Advertisement

ಧಾರಾಕಾರ ಮಳೆ : ಸವದತ್ತಿ ಯಲ್ಲಮ್ಮನ ದೇವಸ್ಥಾನದ ಆವರಣದೊಳಗೆ ನುಗ್ಗಿದ ನೀರು, ಭಕ್ತರ ಪರದಾಟ

09:37 PM Jun 16, 2022 | Team Udayavani |

ಬೆಳಗಾವಿ : ಏಳುಕೊಳ್ಳದ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಗುರುವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆಯಿಂದ ದೇವಸ್ಥಾನ ಪೌಳಿ(ಆವರಣ)ಗೆ ನುಗ್ಗಿದ ನೀರಿನಿಂದ ಭಕ್ತರು ಹಾಗೂ ಸಿಬ್ಬಂದಿ ಪರದಾಡುವಂತಾಯಿತು.

Advertisement

ರಭಸದ ಮಳೆಗೆ ಸವದತ್ತಿ ಯಲ್ಲಮ್ಮನ ದೇವಸ್ಥಾನದಲ್ಲಿ ನೀರು ಧಾರಾಕಾರವಾಗಿ ಹರಿದು ಬಂದಿತು. ಸುಮಾರು ಒಂದೂವರೆ ತಾಸಿಗೂ ಹೆಚ್ಚು ಹೊತ್ತು ಮಳೆ ಬಂದಿದ್ದರಿಂದ ಎಣ್ಣೆ ಹೊಂಡದಲ್ಲಿ ನೀರು ಮೊಣಕಾಲು ವರೆಗೂ ಹರಿದು ಬಂದು ಭಕ್ತರು ಆತಂಕಕ್ಕೀಡಾದರು.

ಗುಡ್ಡದಿಂದ ಏಕಾಏಕಿ ನೀರು ಬಂದಿದ್ದರಿಂದ ದೇವಸ್ಥಾನ ಮೆಟ್ಟಿಲುಗಳ ಮೇಲೆ ಜಲಪಾತದಂತೆ ನೀರು ಹರಿದು ಬಂದು ಭಕ್ತರು ಚೆಲ್ಲಾಪಿಲ್ಲಿಯಾದರು. ದರ್ಶನ ಪಡೆಯಲು ಭಕ್ತರು ಪರದಾಡಬೇಕಾಯಿತು. ಗುರುವಾರ ಭಕ್ತರ ಸಂಖ್ಯೆ ಕಡಿಮೆ ಇದ್ದಿದ್ದರಿಂದ ಜನದಟ್ಟಣೆ ಇರಲಿಲ್ಲ.

ದೇವಸ್ಥಾನದ ಒಳಗೆ ಹೋಗುವ ಪ್ರವೇಶ ದ್ವಾರದ ಹೊರ ಭಾಗದಲ್ಲಿ ಇತ್ತೀಚೆಗೆ ನಿರ್ಮಿಸಿರುವ ಸರದಿ ಸಾಲಿನ ಬ್ಯಾರಿಕೇಡ್ ಬಳಿಯೂ ನೀರು ಹೆಚ್ಚಾಗಿ ಬಂದಿತ್ತು. ಎಣ್ಣೆ ಹೊಂಡದ ಸುತ್ತ ನೀರು ಹರಿದು ಬರುತ್ತಿರುವ ದೃಶ್ಯ ನೋಡಿದರೆ ಮೈ ಜುಮ್ಮೆನ್ನುವಂತಿತ್ತು.

ಇದನ್ನೂ ಓದಿ : ದೇವನಹಳ್ಳಿ ಸಾವಿರಾರು ರೈತ ನಿಯೋಗದಿಂದ ಸಚಿವ ಮುರುಗೇಶ್ ನಿರಾಣಿ ಭೇಟಿ

Advertisement

ದೇವಸ್ಥಾನ ಆವರಣದಲ್ಲಿರುವ ಕೆಲವು ಡ್ರೈನೆಜ್‌ಗಳು ಬ್ಲಾಕ್ ಆಗಿದ್ದರಿಂದ ಮಳೆ ನೀರು ಹರಿಯಲು ಜಾಗ ಇರಲಿಲ್ಲ. ಪ್ಲಾಸ್ಟಿಕ್ ಸೇರಿದಂತೆ ಇತರೆ ತ್ಯಾಜ್ಯ ವಸ್ತುಗಳಿಂದ ಬ್ಲಾಕ್ ಆಗಿತ್ತು. ಹೀಗಾಗಿ ನೀರು ದೇವಸ್ಥಾನ ಪೌಳಿಯೊಳಗೆ ಹರಿದು ಬಂತು, ಕೂಡಲೇ ಸಿಬ್ಬಂದಿ ಆ ನೀರನ್ನು ಒಳಗಿನ ಡ್ರೈನೇಜ್‌ಗಳ ಮೂಲಕ ಹರಿದು ಹೋಗುವಂತೆ ವ್ಯವಸ್ಥೆ ಮಾಡಿದ್ದರಿಂದ ಯಾವುದೇ ಸಮಸ್ಯೆ ಆಗಲಿಲ್ಲ. ಸುಮಾರು ಒಂದೂವರೆ ತಾಸಿಗೂ ಹೆಚ್ಚು ಹೊತ್ತು ಮಳೆ ಆಯಿತು. ಮಳೆ ಕಡಿಮೆ ಆಗುತ್ತಿದ್ದಂತೆ ನೀರಿನ ರಭಸ ತುಸು ಇಳಿಕೆ ಆಯಿತು ಎಂದು ಸವದತ್ತಿ ಯಲ್ಲಮ್ಮ ದೇವಸ್ಥಾನ ಅಧೀಕ್ಷಕ ಅರವಿಂದ ಮಾಳಗೆ ಉದಯವಾಣಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next