Advertisement

ಶಿಥಿಲಾವಸ್ಥೆಗೆ ಸವಣೂರು ಗ್ರಂಥಾಲಯ

04:05 PM Nov 03, 2019 | Suhan S |

ಸವಣೂರು: ಪಟ್ಟಣದ ಓದಾಸಕ್ತರು ಹಾಗೂ ಶಿಕ್ಷಣಪ್ರಿಯರಾದ ಡಾ| ಎಮ್‌.ಆರ್‌.ರಿಸಾಲ್ದಾರ, ಎಸ್‌.ವಾಯ್‌.ಕಲಾಲ, ಶ್ರೀಕಾಂತ ಪಡಸಲಗಿ, ಎ.ಎ.ಕೊಯ್ತೆವಾಲೆ, ಜಯತೀರ್ಥ ದೇಶಪಾಂಡೆ ಮುಂತಾದವರ ಹೋರಾಟ ಫಲವಾಗಿ 1986ರಲ್ಲಿ ಪುರಸಭೆಗೆ ಸೇರಿದ ಜನತಾ ಬಜಾರ ಕಟ್ಟಡದಲ್ಲಿ ಆರಂಭಿಸಿದ ಗ್ರಂಥಾಲಯ, ನಂತರ 1990ರಲ್ಲಿ ಮಿನಿ ವಿಧಾನಸೌಧದ ಹೊಸ ಕಟ್ಟಡ ನಿರ್ಮಿಸಿ ಸ್ಥಳಾಂತರಗೊಂಡಿದೆ.

Advertisement

ಆದರೆ ಇತ್ತೀಚಿನ ದಿನಗಳಲ್ಲಿ ಈ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ಓದುಗರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪುಸ್ತಕಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜತೆಗೆ ಓದುಗರ ಸಂಖ್ಯೆಯೂ ವೃದ್ಧಿಯಾಗುತ್ತಿದೆ. ಅನೇಕ ಪ್ರಸಿದ್ಧ ಸಾಹಿತಿಗಳ, ಲೇಖಕರ ಕಥಾ ಸಂಗ್ರಹಗಳು, ಕವನ ಸಂಕಲನಗಳು, ವಿಶ್ಲೇಷಣಾತ್ಮಕ, ವಿಮಶಾತ್ಮಕ ಗ್ರಂಥಗಳು, ಕಥೆ-ಕಾದಂಬರಿಗಳು, ಧಾರ್ಮಿಕ ಗ್ರಂಥಗಳು ಸೇರಿದಂತೆ ಕನ್ನಡ, ಹಿಂದಿ, ಇಂಗ್ಲಿಷ್‌, ಉರ್ದು ಸೇರಿ ಸುಮಾರು 16,000 ಪುಸ್ತಕಗಳ ಸಂಗ್ರಹ ಗ್ರಂಥಾಲಯದಲ್ಲಿದೆ.

ನೆಲದ ಮೇಲೆಯೇ ಇಡಲಾಗುತ್ತಿದೆ ಪುಸ್ತಕ: ಪ್ರತಿ ವರ್ಷವೂ ಜಿಲ್ಲಾ ಗ್ರಂಥಾಲಯ ಇಲಾಖೆಯಿಂದ ಹೊಸ ಪುಸ್ತಕಗಳು ಬರುತ್ತವೆ. ಗ್ರಂಥಾಲಯದಲ್ಲಿ ಓದುಗರಿಗೆ ಕುರ್ಚಿ ಮೇಜುಗಳ ಸೌಲಭ್ಯ ಚೆನ್ನಾಗಿದೆ. ಆದರೆ, ಪುಸ್ತಕಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಕಟ್ಟಡದಲ್ಲಿ ಸ್ಥಳಾವಕಾಶ ಕೊರತೆಯಾಗುತ್ತಿದೆ. ಜೋಡಣೆಗೆ ಸ್ಥಳವಿಲ್ಲದೇ ನೂರಾರು ಪುಸ್ತಕಗಳನ್ನು ನೆಲದ ಮೇಲೆಯೇ ಇಡಲಾಗಿದೆ. ಪುಸ್ತಕಗಳನ್ನು ಜೋಡಿಸಿಟ್ಟ ಕೊಠಡಿ ಇಕ್ಕಟ್ಟಾಗಿದ್ದು, ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಲು ಓದುಗರಿಗೆ ಕಷ್ಟ ಪಡುವಂತಾಗಿದೆ.

ಓದುಗರ ಸಂಖ್ಯೆ ಹೆಚ್ಚುತ್ತಿದೆ: ಪತ್ರಿಕೆ, ಮ್ಯಾಗಜಿನ್‌ ಹಾಗೂ ಪುಸ್ತಕಗಳನ್ನು ಓದಲು ನಿತ್ಯವೂ ಸುಮಾರು 80ಕ್ಕೂ ಹೆಚ್ಚು ಓದುಗರು ಭೇಟಿ ನಿಡುತ್ತಾರೆ. ಸದಸ್ಯತ್ವ ಪಡೆದ ಓದುಗರಿಗೆ 15 ದಿನಗಳವರೆಗೆ ಪುಸ್ತಕಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಯುವಕರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ನೀರು-ಶೌಚಾಲಯ ವ್ಯವಸ್ಥೆಯಾಗಬೇಕು:

ಗ್ರಂಥಾಲಯಕ್ಕೆ ಬರುವ ಸದಸ್ಯತ್ವ ಹೊಂದಿದ ಓದುಗರಿಗೆ ಶೌಚಾಲಯ ಹಾಗೂ ನೀರಿನ ಸೌಕರ್ಯ ಕಲ್ಪಿಸುವ ವ್ಯವಸ್ಥೆ ಕೈಗೊಳ್ಳಬೇಕಾಗಿದೆ. ಓದುಗರ ಸಂಖ್ಯೆ ಶೇ.15 ಹೆಚ್ಚಿದ್ದು,ಗ್ರಂಥಾಲಯಕ್ಕೆ ಒಟ್ಟು ನಾಲ್ಕು ಜನರ ಅವಶ್ಯಕತೆಯಿದೆ. ಸದ್ಯ ಗ್ರಂಥಾಲಯದ ಸಹವರ್ತಿ ಜಿಲಾರಿಸಾಬ ಕಳಸದ ಹಾಗೂ ಶುಚಿಗಾರ ಚಂದ್ರಶೇಖರ ರಾಶಿನಕರ ಇಬ್ಬರೇ ಕೆಲಸ ನಿರ್ವಹಿಸುತ್ತಿದ್ದಾರೆ.

Advertisement

ಶಿಥಿಲಗೊಂಡ ಕಟ್ಟಡ ನೆಲಸಮಗೊಳಿಸಿ ವಿಶಾಲವಾದ ನೂತನ ಕಟ್ಟಡ ನಿರ್ಮಿಸಿ ಗ್ರಂಥಾಲಯಕ್ಕೆ ಬರುವ ಸದಸ್ಯತ್ವ ಹೊಂದಿದ ಓದುಗರಿಗೆ ಕುಡಿಯುವ ನೀರು ಹಾಗೂ ಶೌಚಾಲಯದಂತಹ ಸೌಕರ್ಯ ಕಲ್ಪಿಸಿಕೊಡಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

1996ರಿಂದ 98ರವರೆಗೆ ನನ್ನ ಅಧ್ಯಕ್ಷತೆಯಲ್ಲಿ ಹಜರೆಸಾಬ ನದಾಫ, ಮಂಜುನಾಥ ವೇರ್ಣೆಕರ, ಬಾಹುದ್ದೀನ ಇನಾಮದಾರ, ಬಸವರಾಜ ಮಠಪತಿ ಸೇರಿದಂತೆ ಸಾಹಿತ್ಯಾಸಕ್ತ ಓದುಗರು, ಯುವಕರು ಗೆಳೆಯರ ಬಳಗ ಎನ್ನುವ ಸಂಘ ಕಟ್ಟಿ ಪ್ರತಿ ಸೋಮವಾರ ಕವಿಗೋಷ್ಠಿ ನಡೆಸುವ ಮೂಲಕ ಓದುಗರಲ್ಲಿ ಆಸಕ್ತಿ ಮೂಡಿಸುತ್ತಿದ್ದೆವು. ಆದರೆ. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಪುಸ್ತಕಗಳ ಕುರಿತು ಆಸಕ್ತಿ ಕಡಿಮೆಯಾಗುತ್ತಿದ್ದು, ಓದುಗರಿಲ್ಲದೇ ಗ್ರಂಥಾಲವು ಸೊರಗುತ್ತಿದೆ. ಅನೇಕ ಸಾಹಿತ್ಯಿಕ,ಆಧ್ಯಾತ್ಮಿಕ ಪುಸ್ತಕಗಳು ಮೂಲೆಸೇರುವಂತಾಗಿರುವುದು ವಿಷಾದನೀಯ.  –ಜಯತೀರ್ಥ ದೇಶಪಾಂಡೆ, ಹಿರಿಯ ಪರ್ತಕರ್ತ

 

-ರಾಜಶೇಖರ ಗುರುಸ್ವಾಮಿಮಠ

Advertisement

Udayavani is now on Telegram. Click here to join our channel and stay updated with the latest news.

Next