ಸವದತ್ತಿ: ಸಪ್ತ ಕೊಳ್ಳದ ಅಧಿದೇವತೆ ರೇಣುಕಾ ಯಲ್ಲಮ್ಮಳ ಸನ್ನಿಧಾನದಲ್ಲಿ ರವಿವಾರ ಜರುಗಿದ ಭರತ ಹುಣ್ಣಿಮೆ ಜಾತ್ರೆಗೆ ಜನಸಾಗರವೇ ಹರಿದು ಬಂದಿತ್ತು. ಕರ್ನಾಟಕ ಮಾತ್ರವಲ್ಲ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ಗೋವಾ ಸೇರಿ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಸಂಖ್ಯೆಯ ಭಕ್ತರು ಕಾಲ್ನಡಿಗೆ, ಚಕ್ಕಡಿ, ಟ್ರ್ಯಾಕ್ಟರ್ ಹಾಗೂ ಇತರೆ ವಾಹನಗಳ ಮೂಲಕ ಗುಡ್ಡಕ್ಕೆ ಆಗಮಿಸಿ ದೇವಿ ಕೃಪೆಗೆ ಪಾತ್ರರಾದರು.
ಕಣ್ಣು ಹಾಯಿಸಿದ ಕಡೆಯೆಲ್ಲ ಜನ ಸಮೂಹ. ಉಧೋ ಉಧೋ ಯಲ್ಲಮ್ಮ ನಿನ್ನಾಲ್ಕುಧೋ ಎಂಬ ದೇವಿಯ ನಾಮಸ್ಮರಣೆ ದಶ ದಿಕ್ಕುಗಳಲ್ಲಿ ಪ್ರತಿಧ್ವನಿಸಿತು. ಭಕ್ತ ಸಮೂಹ ಕುಟುಂಬ ಸಮೇತರಾಗಿ ಅಮ್ಮನ ಸನ್ನಿ ಧಿಗೆ ಬಂದು ವಿವಿಧ ಖಾದ್ಯ ತಯಾರಿಸಿ ನೈವೇದ್ಯ ಮತ್ತು ಪರಡಿ ತುಂಬಿಸಿದರು. ಸಂಪ್ರದಾಯದಂತೆ ಪೂಜಾದಿ ಕೈಂಕರ್ಯ ನಡೆಸಿ ಜಗವನ್ನು ರಕ್ಷಿಸಮ್ಮಾ ಜಗದಮ್ಮಾ ಎಂದು ಬೇಡಿಕೊಂಡರು.
ಬೆಳಿಗ್ಗೆ ಜೋಗುಳಬಾವಿ, ಎಣ್ಣೆ ಹೊಂಡದಲ್ಲಿ ಪವಿತ್ರ ಸ್ನಾನಗೈದ ಭಕ್ತರು ಬಳಿಕ ದೇವಿ ದರ್ಶನ ಪಡೆದು ಪುನೀತರಾದರು. ಜೋಗುತಿಯರು ದೇವಿಯ ಮೂರ್ತಿ ಹೊತ್ತು, ವಿವಿಧ ವಾದ್ಯಮೇಳಗಳೊಂದಿಗೆ ದೇವಸ್ಥಾನದತ್ತ ಹೆಜ್ಜೆ ಹಾಕಿದ್ದರು. ಭಂಡಾರ ಹಚ್ಚಿಕೊಂಡು, ಹರಕೆ ತೀರಿಸುವ ಕಾರ್ಯಗಳು ಭರದಿಂದ ಸಾಗಿದ್ದವು.
ಕುಂಕುಮ-ಭಂಡಾರ ವ್ಯಾಪಾರ ಬಲು ಜೋರು
ಅಮ್ಮನಿಗೆ ಪ್ರಿಯವೆನಿಸಿದ ಕುಂಕುಮ-ಭಂಡಾರ ವ್ಯಾಪಾರ ಬಲು ಜೋರಾಗಿತ್ತು. ದೇವಸ್ಥಾನ ಸುತ್ತಲಿರುವ ಕುಂಕುಮ-ಭಂಡಾರದ ಅಂಗಡಿಗಳಿಗೆ ಮುಗಿ ಬಿದ್ದು ಖರೀದಿ ನಡೆಸಿದರು. ಯಲ್ಲಮ್ಮ ದೇವಿ ಮುತ್ತೈದೆಯಾದ ಪೌರಾಣಿಕ ಹಿನ್ನೆಲೆಯಲ್ಲಿ ಭಕ್ತರು ಹಳೆ ಪರಡಿ ಬದಲಾಯಿಸಿ ಹೊಸ ಪರಡಿ, ಹಣ್ಣು, ಕಾಯಿ, ಬಳೆ, ಕುಂಕುಮ-ಭಂಡಾರ ಖರೀದಿಸಿ ಪರಡಿ ತುಂಬಿಸುವ ಕಾರ್ಯ ನಡೆಸಿದರು.
Related Articles
ಸದ್ದು ಮಾಡಿದ ಹಸಿರು ಬಳೆಗಳು
ಮುತ್ತೈದೆ ಹುಣ್ಣಿಮೆಯೆಂದು ಕರೆಯುವ ಭರತ ಹುಣ್ಣಿಮೆಯಂದು ಯಲ್ಲಮ್ಮ ದೇವಿ ಪತಿ, ಋಷಿ ಜಮದಗ್ನಿ ಮರುಜನ್ಮ ಪಡೆಯುತ್ತಾರೆ. ಇದರ ಪ್ರತೀಕವಾಗಿ ಪ್ರತಿವರ್ಷ ಭರತ ಹುಣ್ಣಿಮೆ ದಿನ ಎಲ್ಲ ಮುತ್ತೈದೆಯರು ದೇವಸ್ಥಾನಕ್ಕೆ ಬಂದು ಮೊದಲಿದ್ದ ಬಳೆಗಳನ್ನು ತೆಗೆಸಿ, ಹೊಸ ಹಸಿರು ಬಳೆಗಳನ್ನು ಧರಿಸುವ ವಾಡಿಕೆ ಇದೆ. ಹೀಗಾಗಿ ಗುಡ್ಡದಲ್ಲಿ ಹಸಿರು ಬಳೆಗಳ ವ್ಯಾಪಾರ ಭಾರೀ ಸದ್ದು ಮಾಡಿತು.