ್ಣದೊಂದು ಸಂಪಾದನೆಯೂ, ನೌಕರಿಯೂ ಇರುವ ಜನ ಹೇಗೆಲ್ಲಾ, ಎಷ್ಟೆಲ್ಲಾ ಹಣ ಉಳಿಸಬಹುದು ಗೊತ್ತಾ?

ಚಿಕ್ಕ ಮೊತ್ತ ಹೂಡಿರಿ
ಎಷ್ಟೇ ಸಣ್ಣ ಉದ್ಯೋಗವಿದ್ದರೂ ಆರಂಭದಲ್ಲಿ, ತಿಂಗಳಿಗೆ ಕೇವಲ 500 ರೂ. ಉಳಿಸಬಹುದು ಅಂದುಕೊಂಡೇ ಈ ಕೆಲಸ ಆರಂಭಿಸಿ. ಪ್ರತಿ ತಿಂಗಳೂ ತಪ್ಪಿಸದೇ 500 ರೂಪಾಯಿ ಕಟ್ಟಿ ಹತ್ತು ತಿಂಗಳು ಕಳೆಯುತ್ತಿದ್ದಂತೆಯೇ, ಹನ್ನೊಂದನೇ ತಿಂಗಳಿಂದ ಮತ್ತೂಂದು ಉಳಿತಾಯ ಯೋಜನೆ ಆರಂಭಿಸಿ. ಅಂದರೆ, ಹನ್ನೊಂದನೇ ತಿಂಗಳು ಹಳೆಯದು ಮತ್ತು ಹೊಸದು, ಎರಡೂ ಸೇರಿ 500+500 ರೂಪಾಯಿ ಕಟ್ಟಬೇಕಾಗುತ್ತದೆ. 12ನೇ ತಿಂಗಳು, ಒಂದು ಉಳಿತಾಯದ ಅವಧಿ ಮುಗಿದು, ಚಿಕ್ಕದೊಂದು ಇಡಿಗಂಟೂ ಕೈ ಸೇರುತ್ತದಲ್ಲ; ಆಗ, ಸೇವಿಂಗ್ಸ್‌ ಸ್ಕೀಮ್‌ಗೆ ಹಣ ಕಟ್ಟಿದ್ದಕ್ಕೆ ಮನಸ್ಸು ಖುಷಿ ಪಡುತ್ತದೆ.

ಶ್ರೀಧರ್‌

Advertisement

Udayavani is now on Telegram. Click here to join our channel and stay updated with the latest news.

Next