ರಿಯಾದ್: ಸೌದಿ ಅರೇಬಿಯಾದ ಹೆಣ್ಣುಮಕ್ಕಳು ಈ ಹಿಂದೆ ಊಹಿಸಲೂ ಅಸಾಧ್ಯವಾಗಿದ್ದಂತಹ ಕ್ಷೇತ್ರಗಳಲ್ಲಿ ಈಗ ಮಿಂಚತೊಡಗಿದ್ದಾರೆ.
ಕಳೆದ ಕೆಲವು ವರ್ಷಗಳಿಂದೀಚೆಗೆ ಬದಲಾವಣೆಯ ಹಾದಿಯಲ್ಲಿ ಸಾಗುತ್ತಿರುವ ಖಟ್ಟರ್ ಸಂಪ್ರದಾಯವಾದಿ ದೇಶ ಸೌದಿ ಅರೇಬಿಯಾದಲ್ಲಿ ಈಗ ಮಹಿಳಾ ಡಿಜೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ.
ಕುತ್ತಿಗೆಗೊಂದು ಹೆಡ್‌ಫೋನ್ ಹಾಕಿಕೊಂಡು, ಕಂಟ್ರೋಲ್ ಟವರ್‌ನ ಹಿಂದೆ ನಿಂತು ಪಾಪ್ ಹಿಟ್‌ಗಳು, ಕ್ಲಬ್ ಟ್ರ್ಯಾಕ್‌ಗಳ ಮೂಲಕ ನೆರೆದವರನ್ನು ಮನರಂಜಿಸುವ ಕೆಲಸವನ್ನು ಮಹಿಳೆಯರು ಆಸಕ್ತಿಯಿಂದ ಮಾಡುತ್ತಿದ್ದಾರೆ. ಈ ಪೈಕಿ 26 ವರ್ಷದ ಸೌದಿ ಡಿಜೆ ಲೀನ್ ನೈಫ್ ಈಗಾಗಲೇ ಜೆಡ್ಡಾದಲ್ಲಿ ಫಾರ್ಮುಲಾ 1 ಗ್ರಾನ್ ಪ್ರಿ, ದುಬೈ ಎಕ್ಸ್‌ಪೋ 2020 ಮುಂತಾದ ಹೈಪ್ರೊಫೈಲ್ ವೇದಿಕೆಗಳಲ್ಲಿ ಕಾಣಿಸಿಕೊಂಡು ಮನೆ ಮಾತಾಗಿದ್ದಾರೆ.
“ಇದೊಂದು ಮಹತ್ವದ ಮೈಲುಗಲ್ಲು. ಕೆಲವೇ ಕೆಲವು ವರ್ಷಗಳ ಹಿಂದೆ ಮಹಿಳಾ ಡಿಜೆಗಳು ಎಂಬುದನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯವಾಗಿತ್ತು. ಆದರೆ, ಈಗ ಪ್ರಮುಖ ನಗರಗಳಲ್ಲಿ ಸಾಕಷ್ಟು ಸಂಖ್ಯೆಯ ಮಹಿಳಾ ಡಿಜೆಗಳು ಕಾಣಿಸಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಡಿಜೆ ಲೀನ್ ನೈಫ್.
ಲೀನ್ ಆದಾಯವೆಷ್ಟು ಗೊತ್ತಾ?:
ದುಬೈ ಎಕ್ಸ್‌ಪೋದ ಸೌದಿ ಪೆವಿಲಿಯನ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದ್ದರಿಂದ ನನಗೆ ಇದೇ ಮೊದಲ ಬಾರಿಗೆ ಸಾಕಷ್ಟು ಅಂತಾರಾಷ್ಟ್ರೀಯ ಪ್ರೇಕ್ಷಕರು ಲಭ್ಯವಾದರು. ಪ್ರಸ್ತುತ ನಾನು ಗಂಟೆಗೆ 21 ಸಾವಿರ ರೂ. (1,000 ಸೌದಿ ರಿಯಲ್ಸ್) ಆದಾಯ ಗಳಿಸುತ್ತಿದ್ದೇನೆ ಎಂದೂ ಲೀನ್ ಹೇಳಿದ್ದಾರೆ.