ಸಾವಳಗಿ: ಹಿರೇಪಡಸಲಗಿ ಗ್ರಂಥಾಲಯ ಅವ್ಯವಸ್ಥೆ ಆಗರಗಳಿಂದ ಕೂಡಿದ್ದು, ಓದುಗರು ಪರದಾಡುವಂತಾಗಿದೆ. ಗ್ರಂಥಾಲಯ ನೆಪಕ್ಕಷ್ಟೇ ಇದ್ದಂತೆ ಕಾಣುತ್ತಿದೆ. ಚಿಕ್ಕದಾದ ಕಟ್ಟಡ ಹೊಂದಿರುವ ಗ್ರಂಥಾಲಯ ಮೂಲಸೌಲಭ್ಯಗಳ ಕೊರತೆ ಎದುರಿಸುತ್ತಿದೆ. ಗ್ರಾಮದ ಓದುಗರ ಜ್ಞಾನದಾಹ ತಣಿಸುವ ಸಲುವಾಗಿ ಸ್ಥಾಪನೆಯಾಗಿದ್ದು, ಅಗತ್ಯ ಸೌಲಭ್ಯ ಒದಗಿಸುವ ವಿಚಾರದಲ್ಲಿ ಕಾಳಜಿ ತೋರದ ಕಾರಣ ಗ್ರಾಮದಲ್ಲಿ ಹೆಸರಿಗಷ್ಟೆ ಗ್ರಾಮ ಪಂಚಾಯತ ಗ್ರಂಥಾಲಯವಾಗಿದೆ.
ಹಿರೇಪಡಸಲಗಿ ಗ್ರಾಮದಲ್ಲಿ ಸುಮಾರು 12000 ಜನಸಂಖ್ಯೆಯಿದೆ. 20ವರ್ಷಗಳ ಹಿಂದೆ ಗ್ರಂಥಾಲಯ ಆರಂಭಗೊಂಡಿದೆ. ಆದರೆ, ಇಲ್ಲಿಯವರೆಗೂ ಸದಸ್ಯತ್ವ ಪಡೆದ ಸಂಖ್ಯೆ ಕೇವಲ 80 ಮಾತ್ರ. ಸಾರ್ವಜನಿಕರ ಜ್ಞಾನಾರ್ಜನೆಗಾಗಿ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಸ್ಥಾಪನೆಯಾದ ಗ್ರಂಥಾಲಯ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಅದರ ಉದ್ದೇಶ ಈಡೇರುತ್ತಿಲ್ಲ.
ಸ್ಪರ್ಧಾತ್ಮಕ ಪುಸ್ತಕಗಳ ಕೊರತೆ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಅಂಕ ಗಳಿಸಿದವರಿಗೆ ನೇಮಕಾತಿಯಲ್ಲಿ ಅವಕಾಶ ಸಿಗುತ್ತಿರುವುದರಿಂದ ವಿದ್ಯಾರ್ಥಿ ಸಮುದಾಯ ಸ್ಪರ್ಧಾತ್ಮಕ ಪುಸ್ತಕಗಳಿಗೆ ಹೆಚ್ಚಿನ ಬೇಡಿಕೆಯಿದೆ. ಆದರೆ, ಸ್ಪರ್ಧಾತ್ಮಕ ಪುಸ್ತಕಗಳು ಗ್ರಂಥಾಲಯದಲ್ಲಿಲ್ಲ.
ಸೌಲಭ್ಯಗಳ ಕೊರತೆ: ಗ್ರಂಥಾಲಯ ಕಾರ್ಯನಿರ್ವಹಿಸುವ ಕಟ್ಟಡದಲ್ಲಿ ಸರಿಯಾದ ಗಾಳಿ- ಬೆಳಕಿನ ವ್ಯವಸ್ಥೆ ಇಲ್ಲ, ಕೂರಲು ಟೇಬಲ್ ಖುರ್ಚಿ ವ್ಯವಸ್ಥೆಯಿಲ್ಲ, ಗ್ರಂಥಾಲಯದಲ್ಲಿ ಕೆಲವೇ ಮಂದಿ ರಚಿಸಿರುವ ಸಾಧಕರ ಕುರಿತ ಪುಸ್ತಕಗಳ ಸಂಗ್ರಹವಿದೆ. ಅಲ್ಲದೇ ದಿನಪತ್ರಿಕೆಗಳ
ಪೂರೈಕೆಯೂ ಕೇವಲ ಒಂದು ಎರಡು ಮಾತ್ರ. ವಾರಪತ್ರಿಕೆ, ಮಾಸಪತ್ರಿಕೆ, ಸಾಹಿತ್ಯಕ್ಕೆ ಸಂಬಂಧಪಟ್ಟ ಪುಸ್ತಕಗಳೂ ಸಿಗುತ್ತಿಲ್ಲ ಎಂಬುದು ಗ್ರಾಮಸ್ಥರ ದೂರು.